ಮಡಿಕೇರಿ: ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾದ ಕೆ.ಪಿ.ಚಂದ್ರಕಲಾ ಮಡಿಕೇರಿಯ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಪಕ್ಷದ ಮುಖಂಡರ ಮತ್ತು ಕಾರ್ಯಕರ್ತರ ಸಭೆ ನಡೆಸಿದರು. ಮಂಗಳವಾರ ನಾಮಪತ್ರ ಸಲ್ಲಿಸುವುದು ಪಕ್ಷದ ಗೆಲುವಿಗೆ ಪೂರಕವಾಗಿ ಕಾರ್ಯಕರ್ತರು ಶ್ರಮಿಸುವ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಯಿತು. ಪಕ್ಷದ ಕೊಡಗು ಉಸ್ತುವಾರಿ ವೆಂಕಪ್ಪಗೌಡ, ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಕೆ.ಪಿ. ಚಂದ್ರಕಲಾ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ರು ರವೀಂದ್ರ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ಮಡಿಕೇರಿ ನಗರಾಧ್ಯಕ್ಷ ಅಬ್ದುಲ್ ರಜಾಕ್, ಮಡಿಕೇರಿ ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಜಿಲ್ಲ ಪಂಚಾಯ್ತಿ ಸದಸ್ಯ ಪಿ.ಎಂ.ಲತೀಫ್, ಪ್ರಮುಖರಾದ ನಾಗೇಂದ್ರಬಾಬು, ಎಂ.ಎಂ.ಹನೀಫ್, ಪುಷ್ಪ ಪೂಣಚ್ಚ ಸೇರಿದಂತೆ ಮತ್ತಿತರರು ಇದ್ದರು.
ಸಭೆಯ ಬಳಿಕ ಮಾತನಾಡಿದ ಪಕ್ಷದ ಕೊಡಗು ಉಸ್ತುವಾರಿ ವೆಂಕಪ್ಪ ಗೌಡ, ಕೊಡಗಿನ ಎರಡು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷದ ಗೆಲುವಿಗೆ ಕಾರ್ಯಕರ್ತರು ದೃಢಸಂಕಲ್ಪ ಮಾಡಿದ್ದಾರೆ. ಏ. 27ರಂದು ಗೋಣ ಕೊಪ್ಪಲಿಗೆ ರಾಹುಲ್ ಗಾಂಧಿ ಭೇಟಿ ನೀಡಲಿದ್ದು, ಇದು ಪಕ್ಷದ ಗೆಲುವಿಗೆ ಪೂರಕವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ರಾಜ್ಯ ಸರ್ಕಾರದ ಜನಪರವಾದ ಯೋಜನೆಗಳಿಂದಾಗಿ ಈ ಬಾರಿ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಗಳಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ.ಚಂದ್ರಕಲಾ ಮಾತನಾಡಿ, ಕಳೆದ ಮೂವತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ದುಡಿದಿರುವ ತಮ್ಮನ್ನು ಪಕ್ಷದ ವರಿಷ್ಠರು ಚುನಾವಣಾ ಕಣಕ್ಕಿಳಿಸಿದ್ದು, ಮಂಗಳವಾರ ನಾಮಪತ್ರ ಸಲ್ಲಿಸಿದ ಬಳಿಕ ಚುನಾವಣಾ ಪ್ರಚಾರ ಆರಂಭಿಸಲಾಗುವುದೆಂದು ಹೇಳಿದರು.