ಮೈಸೂರು: ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾದ ಪರಿಣಾಮ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಭಾನುವಾರ ಸಂಭವಿಸಿದೆ. ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದವರಾದ ಲೇಟ್ ಮಾದೇಗೌಡರ ಮಗ ಜಯಕುಮಾರ್(50) ಸಾವನ್ನಪ್ಪಿದವರು. ಶ್ರೀರಂಗಪಟ್ಟಣದಲ್ಲಿ ವಾಸವಿದ್ದ ಅವರು ಬಾಬು ರಾಯನ ಕೊಪ್ಪಲಿನಲ್ಲಿ ಸಿನಿಮಾ ಮಂದಿರವನ್ನು ಬಾಡಿಗೆಗೆ ಪಡೆದು ನಡೆಸುತ್ತಿದ್ದರು.
ಏ.19ರಂದು ಬಾಬುರಾಯನಕೊಪ್ಪಲಿನಿಂದ ಬೈಕಿನಲ್ಲಿ ಶ್ರೀರಂಗಪಟ್ಟಣಕ್ಕೆ ಹೋಗುತ್ತಿ ದ್ದಾಗ ಹಿಂದಿನಿಂದ ಬಂದ ವಾಹನವೊಂದು ಕಾವೇರಿ ನದಿ ಸೇತುವೆ ಬಳಿ ರಾತ್ರಿ 8.15 ಗಂಟೆ ವೇಳೆಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ತಲೆಗೆ ತೀವ್ರ ಗಾಯಗಳಾಗಿದ್ದ ಜಯಕುಮಾರ್ ಅವರನ್ನು ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಂಜೆ 6.30 ಗಂಟೆ ವೇಳೆಗೆ ಕೊನೆಯುಸಿರೆಳೆದರು ಎಂದು ಪ್ರಕರಣ ದಾಖಲಿಸಿಕೊಂಡಿರುವ ಶ್ರೀರಂಗಪಟ್ಟಣ ಟೌನ್ ಠಾಣೆ ಪೊಲೀಸರು ತಿಳಿಸಿದ್ದಾರೆ. ಡಿಕ್ಕಿ ಹೊಡೆದು ಪರಾರಿಯಾಗಿರುವ ವಾಹನ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.