ಶೀತಪೀಡಿತ ಗ್ರಾಮಗಳ ಸ್ಥಳಾಂತರಿಸುವಂತೆ ಆಗ್ರಹ
ಹಾಸನ

ಶೀತಪೀಡಿತ ಗ್ರಾಮಗಳ ಸ್ಥಳಾಂತರಿಸುವಂತೆ ಆಗ್ರಹ

July 31, 2018

ಹಾಸನ: ಹೊಳೆನರಸೀಪುರ ತಾಲೂಕು ಹಳ್ಳಿಮೈಸೂರು ಹೋಬಳಿಯ ಸೋಮನಹಳ್ಳಿ ಕೊಪ್ಪಲು, ಬಿದರಕ್ಕ, ಕೊಪ್ಪಲು ಗ್ರಾಮಗಳು ಶೀತಪೀಡಿತವಾಗಿದ್ದು, ಕೂಡಲೇ ಸ್ಥಳಾಂತರಿಸುವಂತೆ ಗ್ರಾಮಸ್ಥರು ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ನಗರದ ಜಿಲ್ಲಾಡಳಿತ ಆವರಣದಲ್ಲಿ ಜಮಾವಣೆಗೊಂಡ ವಿವಿಧ ಗ್ರಾಮಗಳ ಗ್ರಾಮಸ್ಥರು, ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.

ಹೊಳೆನರಸೀಪುರ ತಾಲೂಕು ಹಳ್ಳಿಮೈಸೂರು ಹೋಬಳಿಯ ಸೋಮನಹಳ್ಳಿ ಕೊಪ್ಪಲು, ಬಿದರಕ್ಕ, ಕೊಪ್ಪಲು ಗ್ರಾಮಗಳು ಶೀತಪೀಡಿತವಾಗಿದ್ದು, ಇದೇ ಗ್ರಾಮಗಳಲ್ಲಿ ಹಲವು ವರ್ಷಗಳಿಂದ ಜೀವನ ನಾವು ಸಾಗಿಸುತ್ತಿದ್ದೇವೆ. ಈ ಗ್ರಾಮಗಳ ಸುತ್ತ ಹೇಮಾ ವತಿ ಬಲದಂಡೆ ನಾಲೆ ಹಾದು ಹೋಗಿದೆ. ನಾಲೆಗೆ ನೀರನ್ನು ಬಿಟ್ಟಾಗಲೆಲ್ಲಾ ಗ್ರಾಮಗಳು ಜಲಾವೃತಗೊಳ್ಳುತ್ತವೆ. ಅನೇಕ ಮನೆಗಳು ಶೀತಪೀಡಿತವಾಗುತ್ತವೆ. ಮನೆ ಗೋಡೆಗಳು ಕುಸಿಯುವ ಹಂತ ತಲುಪಿದ್ದು, ಹಲವು ಮನೆಗಳು ಈಗಾಗಲೇ ಕುಸಿದಿವೆ.

ಅಲ್ಲದೆ ನಾಲೆಯಿಂದ ನೀರು ಬಿಟ್ಟ ವೇಳೆ, ಮಳೆಗಾಲದಲ್ಲಿ ಇಲ್ಲಿನ ಗ್ರಾಮಸ್ಥರು ಅನೇಕ ಖಾಯಿಲೆಗಳಿಂದ ನರಳುವಂತಾಗುವುದಲ್ಲದೆ, ಡೆಂಗ್ಯೂ, ಅಸ್ತಮಾ, ಕೈಕಾಲು ಊತ ಕಾಣಿಸಿಕೊಳ್ಳುತ್ತದೆ. ಈ ಗ್ರಾಮಗಳಲ್ಲಿ ಜನತೆ ವಾಸಿಸದಷ್ಟು ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಕುಟುಂಬಗಳು ಗ್ರಾಮ ತೊರೆದು ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ. ಸದ್ಯ, ಮಳೆ ಶೀತ ವಾತಾವರಣ ಇರುವುದರಿಂದ ನೆಲದ ಮೇಲೆ ಮರದ ಹಲಗೆ ಹಾಗೂ ಭತ್ತದ ಹುಲ್ಲು ಹಾಕಿ ಮಲುಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.

ತಾಲೂಕು ಹಳ್ಳಿಮೈಸೂರು ಹೋಬಳಿಯ ಶೀತ ಪೀಡಿತ ಗ್ರಾಮಸ್ಥರು ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಸಾಕಷ್ಟು ಮನವಿ ಮಾಡಿದ್ದರೂ ಇದುವರೆಗೂ ಯಾವ ಅಧಿಕಾರಿಗಳು ಗಮನಹರಿಸಿಲ್ಲ. 2006-07ರಲ್ಲಿ ಮುಖ್ಯಮಂತ್ರಿಗಳು, ಜಲಸಂಪನ್ಮೂಲ ಸಚಿವರು, ಪ್ರಾದೇಶಿಕ ಆಯುಕ್ತರು ಗಾಮಕ್ಕೆ ಭೇಟಿ ನೀಡಿ, ಸ್ಥಳಪರಿಶೀಲನೆ ಮಾಡಿ ವರದಿ ಪಡೆದಿದ್ದರೂ ಗ್ರಾಮಗಳ ಸ್ಥಳಾಂತರಕ್ಕೆ ಮುಂದಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಕೂಡಲೇ ಈ ಗ್ರಾಮಗಳನ್ನು ಶೀತಪೀಡಿತ ಎಂದು ಘೋಷಿಸಿ ಗ್ರಾಮಗಳನ್ನು ಸ್ಥಳಾಂತರ ಮಾಡುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಗ್ರಾಮದ ಕಲ್ಲಪ್ಪ, ದೇವರಾಜು, ಸಣ್ಣಪುಟ್ಟೇಗೌಡ, ಗಂಗಾಧರ್, ಮಹದೇವ್, ಪ್ರಕಾಶ್, ಯೋಗೀಶ್, ಕಾವೇರಮ್ಮ, ಮಹೇಶ್, ಮಂಜು, ನರಸಯ್ಯ ಇತರರು ಪಾಲ್ಗೊಂಡಿದ್ದರು.

Translate »