ಮೈಸೂರು: ಮೇ 16ರಂದು ಬೆಳಿಗ್ಗೆ ಮೈಸೂರಿನ ಹೆಬ್ಬಾಳು ರಿಂಗ್ ರಸ್ತೆ ಜಂಕ್ಷನ್ನಲ್ಲಿ ನಡೆಯಿತೆನ್ನಲಾದ ಶೂಟೌಟ್ ಪ್ರಕರಣದ ಸುತ್ತ ಅನುಮಾನಗಳ ಹುತ್ತವೇ ಬೆಳೆಯುತ್ತಿದೆ.
ಪ್ರಕರಣದ ಸತ್ಯಾಸತ್ಯತೆ ಅರಿಯಲು ಬೆಂಗಳೂರಿನಿಂದ ಬಂದಿರುವ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದ ಐವರು ಸಿಐಡಿ ಅಧಿಕಾರಿಗಳು, ಪಂಜಾಬ್ ಮೂಲದ ಸುಕ್ವಿಂ ದರ್ ಸಿಂಗ್ ಎಂಬಾತನ ಮೇಲೆ ಶೂಟೌಟ್ ಮಾಡಿದ ವಿಜಯನಗರ ಠಾಣೆಯ ಅಂದಿನ ಇನ್ಸ್ಪೆಕ್ಟರ್ ಬಿ.ಜಿ. ಕುಮಾರ್ ಹಾಗೂ ಆ ವೇಳೆ ಸ್ಥಳದಲ್ಲಿದ್ದರೆನ್ನಲಾದ ಓರ್ವ ಎಎಸ್ಐ ಸೇರಿ ನಾಲ್ವರು ಸಿಬ್ಬಂದಿಯನ್ನು ತೀರ್ವ ವಿಚಾರಣೆ ಗೊಳಪಡಿಸಿದ್ದಾರೆ. ಪ್ರಕರಣದ ತನಿಖೆ ತೀವ್ರಗೊಳಿಸಿರುವ ಸಿಐಡಿ ಅಧಿಕಾರಿಗಳು, ಸ್ಥಳಕ್ಕೆ ತೆರಳಿ ಘಟನೆಯ ಪ್ರತ್ಯಕ್ಷ ದರ್ಶಿಗಳಾದ ಎಳನೀರು ಮಾರಾಟಗಾರ, ಜೆಲ್ಲಿ-ಮರಳು ಮಾರಾಟಗಾರನ ಹೇಳಿಕೆಗಳನ್ನು ಪಡೆದಿದ್ದಾರೆ.
ಅಂದು ಅಲ್ಲಿ ನಡೆದದ್ದೇನು?, ಇಟಿಯಸ್ ಕಾರಿನಲ್ಲಿ ದ್ದವರು ಎಷ್ಟು ಮಂದಿ?, ಸುಕ್ವಿಂದರ್ ಸಿಂಗ್ ಎಂಬ ವ್ಯಕ್ತಿಗೆ ಇನ್ಸ್ಪೆಕ್ಟರ್ ಗುರಿ ಇಟ್ಟು ಪಿಸ್ತೂಲ್ನಿಂದ ಗುಂಡಿ ಕ್ಕಿದ್ದೇಕೆ?, ಆತನ ಬಳಿ ಪಿಸ್ತೂಲ್ ಇತ್ತಾ?, ಇದ್ದಿದ್ದರೆ ಆತ ಯಾರ ಮೇಲೂ ಪ್ರಯೋಗ ಮಾಡಲಿಲ್ಲವೆ? ಎಂಬಿ ತ್ಯಾದಿ ಪ್ರಶ್ನೆಗಳನ್ನು ಪೊಲೀಸ್ ಸಿಬ್ಬಂದಿಗಳಿಗೆ ಕೇಳಿ, ಹೇಳಿಕೆಗಳನ್ನು ದಾಖಲಿಸಿದ್ದಾರೆ ಎಂದು ಹೇಳಲಾಗಿದೆ.
ಆತನ ಮೇಲೆ ಗುಂಡು ಹಾರಿಸುವಂತಹ ಅನಿ ವಾರ್ಯ ಇನ್ಸ್ಪೆಕ್ಟರ್ಗೆ ಏನಿತ್ತು?, ಆತನೊಂದಿಗೆ ಬಂದಿದ್ದ ಇನ್ನಿ ಬ್ಬರು ಪರಾರಿಯಾದಾಗ ವೈರ್ಲೆಸ್ ಮೂಲಕ ಮಾಹಿತಿ ನೀಡಿ ಸಿಬ್ಬಂದಿ ಕರೆಸಿಕೊಂಡು ಸುತ್ತುವರಿಯ ಬಹುದಿ ತ್ತಲ್ಲ ಅಥವಾ ಸ್ಥಳದಲ್ಲೇ ಇದ್ದ ಗರುಡ ಪೊಲೀಸರು ಅವರನ್ನು ಏಕೆ ಬೆನ್ನತ್ತಲಿಲ್ಲ ಎಂಬ ಹಲವು ಪ್ರಶ್ನೆಗಳನ್ನು ಸಿಐಡಿ ಅಧಿಕಾರಿಗಳು ಕೇಳಿದ್ದರಾದರೂ, ಪುಷ್ಟಿದಾಯಕ ಉತ್ತರ ಲಭ್ಯವಾಗಿಲ್ಲ ಎಂದು ತಿಳಿದು ಬಂದಿದೆ.
ಪಿಸ್ತೂಲ್ ಇತ್ತು ಎನ್ನುವುದಾದರೆ ಸುಕ್ವಿಂದರ್ ಶೂಟೌಟ್ ಮಾಡಲಿಲ್ಲವೆ?, ನಿಮ್ಮಲ್ಲಿ ಯಾರಿಗಾದರೂ ಗಾಯಗಳಾ ಗಿದೆಯೇ?, ಆಗಿದ್ದರೆ ವೈದ್ಯಕೀಯ ಸಾಕ್ಷ್ಯಗಳೇನು, ನೀವು 5 ಮಂದಿ ಇದ್ದರೂ ಒಬ್ಬ ವ್ಯಕ್ತಿಯನ್ನು ಮಣಿಸಲಾಗಲಿಲ್ಲ ವೇಕೆ, ಸ್ಥಳದಲ್ಲಿ ಆತನ ಪಿಸ್ತೂಲ್ ಸೀಜ್ ಮಾಡಿದ್ದೀರಾ, ಹಾಗಿದ್ದರೆ ಮಹಜರು ವರದಿಯಲ್ಲಿ ಏಕೆ ನಮೂದಿಸಿಲ್ಲ ಎಂಬ ಪ್ರಶ್ನೆಗಳ ಸುರಿಮಳೆಯನ್ನೇ ಹಾಕಲಾಗಿದೆಯಂತೆ.
ಭಾತ್ಮೀದಾರನ ಮಾಹಿತಿಯನ್ನು ನಂಬಿದ್ದೇ ಆದರೆ, ಘಟನಾ ಸ್ಥಳದಲ್ಲಿ ಅಮಾನ್ಯೀಕರಣಗೊಂಡ ಹಳೇ ನೋಟು ಗಳು ಅಥವಾ ಚಲಾವಣೆಯಲ್ಲಿರುವ ಹೊಸ ಕರೆನ್ಸಿ ನೋಟು ಗಳನ್ನು ಸೀಜ್ ಮಾಡಿಲ್ಲ ಏಕೆ?, ಕೇವಲ ಕಾರನ್ನು ವಶ ಪಡಿಸಿಕೊಂಡು ಭಾತ್ಮೀದಾರನನ್ನು ಬಿಟ್ಟು ಕಳುಹಿಸಿದ್ದೇಕೆ ಎಂದೂ ಅವರು ಕೇಳಿದ್ದಾರೆ ಎನ್ನಲಾಗಿದೆ.
ಭಾತ್ಮೀದಾರ ಮೊದಲ ಸಲ ಫೋನ್ ಮಾಡಿದ ಎನ್ನ ಲಾದ ಮೇ 16ರಂದು ಬೆಳಿಗ್ಗೆ 8ರಿಂದ ನಗರ ಪೊಲೀಸ್ ಆಯುಕ್ತರಿಗೆ ಮಾಹಿತಿ ನೀಡಿದ ಬೆಳಿಗ್ಗೆ 10.45 ಗಂಟೆವರೆಗೆ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ.ಕುಮಾರ್ ಮೊಬೈಲ್ನಿಂದ ಮಾಡಿರುವ ಕರೆಗಳು(outgoing) ಹಾಗೂ ಬಂದಿರುವ ಕರೆ (incomming calls)ಗಳ ಬಗ್ಗೆ ಸಿಐಡಿ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ.
ಹಣದ ವಿನಿಮಯ ದಂಧೆ ನಡೆಯುತ್ತಿದೆ ಎಂಬ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲು ನಿರ್ಧರಿಸಿ ದಾಗ ನಿಯಮಾನುಸಾರ ಮೇಲಧಿಕಾರಿಗಳಿಗೆ ತಿಳಿಸಿ, ಠಾಣಾ ದಾಖಲಾತಿಯಲ್ಲಿ ನಮೂದಿಸಿ, ಸೂಕ್ತ ತಯಾರಿ ಮಾಡದೇ, ಮಫ್ತಿಯಲ್ಲಿ ದಾಳಿ ಮಾಡಿದ್ದೇಕೆ?, ಘಟನೆ ಯಲ್ಲಿ ಸರ್ವೀಸ್ ರೈಫಲ್ನಿಂದ ಶೂಟೌಟ್ ಮಾಡಿದ ಮೃತ ವ್ಯಕ್ತಿಯ ದೇಹವನ್ನು ಆಸ್ಪತ್ರೆಗೆ ಕೊಂಡೊಯ್ದು ಮೃತಪಟ್ಟಿರುವ ಬಗ್ಗೆ ವೈದ್ಯರು ದೃಢಪಡಿಸಿದ ನಂತರವೂ ಒಂದು ತಾಸಿನವರೆಗೆ ಉನ್ನತಾಧಿಕಾರಿಗಳಿಗೆ ಅಥವಾ ನಗರ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡದಿ ರುವ ಹಿಂದಿನ ಉದ್ದೇಶವೇನು? ಎಂಬಿತ್ಯಾದಿ ಪ್ರಶ್ನೆಗಳನ್ನು ಇನ್ಸ್ಪೆಕ್ಟರ್ ಕುಮಾರ್ಗೆ ತನಿಖಾಧಿಕಾರಿಗಳು ಹಾಕಿದ್ದಾರೆ ಎಂದು ಹೇಳಲಾಗಿದೆ. ಶೂಟೌಟ್ ಪ್ರಕರಣಗಳಲ್ಲಿ 16 ಅಂಶಗಳ ಆಧಾರದ ಮೇಲೆ ತನಿಖೆ ನಡೆಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶದಂತೆ ಸಿಐಡಿ ಅಧಿಕಾರಿಗಳು ಇನ್ ಸ್ಪೆಕ್ಟರ್ ಹಾಗೂ ಸಿಬ್ಬಂದಿಗಳನ್ನು ವಿಚಾರಣೆಗೊಳಪಡಿಸಿದ್ದಾರೆ.