- 3 ತಿಂಗಳಾದರೂ ದೊರಕದ ಪರಿಹಾರ, ನೆರವಿನ ನಿರೀಕ್ಷೆಯಲ್ಲಿ ಬಡ ಕುಟುಂಬ
ಮಂಡ್ಯ: ಕಳೆದ ವಿಧಾನ ಸಭಾ ಚುನಾವಣೆ ವೇಳೆ ರಾಜಕಾರಣಿಗಳ ಪ್ರಚಾರದ ಭರಾಟೆಗೆ ಬಡ ಬಾಲಕನೊಬ್ಬನ ಬದುಕು ಬರಡಾಗಿದೆ. ತೀವ್ರ ಕಡು ಬಡತನದ ಈ ಕುಟುಂಬ ಗಾಯಾಳು ಬಾಲಕನನ್ನು ಉಳಿಸಿಕೊಳ್ಳಲು ಪರದಾಡುತ್ತಿದೆ. ನೆರವು ನೀಡುತ್ತೇವೆ ಎಂದಿದ್ದ, ದುರಂತಕ್ಕೆ ಕಾರಣರೂ ಆದ ಕಾಂಗ್ರೆಸ್ ನಾಯಕರು ಇತ್ತ ಸುಳಿದಿಲ್ಲ. ತೀವ್ರ ಸುಟ್ಟಗಾಯಗಳಿಂದ ಕಳೆದ ಮೂರು ತಿಂಗಳಿಂದ ನರಳುತ್ತ್ತಿರೋ ಈ ಬಾಲಕನ ಹೆಸರು ಮಾದೇಶ.
ಏನಿದು ಪ್ರಕರಣ: ಕಳೆದ ಮಾರ್ಚ್ 23 ರಂದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಸಂತೆ ಮೈದಾನದಲ್ಲಿ ಕಾಂಗ್ರೆಸ್ ನಾಯಕರ ಸ್ವಾಗತಕ್ಕಾಗಿ ಹಾರಿಸಲೆತ್ನಿಸಿದ ಗ್ಯಾಸ್ ಬಲೂನ್ ಸ್ಫೋಟಗೊಂಡು ಸುಮಾರು 11 ಶಾಲಾ ಮಕ್ಕಳು ಗಾಯಗೊಂಡಿದ್ದರು. ಘಟನೆಯಲ್ಲಿ ಸಂತೆ ಮಾಳದ ಸ್ಲಂ ನಿವಾಸಿ ಕುಮಾರ್ ಎಂಬುವರ ಮಗ ಮಾದೇಶ್‍ಗೂ ಗಂಭೀರ ಸುಟ್ಟ ಗಾಯವಾಗಿತ್ತು. ಈ ದುರ್ಘ ಟನೆ ನಡೆದ ನಂತರ ಕೆಲ ದಿನ ಈತನ ಆಸ್ಪತ್ರೆ ಖರ್ಚು ವೆಚ್ಚ ನೋಡಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಶಾಸಕ ರಮೇಶ್ ಬಾಬು, ಚುನಾವಣೆಯಲ್ಲಿ ತಾವು ಸೋತ ಬಳಿಕ ಗಾಯಾಳು ಬಾಲಕನನ್ನು ಮರೆತೇ ಬಿಟ್ಟಿದ್ದಾರೆ. ಶೇ.80 ರಷ್ಟು ಸುಟ್ಟ ಗಾಯವಾಗಿರುವ ಈ ಬಾಲಕನನ್ನು ಉಳಿಸಿ ಕೊಳ್ಳಲು ಪೋಷಕರೀಗ ಪರದಾಡುದಾಡು ತ್ತಿದ್ದಾರೆ. ಆರ್ಥಿಕ ನೆರವಿಗೆ ಕಂಡ ಕಂಡವರ ಬಳಿ ಕೈ ಚಾಚುತ್ತಿದ್ದಾರೆ. ಇನ್ನು ಪರಿಹಾರ ಕೊಡುತ್ತೇವೆ ಅಂದಿದ್ದವರಿಂದ ಯಾವುದೇ ಪರಿಹಾರ ಇದುವರೆಗೆ ಸಿಕ್ಕಿಲ್ಲ ಎಂದು ಕುಟುಂಬದವರು ಪರಿತಪಿಸುತ್ತಿದ್ದಾರೆ.
ಮೂರು ಭಾರಿ ಸರ್ಜರಿ ಆದರೂ ವಾಸಿ ಯಾಗದ ಗಾಯ: ಘಟನೆ ಸಂಭವಿಸಿ 3 ತಿಂಗಳು ಕಳೆದಿದೆಯಾದರೂ ಗಾಯಾಳು ಬಾಲಕ ಮಾದೇಶ್‍ಗೆ ಆಗಿರುವ ಗಾಯ ಮಾತ್ರ ವಾಸಿಯಾಗಿಲ್ಲ. ಮೈಸೂರಿನ ಕೆ.ಆರ್.ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಯಲ್ಲೂ ಚಿಕಿತ್ಸೆ ಕೊಡಿಸಲಾಗಿದೆ. ಸ್ಫೋಟದಿಂದ ಸುಟ್ಟು ಹೋಗಿರುವ ಕೈ-ಕಾಲು, ಮುಖ ಹಾಗೂ ದೇಹದ ಕೆಲವು ಭಾಗದಲ್ಲಿ ಇಲ್ಲಿಯವರೆಗೆ ಮೂರು ಭಾರಿ ಸರ್ಜರಿ ಮಾಡಲಾಗಿದೆ. ಚರ್ಮವೆಲ್ಲಾ ಕಿತ್ತು ಬರುತ್ತಿದೆ.
ಗುಣಮುಖವಾಗಲು ವರ್ಷಾನುಗಟ್ಟಲೇ ಬೇಕಿದೆ ಎಂದು ವೈದ್ಯ ಮೂಲಗಳಿಂದ ತಿಳಿದು ಬಂದಿದೆ. ಬಾಲಕನ ಕುಟುಂಬ ಕೂಲಿ ನಾಲಿ ಮಾಡಿ, ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದೆ. ಘಟನೆಯ ನಂತರ ಈ ಕುಟುಂಬದ ಸ್ಥಿತಿ ಇನ್ನು ಹೇಳ ತೀರದಾಗಿದೆ. ಇತ್ತ ಗಾಯಾಳು ಮಗನ ಚಿಕಿತ್ಸಾ ವೆಚ್ಚಕ್ಕೆ ತಂದೆ ಕೂಲಿ ನಾಲಿ ಮಾಡುತ್ತಿದ್ದರೆ ತಾಯಿ ಸದಾ ನರಳಾಡ್ತಿರೋ ಬಾಲಕನನ್ನು ನೋಡಿಕೊಳ್ಳುತ್ತಿದ್ದಾರೆ.
ಇನ್ನು ರಾಹುಲ್ ಗಾಂಧಿ ಬಂದಾಗ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಜಿ.ಪರಮೇಶ್ವರ್ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿ, ಗಾಯಾಳುಗಳಿಗೆ ಪಕ್ಷದ ವತಿಯಿಂದ ತಲಾ 25 ಸಾವಿರ ಪರಿಹಾರ ಘೋಷಣೆ ಮಾಡಿದ್ದರಾದರೂ ನಂತರ ಅದನ್ನು ಮರೆತೇ ಬಿಟ್ಟಿದ್ದಾರೆ. ದುರ್ದೈವಿ ಬಾಲಕನ ಬದುಕಲ್ಲಿ ಈಗ ಕತ್ತಲು ಆವರಿಸಿದೆ. ಇತ್ತ ಪರಿಹಾರವು ಇಲ್ಲದೆ ಅತ್ತ ಸೂಕ್ತ ಚಿಕಿತ್ಸೆಯು ಇಲ್ಲದೆ ನರಳುವಂತಾಗಿದೆ. ಇನ್ನಾದರೂ ಕಾಂಗ್ರೆಸ್ ನಾಯಕರು ಇತ್ತ ಗಮನ ಹರಿಸಿ ಪರಿಹಾರ ನೀಡಿ ಬಾಲಕನ ಚಿಕಿತ್ಸೆಗೆ ನೆರವಾಗಬೇಕಿದೆ. ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಈ ಕುಟುಂಬ ಇದೀಗ ತಮ್ಮ ಮಗನ ಚಿಕಿತ್ಸೆಗೆ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದೆ.