ಹಾಸನದಲ್ಲಿ ಹಿಂಸಾರೂಪ ಪಡೆದ ಕಾರ್ಮಿಕರ ಪ್ರತಿಭಟನೆ
ಮೈಸೂರು, ಹಾಸನ

ಹಾಸನದಲ್ಲಿ ಹಿಂಸಾರೂಪ ಪಡೆದ ಕಾರ್ಮಿಕರ ಪ್ರತಿಭಟನೆ

July 25, 2019

ಹಾಸನ: ನಗರದ ಹೊರ ವಲಯ ಹನುಮಂತಪುರದ ಬಳಿ ಇರುವ ಹಿಮ್ಮತ್ ಸಿಂಗ್ ಗಾರ್ಮೆಂಟ್ಸ್ ಕಾರ್ಖಾನೆ ಯಲ್ಲಿ ತಮ್ಮ ಮೇಲೆ ದೌರ್ಜನ್ಯ, ಶೋಷಣೆ ನಡೆಸಲಾಗುತ್ತಿದೆ ಎಂದು ಆಕ್ರೋಶಗೊಂಡ ಹೊರ ರಾಜ್ಯಗಳ 1500ಕ್ಕೂ ಅಧಿಕ ಕಾರ್ಮಿ ಕರು ಬುಧವಾರ ಆರಂಭಿಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಪೊಲೀಸರು ಸೇರಿದಂತೆ ಹಲವರು ಗಾಯ ಗೊಂಡರು.

ಪೊಲೀಸ್ ವಾಹನಗಳು ಸೇರಿದಂತೆ 20ಕ್ಕೂ ಅಧಿಕ ವಾಹನಗಳು ಕಲ್ಲು ತೂರಾಟದಲ್ಲಿ ಜಖಂಗೊಂಡಿವೆ. ಕಲ್ಲು ತೂರಾಟದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಶಿವಮೂರ್ತಿ, ಕೃಷ್ಣೇಗೌಡ, ದೇವರಾಜ್, ಸೋಮಶೇಖರಪ್ಪ, ಜಗದೀಶ್, ಲೋಕೇಶ್, ವಿಶ್ವನಾಥ್, ನಾಗರಾಜ್, ಕೃಷ್ಣಶೆಟ್ಟಿ ಸೇರಿದಂತೆ 10 ಮಂದಿ ಗಾಯಗೊಂಡಿದ್ದಾರೆ. ಕೃಷ್ಣೇಗೌಡ ಎಂಬುವರ ಕಾಲಿನ ಮೂಳೆ ಮುರಿದಿದೆ. ಶಿವಸ್ವಾಮಿ ಎಂಬುವರ ಹಣೆಗೆ ತೀವ್ರ ಗಾಯವಾಗಿ ರಕ್ತ ಸುರಿದಿದೆ. ಗಾಯಾಳು ಪೊಲೀಸರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಡೆದಿದ್ದೇನು: ಸಿದ್ಧ ಉಡುಪು ಘಟಕದಲ್ಲಿ ಸ್ಥಳೀಯರು ಮತ್ತು ಹೊರ ರಾಜ್ಯದವರು ಸೇರಿದಂತೆ 4 ಸಾವಿರಕ್ಕೂ ಅಧಿಕ ಕಾರ್ಮಿಕರಿದ್ದಾರೆ. ಅದರಲ್ಲಿ ಉತ್ತರ ಪ್ರದೇಶ, ಬಿಹಾರ, ಅಸ್ಸಾಂ ರಾಜ್ಯಗಳ ಕಾರ್ಮಿಕರು ತಮ್ಮ ಮೇಲೆ ಕಾರ್ಖಾನೆಯಲ್ಲಿ ದೌರ್ಜನ್ಯ ನಡೆಯುತ್ತಿದೆ. ಕಾರ್ಮಿಕ ಕಾನೂನುಗಳ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿ ಬುಧವಾರ ದಿಢೀರ್ ಪ್ರತಿಭಟನೆ ಆರಂಭಿಸಿದರು.

ಪ್ರತಿಭಟನೆಗೆ ಆಡಳಿತ ಮಂಡಳಿಯಿಂದ ಯಾವುದೇ ಸ್ಪಂದನೆ ವ್ಯಕ್ತವಾಗದಿದ್ದಾಗ ಪ್ರತಿಭಟನಾಕಾರರು ರೊಚ್ಚಿಗೆದ್ದರು. ಈ ಹಂತದಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು. ಕಾರ್ಮಿಕರು ಕಾರ್ಖಾನೆಯ ಮೇಲೆ ಕಲ್ಲು ತೂರಾಟ ನಡೆಸಿದರು. ತಡೆಯಲು ಬಂದ ಪೊಲೀಸರ ಮೇಲೂ ಕಲ್ಲು ತೂರಿದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಅದಕ್ಕೆ ಬಗ್ಗದ ಪ್ರತಿಭಟನಾಕಾರರು, ಕಲ್ಲು ತೂರಾಟ ಹೆಚ್ಚಿಸಿದರು. ಸ್ಥಳದಲ್ಲಿದ್ದ 10 ಮಂದಿ ಪೊಲೀಸರು ಓಡಿಹೋಗಿ ತಮ್ಮ ವಾಹನದಲ್ಲಿ ಅಡಗಿ ಕುಳಿತರು. ಕಾರ್ಮಿಕರು, ಗ್ಯಾಸನ್ನು ತಂದು ಪೊಲೀಸ್ ವ್ಯಾನಿನೊಳಗೆ ಬಿಟ್ಟು ಉಸಿರು ಕಟ್ಟುವಂತೆ ಮಾಡಿದರು. ಪೊಲೀಸರು ಹೆದರಿ ವಾಹನದಿಂದ ಹೊರಬಂದ ಬಳಿಕ ಪೊಲೀಸ್ ವ್ಯಾನನ್ನು ಕೆಳಕ್ಕುರುಳಿಸಿ ಬುಡಮೇಲು ಮಾಡಿದರು.

ಈ ಸಂದರ್ಭ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಇನ್ನಷ್ಟು ರೊಚ್ಚಿಗೆದ್ದ ಕಾರ್ಮಿಕರು ಫ್ಯಾಕ್ಟರಿ ಆವರಣದಲ್ಲಿದ್ದ ವಾಹನಗಳ ಜಖಂಗೊಳಿಸಿದರು. ದಪ್ಪ ಕಲ್ಲುಗಳನ್ನು ವಾಹನಗಳ ಮೇಲೆ ಎಸೆದರು. 20ಕ್ಕೂ ಹೆಚ್ಚು ವಾಹನಗಳು ಜಖಂಗೊಂಡವು. ರಿಸರ್ವ್ ಪೊಲೀಸ್ ವಾಹನದ ಮೇಲೆ ಹತ್ತಾರು ಕಾರ್ಮಿಕರು ಮುಗಿಬಿದ್ದು ವಾಹನವನ್ನು ಕೆಡವಿ ತಲೆಕೆಳಗಾಗಿಸಿದರು. ಕಲ್ಲೆಸೆತದಲ್ಲಿ ಕಾರ್ಖಾನೆಯ ಪ್ರಧಾನ ಕಟ್ಟಡದ ಮುಂಭಾಗದ ದೊಡ್ಡ ದೊಡ್ಡ ಗಾಜುಗಳೂ ಪುಡಿಪುಡಿಯಾದವು. ಲಾಠಿ ಪ್ರಹಾರ ನಡೆಸಿದರೂ ಪರಿಸ್ಥಿತಿ ತಹಬಂದಿಗೆ ಬಾರದ ಕಾರಣ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ, ಅಶ್ರುವಾಯು ಪ್ರಯೋಗಿಸಿ ಲಾಠಿ ಪ್ರಹಾರ ನಡೆಸಿ ಪ್ರತಿಭಟನಾಕಾರರನ್ನು ಚದುರಿಸಿದರು. ಗಂಟೆಗಳ ಬಳಿಕ ಪರಿಸ್ಥಿತಿ ಹತೋಟಿಗೆ ಬಂದಿತು. ಇದೆಲ್ಲದರಿಂದಾಗಿ ಹಿಮ್ಮತ್‍ಸಿಂಗ್ ಕಾ ಸಿದ್ಧ ಉಡುಪು ಕಾರ್ಖಾನೆಯ ಆವರಣ ಬುಧವಾರ ಮಧ್ಯಾಹ್ನದ ವೇಳೆಗೆ ಅಕ್ಷರಶಃ ರಣಾಂಗಣವಾಗಿ ಮಾರ್ಪಾಡಾಗಿತ್ತು. ಎಲ್ಲೆಲ್ಲೂ ಗಾಜಿನ ಚೂರು ಹರಡಿಬಿತ್ತು. ಪ್ರತಿಭಟನಾಕಾರರ ಚಪ್ಪಲಿ, ಬೂಟುಗಳು ಅಲ್ಲಲ್ಲಿ ಬಿದ್ದಿದ್ದವು. ಜಖಂಗೊಂಡ ಪೊಲೀಸರ ವಾಹನಗಳು, ಕಾರ್ಮಿಕರ ದ್ವಿಚಕ್ರ ವಾಹನಗಳು ಹಿಂಸಾರೂಪ ತಳೆದ ಪ್ರತಿಭಟನೆಗೆ ಮೂಕ ಸಾಕ್ಷಿಯಾಗಿ ಕಾರ್ಖಾನೆಯ ಅಂಗಳದಲ್ಲಿ ನಿಂತಿದ್ದವು.

Translate »