ಈ ದಸರೆಗೆ ಮೈಸೂರು-ಬೆಂಗಳೂರು ನಡುವೆ ಏರ್ ಇಂಡಿಯಾ ವಿಮಾನ ಹಾರಾಟ
ಮೈಸೂರು

ಈ ದಸರೆಗೆ ಮೈಸೂರು-ಬೆಂಗಳೂರು ನಡುವೆ ಏರ್ ಇಂಡಿಯಾ ವಿಮಾನ ಹಾರಾಟ

October 5, 2018

ಮೈಸೂರು: ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ನ್ಯಾಷನಲ್ ಕ್ಯಾರಿಯರ್ ಏರ್ ಇಂಡಿಯಾವು ಅಕ್ಟೋಬರ್ 10ರಿಂದ 20ರವರೆಗೆ ಈ ಬಾರಿಯ ದಸರಾ ವೇಳೆ ಮೈಸೂರು-ಬೆಂಗಳೂರು ನಡುವೆ ವಿಶೇಷ ವಿಮಾನ ಹಾರಾಟ ನಡೆಸಲಿದೆ.

ಒಂದು ವೇಳೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಲ್ಲಿ ದಸರಾ ನಂತರವೂ ಸೇವೆಯನ್ನು ಮುಂದು ವರಿಸಲು ಏರ್ ಇಂಡಿಯಾ ಆಸಕ್ತಿ ವಹಿಸಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(KSTDC) ಮತ್ತು ಪ್ರವಾಸೋದ್ಯಮ ಇಲಾಖೆಯ ಸಂಸ್ಥೆ ಅಧಿಕಾರಿಗಳು ಏರ್ ಇಂಡಿಯಾದೊಂದಿಗೆ ಚರ್ಚಿಸಿ, ದಸರೆಗೆ ಈ ಸೌಲಭ್ಯ ವನ್ನು ವ್ಯವಸ್ಥೆ ಮಾಡಿದ್ದಾರೆ.

ಈಗಾಗಲೇ ಟಿಕೆಟ್ ಬುಕಿಂಗ್ ಆನ್‍ಲೈನ್‍ನಲ್ಲಿ ಆರಂಭವಾಗಿದ್ದು, ಮೊದಲ ಎರಡು ದಿನಗಳಿಗೆ ಈಗಾಗಲೇ 72 ಸೀಟುಗಳಿಗೆ ಟಿಕೆಟ್ ಬುಕ್ ಆಗಿವೆ ಎಂದು ಮೂಲಗಳು ತಿಳಿಸಿದ್ದು, ವೇಳಾಪಟ್ಟಿ, ದರ ನಿಗದಿ ಸದ್ಯದಲ್ಲೇ ಪ್ರಕಟವಾಗಲಿದೆ ಎಂದೂ ಏರ್ ಇಂಡಿಯಾ ಮೂಲಗಳಿಂದ ತಿಳಿದು ಬಂದಿದೆ. ಕನಿಷ್ಠ 999 ರೂ.(ತೆರಿಗೆ ಪ್ರತ್ಯೇಕ) ಗಳಿಂದ ಗರಿಷ್ಟ 15000 ರೂ.ಗಳಿಗೂ ಈ ಸ್ಪೆಷಲ್ ಫ್ಲೈಟ್ ಪ್ರಯಾಣ ದರ ನಿಗದಿಯಾಗುವ ಸಂಭವವಿದ್ದು, 1200, 1500, 1800 ಹಾಗೂ 2100 ರೂ.ಗೂ ಟಿಕೆಟ್ ಲಭ್ಯವಾಗಲಿದೆ. ಮೈಸೂರು-ಬೆಂಗಳೂರು ನಡುವೆ ದಸರಾ ವೇಳೆ ಎಟಿಆರ್ 72 ವಿಶೇಷ ವಿಮಾನ ಹಾರಾಟ ನಡೆಸುವ ಸಂಬಂಧ ಕೆಎಸ್‍ಟಿಡಿಸಿಯು ಏರ್ ಇಂಡಿಯಾದೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದೆ ಎಂದು ಹೇಳಲಾಗಿದೆ.

ಮಂಗಳವಾರ ಹೊರತುಪಡಿಸಿ ಪ್ರತೀ ದಿನ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಗಳ ನಡುವೆ 72 ಆಸನ ಸಾಮಥ್ರ್ಯದ ಎಟಿಆರ್ ವಿಮಾನ ಹಾರಾಡಲಿದೆ.

ಬೆಂಗಳೂರಿನಿಂದ ಮಧ್ಯಾಹ್ನ 2.10ಕ್ಕೆ ಹೊರಡುವ ವಿಮಾನವು ಮಧ್ಯಾಹ್ನ 3 ಗಂಟೆಗೆ ಮೈಸೂರು ತಲುಪಲಿದೆ. ಅದೇ ದಿನ ಮಧ್ಯಾಹ್ನ 3.30 ಗಂಟೆಗೆ ಮೈಸೂರಿಂದ ಪ್ರಯಾಣ ಆರಂಭಿಸಿ ಸಂಜೆ 4.20 ಗಂಟೆಗೆ ಬೆಂಗಳೂರಿಗೆ ಹಿಂದಿರು ಗಲಿದೆ ಎಂಬ ತಾತ್ಕಾಲಿಕ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ.

ಈ ಸಂಬಂಧ ‘ಮೈಸೂರು ಮಿತ್ರ’ ಸಂಗ್ರಹಿಸಿದ ಮಾಹಿತಿ ಪ್ರಕಾರ, ಏರ್ ಇಂಡಿಯಾದಿಂದಾಗಲೀ, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದಿಂದ ಮೈಸೂರು ವಿಮಾನ ನಿಲ್ದಾಣ ಅಥವಾ ಜಿಲ್ಲಾಡಳಿತಕ್ಕೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ, ಅಕ್ಟೋಬರ್ 10ರಿಂದ 20ರವರೆಗೆ ವಿಶೇಷ ವಿಮಾನವನ್ನು ಮೈಸೂರು-ಬೆಂಗಳೂರು ನಡುವೆ ಹಾರಾಟ ನಡೆಸಲಾಗುವುದೆಂಬುದು ಮೌಖಿಕವಾಗಿ ತಿಳಿದಿತ್ತಷ್ಟೇ ಎಂಬುದು ತಿಳಿದು ಬಂದಿದೆ. ವಿಮಾನ ಹಾರಾಟ ಮಾಡು ವುದಾದರೆ, ಪ್ರಾಧಿಕಾರದಿಂದ ಸ್ಥಳ ಪರಿಶೀಲನೆಯಾಗಬೇಕು. ಭದ್ರತೆ, ಸ್ಲಾಟ್‍ಗಳ ಲಭ್ಯತೆ ಹಾಗೂ ಇತರ ವಿಷಯಗಳ ಬಗ್ಗೆ ತಪಾಸಣೆಯಾಗಬೇಕು. ಆದರೆ ಇನ್ನೂ ಆ ಪ್ರಕ್ರಿಯೆ ಗಳೇನೂ ನಡೆದಿಲ್ಲ ಎಂದು ಮೈಸೂರು ವಿಮಾನ ನಿಲ್ದಾಣದ ಮೂಲಗಳಿಂದ ತಿಳಿದು ಬಂದಿದೆ.

ವರ್ಷ ಪೂರೈಸಿದ ಟ್ರೂಜೆಟ್: 2017ರ ಸೆಪ್ಟೆಂಬರ್ 20ರಿಂದ ಹಾರಾಟ ಆರಂಭಿಸಿದ ಟ್ರೂಜೆಟ್ ವಿಮಾನಕ್ಕೆ ಒಂದು ವರ್ಷ ಪೂರ್ಣಗೊಂಡಿದ್ದು, ಸರಾಸರಿ 120 ಆಸನಗಳಂತೆ ವರ್ಷವಿಡೀ ಪ್ರತೀದಿನ ಮೈಸೂರು-ಚೆನ್ನೈ-ಹೈದರಾಬಾದ್ ನಡುವೆ ಪ್ರಯಾಣಿಕರು ಸೇವೆ ಪಡೆದಿದ್ದಾರೆ. ಕೇಂದ್ರ ಸರ್ಕಾ ರವು ಉಡಾನ್ ಯೋಜನೆಯಡಿ ಸಬ್ಸಿಡಿ ನೀಡಿರುವುದರಿಂದ ಟ್ರೂಜೆಟ್ ವಿಮಾನವು ಯಾವುದೇ ಅಡೆ-ತಡೆ ಇಲ್ಲದೆ ಕಳೆದ ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿದೆ.

Translate »