ಲೋಕಸಭಾ ಚುನಾವಣೆ ಬಗ್ಗೆ ಚರ್ಚಿಸಿದೆವು: ತನ್ವೀರ್ ಸೇಠ್
ಮೈಸೂರು

ಲೋಕಸಭಾ ಚುನಾವಣೆ ಬಗ್ಗೆ ಚರ್ಚಿಸಿದೆವು: ತನ್ವೀರ್ ಸೇಠ್

June 14, 2018

ಮೈಸೂರು: ಇಂದು ನಡೆದ ಕಾಂಗ್ರೆಸ್ ಪಕ್ಷದ ಗೆದ್ದವರು ಮತ್ತು ಸೋತವರ ಸಭೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ್ದಾಗಲಿ ಅಥವಾ ಜಿಲ್ಲೆಯ ಯಾವುದೇ ಕ್ಷೇತ್ರದ ಬಗ್ಗೆ ಚರ್ಚೆ ಆಗಲಿಲ್ಲ. ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷವನ್ನು ಹೇಗೆ ಸಜ್ಜುಗೊಳಿಸಬೇಕು ಎಂಬ ಬಗ್ಗೆ ಮಾತ್ರ ಚರ್ಚಿಸಿದ್ದಾಗಿ ಮಾಜಿ ಸಚಿವ, ಶಾಸಕ ತನ್ವೀರ್ ಸೇಠ್ ತಿಳಿಸಿದರು.

ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆ ನಂತರ ಫಲಿತಾಂಶ ಹೊರ ಬಂದ ಮೇಲೆ ಮೈಸೂರು ಜಿಲ್ಲೆಯ ನಮ್ಮ ಪಕ್ಷದಿಂದ ಗೆದ್ದಿರುವವರು, ಸೋತವರು ಒಂದು ಕಡೆ ಸೇರಿರಲಿಲ್ಲ. ಹೀಗಾಗಿ ಇಂದು ಸಭೆ ನಡೆಯಿತು. ಮುಂದೆ ನಡೆಯಲಿರುವ ಲೋಕಸಭಾ ಚುನಾವಣೆಯ ಪೂರ್ವ ಸಿದ್ಧತೆ ವಿಚಾರದಲ್ಲಿ ಸಭೆಯಲ್ಲಿ ಚರ್ಚಿಸಿದೆವು. ಚುನಾವಣೆ ಸಂದರ್ಭದಲ್ಲಿ ಇದ್ದಂತಹ ವಾತಾವರಣ, ನಮ್ಮ ನಿರೀಕ್ಷೆ ಮೀರಿ ಬಂದಂತಹ ಫಲಿತಾಂಶದ ಬಗ್ಗೆ ಈ ಮೊದಲೇ ಚರ್ಚೆ ಮಾಡಿದ್ದೇವೆ. ಮತ್ತೊಮ್ಮೆ ನಾವೆಲ್ಲರೂ ಸಭೆ ಸೇರಲಿದ್ದೇವೆ ಎಂದರು.

ಲೋಕಸಭಾ ಚುನಾವಣೆಗೆ ಜಿಲ್ಲೆಯಲ್ಲಿ ನಮ್ಮ ಪಕ್ಷದ ಶಕ್ತಿ ಮತ್ತು ಸ್ಥಾನವನ್ನು ಯಾವ ರೀತಿ ಪಡೆಯಬೇಕು. ಆಗಿರುವ ಒಪ್ಪಂಧದ ಪ್ರಕಾರ ಯಾವ ರೀತಿ ನಾವು ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ನಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕೈಗೊಳ್ಳಬೇಕಾದ ನಿರ್ಧಾರಗಳ ಕುರಿತು ಸಭೆಯಲ್ಲಿ ಚರ್ಚಿಸಿದ್ದಾಗಿ ತಿಳಿಸಿದರು.

ಮೈಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಣ್ಕಕ್ಕಿಳಿಸುವ ಕುರಿತು ಯಾವುದೇ ರೀತಿಯ ಒಪ್ಪಂದ ಆಗಿಲ್ಲ. ಸಮ್ಮಿಶ್ರ ಸರ್ಕಾರ ರಚನೆ ವೇಳೆ ಲೋಕಸಭಾ ಚುನಾವಣೆಯಲ್ಲಿ ನಾವು ಚುನಾವಣಾ ಪೂರ್ವ ಒಪ್ಪಂದ ಮಾಡಿಕೊಳ್ಳುವ ಕುರಿತು ಈಗಾಗಲೇ ಘೋಷಣೆಯಾಗಿದ್ದು, ಆ ಪ್ರಕಾರದಲ್ಲಿ ನಾವು ನಮ್ಮ ಶಕ್ತಿ ಇರುವ ಪ್ರದೇಶಗಳಲ್ಲಿ ಚರ್ಚೆ ಮೂಲಕ ಅಭ್ಯರ್ಥಿಗಳನ್ನು ನಿಲ್ಲಿಸಬೇಕೆಂಬ ಬಗ್ಗೆಯೂ ಚರ್ಚೆ ನಡೆಸಿದ್ದಾಗಿ ತಿಳಿಸಿದರು. ಸಭೆಯಲ್ಲಿ ಕೇವಲ ಪಕ್ಷ ಸಂಘಟನೆ ಬಗ್ಗೆ ಮಾತ್ರ ಚರ್ಚಿಸಿದ್ದಾಗಿ ಸ್ಪಷ್ಪಪಡಿಸಿದರು.

Translate »