ರಾಮನಾಥಪುರ: ಇಲ್ಲಿನ ಶ್ರೀ ರಾಮೇಶ್ವರಸ್ವಾಮಿ ದೇವಾಲಯ, ಯಾತ್ರಿ ನಿವಾಸಕ್ಕೆ ಶಾಸಕ ಡಾ.ಎ.ಟಿ. ರಾಮಸ್ವಾಮಿ ಭೇಟಿ ನೀಡಿ ಪರಿಶೀಲಿಸಿದರಲ್ಲದೆ, ಅಗತ್ಯ ಸೌಕರ್ಯ ಕಲ್ಪಿಸುವುದಾಗಿ ಭರವಸೆ ನೀಡಿದರು.
ಕಾವೇರಿ ದಂಡೆಯಲ್ಲಿರುವ ಶ್ರೀ ರಾಮೇಶ್ವರಸ್ವಾಮಿ ದೇವಾ ಲಯಕ್ಕೆ ಮೊದಲು ಭೇಟಿ ನೀಡಿದ ಶಾಸಕರು, ದೇವಾಲಯದ ಗರ್ಭಗುಡಿ, ಶಿಥಿಲಗೊಂಡಿರುವ ದೇಗುಲದ ಪಾಶ್ರ್ವಗೋಡೆ ಗಳು. ದೇವಾಲಯದ ಪೌಳಿ, ಪ್ರಾಂಗಣವನ್ನು ಪರಿಶೀಲಿಸಿದರು.
ಬಳಿಕ ಮಾತನಾಡಿ, ದೇಗುಲ ಆವರಣದ ಸುತ್ತಲೂ ಬಸವಲಿಂಗಗಳ ಗುಡಿಗಳು, ಶ್ರೀಚಕ್ರದ ಸ್ಥಳ, ಇಂದ್ರಾಕ್ಷಿ, ವಿಶಾಲಕ್ಷಮ್ಮ ಗುಡಿಗಳಲ್ಲಿ ಮಳೆ ಬಂದಾಗ ಸೋರುತ್ತಿದ್ದು, ಇದರ ಬಗ್ಗೆ ಮುಜರಾಯಿ ಇಲಾಖೆಗೆ ತಿಳಿಸಲಾಗಿದೆ. ಅಲ್ಲದೆ ಶ್ರೀ ರಾಮೇಶ್ವರಸ್ವಾಮಿ ದೇವಸ್ಥಾನದ ಅಭಿವೃದ್ಧಿಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್‍ನಿಂದ ಜೀರ್ಣೋದ್ಧಾರಕ್ಕೆ 36 ಲಕ್ಷ ರೂ.ಗಳ ಕಾಮಗಾರಿಗೆ ಅನುಮೋದನೆ ದೊರಕಿದ್ದು, ದೇವಸ್ಥಾನದ ಒಳಾಂಗಣದ ಕಾಮಗಾರಿ ಸೇರಿದಂತೆ ಶೀಘ್ರವೇ ಜೀರ್ಣೋದ್ಧಾರ ಕಾರ್ಯ ಪ್ರಾರಂಭವಾಗುತ್ತದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಐ.ಬಿ ಸರ್ಕಲ್‍ನಲ್ಲಿರುವ ಯಾತ್ರಿ ನಿವಾಸಕ್ಕೆ ಭೇಟಿ ನೀಡಿದ ಶಾಸಕರು, ಮೂಲ ಸೌಲಭ್ಯಗಳಾದ ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ, ಶೌಚಾಲಯ, ನಿವಾಸದ ಸುತ್ತ ಕಾಂಪೌಂಡ್ ನಿರ್ಮಿಸಲು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿದ್ದು, ನಿವಾಸಕ್ಕೆ ಬೇಕಾಗುವ ಮಂಚಗಳು, ಹಾಸಿಗೆಗಳು ಹಾಗೂ ಪೀಠೋಪಕರಣಗಳ ಸರಬರಾಜು ಬಗ್ಗೆ ಶೀರ್ಘವೇ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಉಪಾಧ್ಯಕ್ಷ ರಾಮನಕೊಪ್ಪಲು ರಾಮೇಗೌಡ, ಮಾಜಿ ಅಧ್ಯಕ್ಷ ಆರ್.ಎಸ್.ಚಿಕ್ಕಣ್ಣಶೆಟ್ಟಿ, ರಾಮನಕೊಪ್ಪಲು, ಆರ್.ಎನ್. ನಾಗಣ್ಣ, ಮುಖಂಡರಾದ ಬಿ.ಜೆ.ಪುಟ್ಟರಾಜು, ಮಾದೇಶ್, ನವಿಲೆ ಜಗದೀಶ್, ಬಿ.ಎಂ.ಪುಟ್ಟರಾಜು, ಆರ್.ಜೆ.ಸ್ವಾಮಿ ಗೌಡ, ಪಿ.ಎ.ಕಟ್ಟೇಪುರ ವೆಂಕಟೇಶ್ ಮುಂತಾದವರಿದ್ದರು.