ಕೊನೆ ಘಳಿಗೆಯಲ್ಲಿ ಬೋಪಯ್ಯ ಬಿಟ್ಟು ವಿಶ್ವೇಶ್ವರ ಹೆಗಡೆ ಕಾಗೇರಿ ಕಣಕ್ಕೆ
ಮೈಸೂರು

ಕೊನೆ ಘಳಿಗೆಯಲ್ಲಿ ಬೋಪಯ್ಯ ಬಿಟ್ಟು ವಿಶ್ವೇಶ್ವರ ಹೆಗಡೆ ಕಾಗೇರಿ ಕಣಕ್ಕೆ

July 31, 2019

ಬೆಂಗಳೂರು, ಜು.30(ಕೆಎಂಶಿ)-ರಾಜ್ಯ ವಿಧಾನಸಭಾ ಧ್ಯಕ್ಷರ ಆಯ್ಕೆಯಲ್ಲೂ ಬಿಜೆಪಿ ವರಿಷ್ಠರ ಮಾತೇ ಅಂತಿಮ ವಾಗಿದೆ. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಇಂದು ಕಡೆಯ ದಿನವಾಗಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಆಪ್ತ ಹಾಗೂ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಅವರನ್ನು ನೇಮಿಸಲು ತೀರ್ಮಾನಿಸಿದ್ದರು.

ಬೋಪಯ್ಯ ಅವರಿಗೆ ನಾಮಪತ್ರ ಸಲ್ಲಿಸಲು ಸೂಚನೆ ನೀಡಿದ್ದ ಮುಖ್ಯಮಂತ್ರಿ ಅವರು, ಇದೇ ವೇಳೆ ವರಿಷ್ಠರ ಗಮನಕ್ಕೂ ತಂದಿದ್ದರು. ಮುಂಜಾನೆವರೆಗೂ ಯಾವುದೇ ನಿರ್ಧಾರ ತಿಳಿಸದ ವರಿಷ್ಠರು ನಾಮಪತ್ರ ಸಲ್ಲಿಕೆಯ ಕೊನೆ ಸಮಯದಲ್ಲಿ ಆರ್‍ಎಸ್‍ಎಸ್ ಮೂಲ ಹಾಗೂ ಪಕ್ಷದ ನಿಷ್ಠಾವಂತ, ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದರು. ಈ ಮೂಲಕ ಕೇಂದ್ರ ಘಟಕ ಯಡಿಯೂರಪ್ಪ ಅವರ ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದ ಈ ಪ್ರಯೋ ಗಕ್ಕೆ ಮುಂದಾಗಿದೆ. ವರಿಷ್ಠರ ಆಣತಿಯಂತೆ ಸಭಾಧ್ಯಕ್ಷ ಸ್ಥಾನಕ್ಕೆ ಮುಖ್ಯಮಂತ್ರಿ ಹಾಗೂ ಪಕ್ಷದ ಹಿರಿಯ ಮುಖಂಡರ ಜೊತೆಗೂಡಿ ನಾಮಪತ್ರ ಸಲ್ಲಿಸಿದ್ದು ಅವರ ಆಯ್ಕೆ ಖಚಿತ ಗೊಂಡಿದೆ. ಸಭಾಧ್ಯಕ್ಷರ ಚುನಾ ವಣೆಗೆ ನಾಮಪತ್ರ ಸಲ್ಲಿಸಲು ಇಂದು ಕಡೆಯ ದಿನವಾಗಿತ್ತು. ನಿಗದಿತ ವೇಳೆಗೆ ಕಾಗೇರಿ ಒಬ್ಬರೇ ನಾಮ ಪತ್ರ ಸಲ್ಲಿಸಿರುವುದ ರಿಂದ ನಾಳೆ ವಿಧಾನಸಭೆಯಲ್ಲಿ ಅಧಿಕೃತ ಪ್ರಕಟಣೆ ಅಷ್ಟೇ ಬಾಕಿ ಇದೆ. ಈ ಹಿಂದೆ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರದಲ್ಲಿ ಸಭಾಧ್ಯಕ್ಷರಾಗಿದ್ದ ರಮೇಶ್ ಕುಮಾರ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಸರ್ಕಾರ ಕ್ಕಿದ್ದ ಬಹುಮತವನ್ನು ಸಾಬೀತುಪಡಿಸಿದ ಬೆನ್ನಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಮೇಶ್‍ಕುಮಾರ್ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ ಸೋಮವಾರ ಮಧ್ಯಾಹ್ನ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಿತಲ್ಲದೆ ನೂತನ ಸಭಾಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲು ನಿರ್ಧರಿಸಲಾಯಿತು. ತದ ನಂತರ ನೂತನ ಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಪೂರಕವಾಗಿ ಈ ಸ್ಥಾನಕ್ಕೆ ಸ್ಪರ್ಧಿಸುವವರು ಮಂಗಳವಾರ ಮಧ್ಯಾಹ್ನ 12 ಗಂಟೆಯೊಳಗೆ ನಾಮಪತ್ರ ಸಲ್ಲಿಕೆ ಮಾಡಬೇಕು ಎಂದು ಸೂಚಿಸಲಾಗಿತ್ತು. 1994 ರಿಂದ ನಿರಂತರವಾಗಿ ವಿಧಾನಸಭೆಗೆ ಆಯ್ಕೆಯಾಗುತ್ತಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಇದುವರೆಗೆ ಒಟ್ಟು ಆರು ಬಾರಿ ಶಾಸನ ಸಭೆಯ ಸದಸ್ಯರಾಗಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದ ಕಾಲದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಇದೀಗ ಸಭಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಈ ಮಧ್ಯೆ ಇಂದು ನಾಮಪತ್ರ ಸಲ್ಲಿಕೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಮ್ಮ ಮೇಲೆ ನಂಬಿಕೆ ಇಟ್ಟು ವರಿಷ್ಠರು ಸಭಾಧ್ಯಕ್ಷ ಸ್ಥಾನಕ್ಕೆ ತರಲು ಬಯಸಿದ್ದಾರೆ. ಅವರ ನಿರೀಕ್ಷೆಗೆ ಪೂರಕವಾಗಿ ಕೆಲಸ ಮಾಡುತ್ತೇನೆ ಎಂದರು

Translate »