ಸಿದ್ದರಾಮಯ್ಯ ನೇತೃತ್ವದಲ್ಲಿ ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್‍ನಲ್ಲಿ ಗೆದ್ದವರು, ಸೋತವರ ಆತ್ಮಾವಲೋಕನಾ ಸಭೆ
ಮೈಸೂರು

ಸಿದ್ದರಾಮಯ್ಯ ನೇತೃತ್ವದಲ್ಲಿ ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್‍ನಲ್ಲಿ ಗೆದ್ದವರು, ಸೋತವರ ಆತ್ಮಾವಲೋಕನಾ ಸಭೆ

June 14, 2018

ಮೈಸೂರು:  ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಜ್ಜುಗೊಳಿಸುವ ಸಂಬಂಧ ಬುಧವಾರ ಮಾಜಿ ಮುಖ್ಯಮಂತ್ರಿ, ರಾಜ್ಯ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ರಹಸ್ಯ ಸಭೆ ನಡೆಸಿ, ಚರ್ಚಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದವರು ಮತ್ತು ಸೋತವರ ಸಭೆಯಲ್ಲಿ ಮೈಸೂರು ಜಿಲ್ಲೆಯಿಂದ ಗೆಲುವು ಸಾಧಿಸಿದ ಕಾಂಗ್ರೆಸ್ ಶಾಸಕರಾದ ತನ್ವೀರ್‍ಸೇಠ್, ಡಾ.ಯತೀಂದ್ರ, ಅನಿಲ್ ಚಿಕ್ಕಮಾಧು, ಸೋತ ವಾಸು, ಎಂ.ಕೆ.ಸೋಮಶೇಖರ್, ಕೆ.ವೆಂಕಟೇಶ್, ಹೆಚ್.ಪಿ.ಮಂಜುನಾಥ್, ಕಳಲೆ ಕೇಶವಮೂರ್ತಿ, ರವಿಶಂಕರ್, ಸಂಸದ ಆರ್.ಧ್ರುವನಾರಾಯಣ್, ಮುಖಂಡ ದೊಡ್ಡಸ್ವಾಮೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ ಸೇರಿದಂತೆ ವಿವಿಧ ಬ್ಲಾಕ್ ಸಮಿತಿ ಅಧ್ಯಕ್ಷರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಸೋಲಿನ ಬಗ್ಗೆ ಆತ್ಮಾವಲೋಕನ ನಡೆಸಲಾಯಿತು ಎನ್ನಲಾಗಿದೆ. ಅಲ್ಲದೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಹೇಗೆ ಸಂಘಟಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಯಿತು. ಎಂದು ತಿಳಿದುಬಂದಿದೆ. ಈ ಸಭೆಗೆ ಮಾಧ್ಯಮದವರಿಗೆ ಪ್ರವೇಶ ಇರಲಿಲ್ಲ.

ಡಾ.ಹೆಚ್‍ಸಿಎಂ ಗೈರು

ಮೈಸೂರು ಜಿಲ್ಲೆಯ ಕಾಂಗ್ರೆಸ್ ಪಕ್ಷದ ಗೆದ್ದ ಹಾಗೂ ಸೋತ ಅಭ್ಯರ್ಥಿಗಳು ಭಾಗವಹಿಸಿದ್ದ ಸಭೆಯಲ್ಲಿ ಸಿದ್ದರಾಮಯ್ಯರ ಪರಮಾಪ್ತ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಗೈರು ಹಾಜರಾಗಿದ್ದು ಎದ್ದು ಕಾಣುತ್ತಿತ್ತು. ಅವರು ಸಭೆಯಲ್ಲಿ ಭಾಗವಹಿಸಲಿದ್ದಾರೆಂಬ ನಿರೀಕ್ಷೆಯಲ್ಲಿದ್ದರಾದರೂ ಅವರು ಸಭೆಗೆ ಹೋಗದೆ ಗೈರು ಹಾಜರಾಗಿದ್ದರು.

ನಿನ್ನೆ ಕೂಡ ಮೈಸೂರಿನ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದ ವರುಣಾ ಕ್ಷೇತ್ರದ ಮತದಾರರಿಗೆ ಕೃತಜ್ಞತಾ ಸಮಾರಂಭದಲ್ಲಿ ಡಾ.ಹೆಚ್.ಸಿ.ಮಹದೇವಪ್ಪ ಭಾಗವಹಿಸಿರಲಿಲ್ಲ.

Translate »