ಬಿಜೆಪಿ ಅಭ್ಯರ್ಥಿ ಮಲ್ಲಿಕಾರ್ಜುನಪ್ಪ ಮನೆಮನೆಗೆ ತೆರಳಿ ಮತಯಾಚನೆ
ಚಾಮರಾಜನಗರ

ಬಿಜೆಪಿ ಅಭ್ಯರ್ಥಿ ಮಲ್ಲಿಕಾರ್ಜುನಪ್ಪ ಮನೆಮನೆಗೆ ತೆರಳಿ ಮತಯಾಚನೆ

April 24, 2018

ಚಾಮರಾಜನಗರ: ಬಿಜೆಪಿ ಅಭ್ಯರ್ಥಿ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಸೋಮವಾರ ಬದನಗುಪ್ಪೆ ಮತ್ತು ಹೆಗ್ಗೋಠಾರ ಗ್ರಾಮಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.

ಬದನಗುಪ್ಪೆ ಗ್ರಾಪಂ ವ್ಯಾಪ್ತಿಯ ಬದನಗುಪ್ಪೆ, ಪಣ್ಯದಹುಂಡಿ, ಮುತ್ತಿಗೆ, ಮರೆಯಾಲ, ಮರೆಯಾಲದಹುಂಡಿ, ಮೇಲಾಜಿಪುರ, ಹೆಗ್ಗೋಠಾರ ಗ್ರಾಮಪಂಚಾಯಿತಿ ವ್ಯಾಪ್ತಿಯ ಬೆಂಡರವಾಡಿ, ಮಲ್ಲಯ್ಯನಪುರ, ಮೇಗಲಹುಂಡಿ, ಬೋಗಾರಪುರ ಗ್ರಾಪಂ ವ್ಯಾಪ್ತಿಯ ಭೋಗಾಪುರ, ಕೆಲ್ಲಂಬಳ್ಳಿ, ಕಸ್ತೂರು, ಕಲ್ಲಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ತಮ್ಮ ನೂರಾರು ಬೆಂಬಲಿಗರೊಂದಿಗೆ ಮನೆ ಮನೆಗೆ ತೆರಳಿ ಮತಯಾಚಿಸಿದರು.

ನಂತರ ಮಾತನಾಡಿದ ಅವರು, ಈ ಬಾರಿ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಇದರಿಂದ ಜನರು ಬಿಜೆಪಿ ಕಡೆಗೆ ಹೆಚ್ಚು ಒಲವು ತೋರುತ್ತಿದ್ದಾರೆ. ಜಿಲ್ಲೆಯಲ್ಲೂ ಕಮಲ ಅರಳಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ಕಳೆದ ಐದು ವರ್ಷಗಳಲ್ಲಿ ರಾಜ್ಯದ ಜನ ಕಾಂಗ್ರೆಸ್ ದುರಾಡಳಿತದಿಂದ ಬೇಸತ್ತಿದ್ದಾರೆ. ಇನ್ನು ಚಾಮರಾಜನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಮಾಡಿಲ್ಲ. ಜಿಲ್ಲಾ ಕೇಂದ್ರವಾದ ಚಾಮರಾಜನರ ಪಟ್ಟಣವೇ ಇದಕ್ಕೆ ಸಾಕ್ಷಿ. ಒಂದು ರಸ್ತೆ ಮಾಡಲು ಐದು ವರ್ಷ ಬೇಕೇ ಎಂದು ಪ್ರಶ್ನಿಸಿದರು. ಚಾಮರಾಜನಗರದಲ್ಲಿ ಜನರು ತಿರುಗಾಡದಂತಹ ಪರಿಸ್ಥಿತಿ ನಿರ್ಮಾಣವಾಗಿ ಎಲ್ಲಿ ನೋಡಿದರು ರಸ್ತೆಗಳನ್ನು ಅಗೆದು ಬರೀ ಜನರಿಗೆ ಧೂಳು ಭಾಗ್ಯ ನೀಡಿದ್ದಾರೆ. ಇನ್ನು ಮಳೆ ಬಂದರೆ ರಸ್ತೆಗಳು ಕೆರೆಯಾಗುತ್ತವೆ. ಇದರಿಂದ ಸಾರ್ವಜನಿಕರು ಓಡಾಡುವುದೇ ಕಷ್ಟವಾಗಿದೆ. ಎಂದು ವ್ಯಂಗ್ಯವಾಡಿದರು.
ಕ್ಷೇತ್ರದ ಜನ ಈ ಬಾರಿ ನನ್ನನ್ನು ಆಯ್ಕೆ ಮಾಡಿ ಕಳುಹಿಸಿದರೆ ಎಲ್ಲಾ ಹಳ್ಳಿಗಳಿಗೂ ರಸ್ತೆ, ಕುಡಿಯುವ ನೀರು ಸೇರಿದಂತೆ ಇನ್ನಿತರ ಸೌಲಭ್ಯ ಕಲ್ಪಿಸಿ ಮತದಾರರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.

ಮುಖಂಡರಾದ ಕೆಲ್ಲಂಬಳ್ಳಿ ಸೋಮನಾಯಕ, ದಲಿತ ಮುಖಂಡ ವೆಂಕಟರಮಣಸ್ವಾಮಿ ಪಾಪು, ಜಿಪಂ ಸದಸ್ಯ ಸಿ.ಎನ್.ಬಾಲರಾಜ್, ತಾಪಂ ಮಾಜಿ ಅಧ್ಯಕ್ಷ ರಾಜಗೋಪಾಲ್, ಗ್ರಾಪಂ ಮಾಜಿ ಅಧ್ಯಕ್ಷ ದೇವರಾಜು, ಉಪ್ಪಾರ ಮುಖಂಡ ಮಂಗಲ ಶಿವಕುಮಾರ್, ತಾಲೂಕು ಬಿಜೆಪಿ ಅಧ್ಯಕ್ಷ ಸುಂದರಪ್ಪ, ಪುರುಷೋತಮ್, ಅಮಚವಾಡಿ ಚಂದ್ರಶೇಖರ್, ಮುತ್ತಿಗೆ ಮೂರ್ತಿ, ರವಿಶಂಕರ್, ಕುಮಾರ್, ನಿಜಗುಣರಾಜು, ಪಣ್ಯದಹುಂಡಿ ನಂದೀಶ್, ಸತೀಶ್, ಗುರು ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.

Translate »