ಖಾಸಗಿ ದರ್ಬಾರ್‌ಗೆ ಭಾರೀ ಭದ್ರತೆ ನಡುವೆ ಶಾಸ್ತ್ರೋಕ್ತ ಸಿಂಹಾಸನ ಜೋಡಣೆ
ಮೈಸೂರು

ಖಾಸಗಿ ದರ್ಬಾರ್‌ಗೆ ಭಾರೀ ಭದ್ರತೆ ನಡುವೆ ಶಾಸ್ತ್ರೋಕ್ತ ಸಿಂಹಾಸನ ಜೋಡಣೆ

October 5, 2018

ಮೈಸೂರು: ನಾಡ ಹಬ್ಬ ದಸರಾ ಮಹೋತ್ಸವದ ಪ್ರಮುಖ ಆಚರಣೆ ಖಾಸಗಿ ದರ್ಬಾರ್ ಅ.10ರಿಂದ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಗುರುವಾರ ಬಿಗಿ ಭದ್ರತೆಯಲ್ಲಿ ಅರಮನೆ ನೆಲಮಾಳಿಗೆಯ ಭದ್ರತಾ ಕೊಠಡಿಯಿಂದ ರತ್ನ ಖಚಿತ ಸಿಂಹಾಸನವನ್ನು ದರ್ಬಾರ್ ಹಾಲ್‍ಗೆ ತಂದು ಜೋಡಿಸಲಾಯಿತು.

ಯದುವಂಶ ಪರಂಪರೆಗಳಲ್ಲಿ ಖಾಸಗಿ ದರ್ಬಾರ್ ಒಂದಾಗಿದ್ದು, ನವರಾತ್ರಿಯ ವೇಳೆ ಹಲವು ಕಟ್ಟುಪಾಡುಗಳೊಂದಿಗೆ ಒಂಭತ್ತು ದಿನವೂ ದಿನಕ್ಕೆ ಎರಡು ಬಾರಿ ಖಾಸಗಿ ದರ್ಬಾರ್ ನಡೆಯಲಿದೆ. ಶತಮಾನದ ಇತಿಹಾಸವಿರುವ ಚಿನ್ನದ ಸಿಂಹಾಸನದ ಮೇಲೆ ರಾಜರು ಆಸೀನರಾಗಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳನ್ನು ಪೂರೈಸ ಲಿದ್ದಾರೆ. ಅದಕ್ಕೆ ಪೂರಕವಾಗಿ ಇಂದು ಬೆಳಿಗ್ಗೆ ದರ್ಬಾರ್ ಹಾಲ್‍ನಲ್ಲಿ ಸಿಂಹಾಸನ ಜೋಡಣಾ ಕಾರ್ಯ ನಡೆಯಿತು.

ಹೋಮ ಹವನಗಳು: ದರ್ಬಾರ್ ಹಾಲ್‍ನಲ್ಲಿ ಸಿಂಹಾಸನ ಜೋಡಣೆಯ ಹಿನ್ನೆಲೆಯಲ್ಲಿ ಇಂದು
ಬೆಳಿಗ್ಗೆ 7.45ರಿಂದ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ಅರಮನೆಯ ಪುರೋಹಿತರಾದ ಶ್ರೀಹರಿ, ಕುಮಾರ್ ಹಾಗೂ ಶ್ಯಾಮ್ ದೀಕ್ಷಿತ್ ಅವರಿಂದ ಗಣಪತಿ ಹೋಮ, ಚಾಮುಂಡಿ ಪೂಜೆ, ಶಾಂತಿ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ನಂತರ ಪೂರ್ಣಾಹುತಿ ವೇಳೆಗೆ ದರ್ಬಾರ್ ಹಾಲ್‍ಗೆ ಪ್ರಮೋದಾದೇವಿ ಒಡೆಯರ್ ಅವರು ಆಗಮಿಸಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪೂರ್ಣಾಹುತಿ ನೆರವೇರಿದ ಬಳಿಕ ಧಾರ್ಮಿಕ ಕಾರ್ಯಗಳು ಕೊನೆಗೊಂಡವು.

ಜೋಡಣೆ ಆರಂಭ: ಬಳಿಕ ಸಂಪ್ರದಾಯದಂತೆ ಆಗಮಿಸಿದ್ದ ನಂಜನಗೂಡು ತಾಲೂಕಿನ ಗೆಜ್ಜಗಳ್ಳಿ ಗ್ರಾಮದ ಇಬ್ಬರು ಸೇರಿದಂತೆ ಅರಮನೆಯ 14 ಸಿಬ್ಬಂದಿ, ಶಸ್ತ್ರಸಜ್ಜಿತ ಪೊಲೀಸರ ಬಿಗಿ ಬಂದೋಬಸ್ತ್‍ನಲ್ಲಿ ಭದ್ರತಾ ಕೊಠಡಿಯಲ್ಲಿರುವ ಸಿಂಹಾಸನದ ಬಿಡಿ ಭಾಗಗಳನ್ನು ದರ್ಬಾರ್ ಹಾಲ್‍ಗೆ ತಂದಿತ್ತರು. ಬೆಳಿಗ್ಗೆ 8.55ರಿಂದ 9.10ರೊಳಗೆ ಸಲ್ಲುವ ಶುಭ ಲಗ್ನದಲ್ಲಿ ದರ್ಬಾರ್ ಹಾಲ್ ಸಿಂಹಾಸನ ಹಾಗೂ ಕನ್ನಡಿ ತೊಟ್ಟಿಯಲ್ಲಿ ಭದ್ರಾಸನ ಜೋಡಿಸಲಾಯಿತು. ಸಿಂಹಾಸನವನ್ನು 8 ಬಿಡಿ ಭಾಗಗಳಾಗಿ ವಿಂಗಡಿಸಿ ಇಡಲಾಗಿದ್ದು, ಭದ್ರತೆಯಲ್ಲಿ ತಂದು ಜೋಡಣೆ ಮಾಡಲಾಯಿತು. ಆರು ಬಿಡಿಭಾಗಗಳಾಗಿ ವಿಂಗಡಿಸಲಾಗಿದ್ದ ಬೆಳ್ಳಿಯ ಭದ್ರಾಸನವನ್ನು ಕನ್ನಡಿ ತೊಟ್ಟಿಯಲ್ಲಿ ಜೋಡಿಸಲಾಯಿತು.

ಪಟ್ಟದ ಆನೆ, ಹಸು ಆಗಮನ: ಸಿಂಹಾಸನದ ಜೋಡಣೆಯ ಬಳಿಕ ಬೆಳಿಗ್ಗೆ 10.45ರಿಂದ 11.10ರ ನಡುವೆ ಪಟ್ಟದ ಆನೆ, ಕುದುರೆ, ಹಸುಗಳನ್ನು ಕಲ್ಯಾಣ ಮಂಟಪದ ಸಮೀಪವಿರುವ ಅಂಗಳಕ್ಕೆ ಕರೆತಂದು ಪೂಜಿಸಲಾಯಿತು.

ಬಿಗಿ ಭದ್ರತೆ: ಸಿಂಹಾಸನ ಹಾಗೂ ಭದ್ರಾಸನ ಜೋಡಣೆಯ ಹಿನ್ನೆಲೆಯಲ್ಲಿ ಜೋಡಣಾ ಕಾರ್ಯನಿರತ ಎಲ್ಲಾ ಸಿಬ್ಬಂದಿ ಮೊಬೈಲ್ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಅರಮನೆಯ ದರ್ಬಾರ್ ಹಾಲ್, ಕನ್ನಡಿತೊಟ್ಟಿ ಹಾಗೂ ಭದ್ರತಾ ಕೊಠಡಿ ಸೇರಿದಂತೆ ಇನ್ನಿತರೆಡೆಗಳಲ್ಲಿ ಅರಮನೆ ಸಿಬ್ಬಂದಿ ಓಡಾಟವನ್ನು ನಿರ್ಬಂಧಿಸಲಾಗಿತ್ತು. ಅರಮನೆಯ ಒಳಾಂಗಣದಲ್ಲಿರುವ ಎಲ್ಲಾ ಸಿಸಿ ಕ್ಯಾಮರಾಗಳಿಗೂ ಪರದೆ ಮುಚ್ಚಲಾ ಗಿತ್ತು. ಬಿಡಿಭಾಗಗಳನ್ನು ತರುವ ಸಿಬ್ಬಂದಿ ಮೇಲೂ ಹದ್ದಿನ ಕಣ್ಣಿಡಲಾಗಿತ್ತು. ಅಲ್ಲದೆ ಒಬ್ಬೊಬ್ಬರಿಗೂ ಶಸ್ತ್ರಸಜ್ಜಿತ ಸಿಬ್ಬಂದಿ ಬೆಂಗಾವಲಿಗೆ ನಿಯೋಜಿಸಲಾಗಿತ್ತು.

ಪ್ರವೇಶ ನಿರ್ಬಂಧ: ಸಿಂಹಾಸನದ ಜೋಡಣೆಯ ಹಿನ್ನೆಲೆಯಲ್ಲಿ ಅರಮನೆಗೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಅರಮನೆಯ ಎಲ್ಲಾ ದ್ವಾರಗಳಲ್ಲಿಯೂ ಪ್ರವೇಶ ನಿರ್ಬಂಧಿಸಿರುವ ಬಗ್ಗೆ ಫಲಕ ಹಾಕಲಾಗಿತ್ತು. ಅಲ್ಲದೆ ಪತ್ರಕರ್ತರಿಗೂ ನಿರ್ಬಂಧ ಅನ್ವಯವಾಗಿತ್ತು. ಸಿಂಹಾಸನ ಜೋಡಣೆ ವೇಳೆ ಪ್ರಮೋದಾದೇವಿ ಒಡೆಯರ್, ಸ್ಥಳದಿಂದ ನಿರ್ಗಮಿಸಿದ್ದರು. ಆದರೆ ಅವರ ಕಾರ್ಯದರ್ಶಿ ಲಕ್ಷ್ಮೀನಾರಾಯಣ್, ಅರಮನೆಯ ಆಡಳಿತ ಮಂಡಳಿಯ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಅರಮನೆಯ ಭದ್ರತಾ ಪಡೆಯ ಎಸಿಪಿ ವಿ.ಶೈಲೇಂದ್ರ ಸೇರಿದಂತೆ ಕೆಲವರು ಮಾತ್ರ ಉಪಸ್ಥಿತರಿದ್ದರು. ಜೋಡಣೆಯ ನಂತರ ಸಿಂಹಾಸನಕ್ಕೆ ಪರದೆ ಬಿಡಲಾಯಿತು. ದಸರಾ ಉದ್ಘಾಟನೆಯ ದಿನವಾದ ಅ.10ರಂದು ಬೆಳಿಗ್ಗೆ 5.30ರಿಂದ 6 ಗಂಟೆಯವರೆಗೆ ಸಿಂಹಾಸನಕ್ಕೆ ಸಿಂಹವನ್ನು ಜೋಡಿಸಲಾಗುತ್ತದೆ. ಆ ನಂತರವಷ್ಟೇ ಖಾಸಗಿ ದರ್ಬಾರ್‌ಗೆ  ಸಿಂಹಾಸನ ಪರಿಪೂರ್ಣವಾಗಿ ಸಿದ್ಧಗೊಳ್ಳಲಿದೆ.

Translate »