ಆಳುವವರಿಗೆ ವಿದ್ಯಾರ್ಹತೆ ಬೇಕಲ್ಲವೇ?
ಅಂಕಣಗಳು, ಚಿಂತನೆ

ಆಳುವವರಿಗೆ ವಿದ್ಯಾರ್ಹತೆ ಬೇಕಲ್ಲವೇ?

June 3, 2018

– ಡಾ. ವಿ. ರಂಗನಾಥ್

ಕರ್ನಾಟಕ ವಿಧಾನಸಭೆಗೆ 12.5.2018 ರಂದು ಚುನಾವಣೆ ನಡೆದು, 15.2.2018 ರಂದು ಮತಗಳ ಎಣಿಕೆಯೂ ಮುಗಿದಿದೆ. ಈ ಸಲದ ಚುನಾ ವಣೆಯ ಫಲಿತಾಂಶ ಹೇಗಿರಬಹುದೆಂಬ ಕುತೂಹಲ ಎಲ್ಲರಲ್ಲಿಯೂ ಇತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಹತ್ತಾರು ದಿನ ರಾಜ್ಯ ಪ್ರವಾಸ ಮಾಡಿ, ಬಿಜೆಪಿಯವರು ಹೇಳಿಕೊಳ್ಳುವಂತೆ ‘ಮೋದಿ ಅಲೆ’ ಸೃಷ್ಟಿಸಿದ್ದರು. ಅದಕ್ಕೆ ಕೌಂಟರ್ ಎನ್ನುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಹ ಅನೇಕ ಬಾರಿ ರಾಜ್ಯ ಪ್ರವಾಸ ಮಾಡಿ, ಅವರ ಪಕ್ಷದ ಪರ ಪ್ರಚಾರ ಮಾಡಿದರು. ಫಲಿತಾಂಶವೂ ಪ್ರಕಟವಾಗಿ, ಮೈತ್ರಿ ಸರ್ಕಾರ ಅಸ್ಥಿತ್ವಕ್ಕೆ ಬಂದಿದ್ದಾಯಿತು.

ನಾವು ಈಗ ಚುನಾವಣೆಯಲ್ಲಿ ಆ ಪಕ್ಷಕ್ಕೆ ಇಷ್ಟು ಸೀಟು ಬಂದಿದ್ದರೆ ಚೆನ್ನಾಗಿತ್ತು, ಈ ಪಕ್ಷ ಇನ್ನಷ್ಟು ಶ್ರಮ ಹಾಕಿದ್ದರೆ ಚೆನ್ನಾಗಿತ್ತು ಎಂದೆಲ್ಲಾ ನಮ್ಮ ಅನಿಸಿಕೆ ಗಳನ್ನು ನಮ್ಮ ಜೊತೆಯವರಲ್ಲಿ, ಆತ್ಮೀಯರಲ್ಲಿ ಹಂಚಿ ಕೊಂಡು, ನಮಗೂ ಇದರ ಬಗ್ಗೆ ಜ್ಞಾನವಿದೆ ಎಂದು ಹೇಳಿ ಸಮಾಧಾನಪಟ್ಟುಕೊಳ್ಳುತ್ತೇವೆ. ಇದು ಸಹಜವೇ. ನಮಗೂ ಗೊತ್ತು ಹೀಗೇ ಹೇಳಿಕೊಂಡು ಓಡಾಡುವು ದರಿಂದ ಯಾವುದೇ ಪ್ರಯೋಜನವಿಲ್ಲ ಎಂಬುದು.

ಈಗ ಮುಖ್ಯವಾಗಿ ವಿಮರ್ಶೆ ಮಾಡಬೇಕಾಗಿರು ವುದು ಚುನಾವಣೆ ನಡೆದ ರೀತಿಯ ಬಗ್ಗೆ. ಈ ಚುನಾವಣೆ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಯಾವ ರೀತಿಯಲ್ಲಿ ಭಿನ್ನವಾಗಿತ್ತು? ಕಳೆದ ಚುನಾವಣೆ ಗಿಂತ ಈ ಚುನಾವಣೆ ಚೆನ್ನಾಗಿ ನಡೆಯಿತೇ? ಅಥವಾ ಚುನಾವಣಾ ವ್ಯವಸ್ಥೆ ಪೂರ್ತಿ ಹಳಿ ತಪ್ಪಿದಂತಾಗುತ್ತಿದೆಯೇ? ಇಂತಹ ವಿಚಾರಗಳ ಬಗ್ಗೆ ಅವಲೋಕನವಾಗಬೇಕು.

ನಮ್ಮ ಸಂವಿಧಾನವು, ದೇಶದಲ್ಲಿನ ಸರ್ಕಾರಗಳು ಅದು ಕೇಂದ್ರದ್ದೇ ಇರಲಿ, ರಾಜ್ಯದ್ದೇ ಇರಲಿ ‘ಪ್ರಜೆ ಗಳಿಂದ ಪ್ರಜೆಗಳಿಗಾಗಿ ಪ್ರಜೆಗಳೇ ಸರ್ಕಾರ ರಚಿಸಿ ಕೊಳ್ಳಬೇಕು’ ಎಂದು ಸ್ಪಷ್ಟಪಡಿಸಿದೆ. ಎಂತಹ ಸುಂದರವಾದ ಕನಸು ಇದು. ಜನರು ತಮಗೆ ಬೇಕಾ ದಂತಹ ಸರ್ಕಾರ ಆರಿಸಿಕೊಳ್ಳುವುದು ಎಂಬುದು ಬಹಳ ರೋಚಕವಾದ ಕಲ್ಪನೆ. ಸಂವಿಧಾನ ಕರ್ತೃ ಗಳಿಗೆ ಕೈ ಮುಗಿಯಬೇಕು. ಪರಕೀಯರ ಆಳ್ವಿಕೆಯಿಂದ ಶತಶತಮಾನಗಳ ಕಾಲ ಆಳಿಸಿಕೊಂಡು ಗುಲಾಮ ಗಿರಿಯನ್ನೇ ಹೊದ್ದು ಮಲಗಿದ್ದ ಭಾರತೀಯರಿಗೆ ಸಂವಿಧಾನವು ನಿಮಗೆ ಬೇಕಾದ ಸರ್ಕಾರ ನೀವೇ ರಚಿಸಿಕೊಳ್ಳಬಹುದು ಎಂದು ತಿಳಿಸಿದಾಗ ಅಮೃತ ಕುಡಿದಷ್ಟೇ ಆನಂದವಾಗಿಬಿಟ್ಟಿತ್ತು. ನಮ್ಮನ್ನು ನಾವೇ ಆಳಿಕೊಳ್ಳುವುದು, ನಮಗೆ ಬೇಕಾದ ಎಲ್ಲ ಕೆಲಸ ಗಳನ್ನೂ ನಮ್ಮ ಜನಪ್ರತಿನಿಧಿಗಳ ಮೂಲಕ ಮಾಡಿಸಿ ಕೊಳ್ಳಬಹುದು. ಇದೇ ಮಹಾತ್ಮಾ ಗಾಂಧಿಯವರು ಕಂಡ ಕನಸಿನ ‘ರಾಮರಾಜ್ಯ’ ಎಂದೇ ಎಲ್ಲರೂ ಖುಷಿಪಟ್ಟಿದ್ದರು. ಆದರೆ ಸಂವಿಧಾನ ರಚನಾಕಾರರಿಗೆ ಬಹುಶಃ ಆಗಲೇ ಹೊಳೆದಿತ್ತೇನೋ. ಇದು ಅಷ್ಟು ಸಲೀಸಲ್ಲ ಎಂದು. ಹಾಗಾಗಿಯೇ ಚುನಾವಣಾ ನೀತಿ ನಿಯಮಗಳನ್ನೂ ಜಾರಿಗೆ ತಂದರು.

ನಮ್ಮ ಚುನಾವಣೆಗಳ ಬಗ್ಗೆ ಸಂವಿಧಾನದ ಅನುಚ್ಛೆದ 324 ರಿಂದ 342ರವರೆಗೆ ತಿಳಿಸಲಾಗಿದೆ. ಚುನಾವಣಾ ನಿಯಮಗಳನ್ನೂ ಜಾರಿಗೆ ತರಲಾಗಿದೆ. ಪ್ರಜಾಪ್ರತಿನಿಧಿ ಕಾಯಿದೆ 1951 ಚುನಾವಣೆ ಹೇಗೆ ನಡೆಯಬೇಕು ಎಂದು ನಿರ್ದೇಶಿಸುತ್ತದೆ. ಇವೆಲ್ಲವೂ ಭಾರತವು ಒಪ್ಪಿರುವ ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳುವಂತೆ ರೂಪಿಸಲಾಗಿದೆ.

ಕೇವಲ ಚುನಾಯಿತ ಪ್ರತಿನಿಧಿಗಳಿಗೇ ರಾಜ್ಯಭಾರ ಮಾಡಲು ಬಿಟ್ಟರೆ ಅವರ ಪಕ್ಷಗಳ ಸಿದ್ಧಾಂತಗಳಿಗನು ಗುಣವಾಗಿ ಸರ್ಕಾರ ನಡೆಸಬಹುದು ಎಂಬ ಕಾರಣ ದಿಂದ ಕೇಂದ್ರದಲ್ಲಿ ರಾಷ್ಟ್ರಪತಿ ಹುದ್ದೆಯನ್ನೂ, ರಾಜ್ಯಗಳಲ್ಲಿ ರಾಜ್ಯಪಾಲರ ಹುದ್ದೆಗಳನ್ನೂ ಸೃಷ್ಟಿಸಿದ್ದು, ಅವರ ಮೇಲ್ವಿಚಾರಣೆಯಲ್ಲೇ ಸರ್ಕಾರಗಳು ನಡೆ ಯಬೇಕು ಎಂದು ತಿಳಿಸಲಾಗಿದೆ. ರಾಷ್ಟ್ರಪತಿ ಹಾಗೂ ರಾಜ್ಯಪಾಲರು ಯಾವುದೇ ಸದನದ ಸದಸ್ಯರಾಗಿರದಂತೆ ಕಟ್ಟುಪಾಡು ಮಾಡಲಾಗಿದೆ. ಅವರೂ ಪಕ್ಷಾತೀತವಾಗಿ ಕೆಲಸ ಮಾಡಬೇಕು ಎಂಬ ಆಶಯದಿಂದ ಪ್ರಮಾಣ ವಚನ ಸ್ವೀಕರಿಸುವಂತೆ ಮಾಡಲಾಗಿದೆ. ಅವರ ನಡೆಗಳನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸುವಂತಿಲ್ಲ ಎಂದೂ ತಿಳಿಸಲಾಗಿದೆ. ಅವರು ಯಾವುದೇ ಪಕ್ಷಕ್ಕೂ ಸೇರದವರಾಗಿರಬೇಕು ಮತ್ತು ಹಾಗೇ ಅವರ ನಡವಳಿಕೆ ಗಳೂ ಇರಬೇಕು. ಇದು ಅಪೇಕ್ಷಣೀಯ. ಆದರೆ ಇತ್ತೀಚೆÀಗೆ ರಾಷ್ಟ್ರಪತಿಯಾಗಿ ಕೆಲಸ ನಿರ್ವಹಿಸಿ ನಮ್ಮನ್ನಗ ಲಿದ ಶ್ರೀ ಅಬ್ದುಲ್ ಕಲಾಮ್ ಹೊರತುಪಡಿಸಿ ಇತರೆಲ್ಲರೂ ಒಂದಲ್ಲ ಒಂದು ರಾಜಕೀಯ ಪಕ್ಷದೊಂದಿಗೆ ಗುರುತಿಸಿ ಕೊಂಡಿದ್ದವರೇ. ಆದರೂ ರಾಷ್ಟ್ರಪತಿಗಳ ಪರಂಪರೆ ನೋಡಿದಾಗ ಕೆಲವರನ್ನು ಹೊರತುಪಡಿಸಿ ಉಳಿದ ವರು ಆ ಸ್ಥಾನದ ಘನತೆ ಎತ್ತಿಹಿಡಿದಿದ್ದಾರೆ. ಆದರೆ ಇದು ಮುಂದೆಯೂ ಮುಂದುವರೆಯುವುದೇ? ಎಂಬುದು ಯಕ್ಷ ಪ್ರಶ್ನೆ. ಇರಲಿ.

ಇದೆಲ್ಲಾ ಸಂವಿಧಾನ ಕರ್ತೃಗಳು ಎಚ್ಚರಿಕೆ ವಹಿಸಿ ರೂಪಿಸಿದ ಕ್ರಮಗಳು. ಇದೆಲ್ಲದರ ಹಿಂದಿನ ಮಾಸ್ಟರ್ ಮೈಂಡ್ ಡಾ. ಬಾಬಾಸಾಹೇಬ್ ಅಂಬೇಡ್ಕರ್. ಹೀಗೆ ನಮ್ಮ ಸಂವಿಧಾನ ಹಾಗೂ ಚುನಾವಣಾ ನಿಯಮ ಗಳಲ್ಲಿ ತಿಳಿಸಿದ ಕಟ್ಟುಪಾಡುಗಳು ಇಂದು ಪಾಲನೆ ಯಾಗುತ್ತಿವೆಯೇ? ಎಂಬುದು ಇಂದು ಪರಾಮರ್ಷಿಸ ಬೇಕಾದ ಮುಖ್ಯ ಸಂಗತಿ.

ಕೆಲವು ಸಲ ನಮ್ಮ ಜನಪ್ರತಿನಿಧಿಗೆ ಯಾವುದೇ ವಿದ್ಯಾರ್ಹತೆ ನಿಗಧಿಪಡಿಸದಿರುವುದರ ಬಗ್ಗೆ ಅನೇಕರು ಅಸಮಾಧಾನ ವ್ಯಕ್ತಪಡಿಸುವುದೂ ಉಂಟು.

ಸರ್ಕಾರಿ ಕೆಲಸದ ‘ಡಿ’ ವೃಂದದ ನೌಕರನಿಗೂ ಕನಿಷ್ಠ ವಿದ್ಯಾರ್ಹತೆ ನಿಗಧಿಪಡಿಸಿರುವಾಗ ನಮ್ಮನ್ನಾಳುವ, ದೇಶ, ರಾಜ್ಯದಲ್ಲಿ ಶಾಸನ ರಚಿಸುವವರಿಗೆ ಕನಿಷ್ಠ ವಿದ್ಯಾರ್ಹತೆ ಬೇಡವೇ? ಎಂಬ ಅಭಿಪ್ರಾಯಗಳು ಕೇಳಿ ಬರುತ್ತವೆ. ಆದರೆ ಪ್ರಜಾಪ್ರಭುತ್ವದ ಮೂಲ ತತ್ವಾನುಸಾರ ಒಬ್ಬ ಸಾಮಾನ್ಯ ಅನಕ್ಷರಸ್ಥನೂ ಜನಪ್ರತಿನಿಧಿಯಾಗಿ ಆರಿಸಿ ಬರುವಂತಿರಬೇಕು ಎಂಬ ಕಾರಣದಿಂದ ವಿದ್ಯಾರ್ಹತೆ ನಿಗದಿಪಡಿಸಿಲ್ಲ ಎಂಬುದು ಮೇಲುನೋಟಕ್ಕೆ ಕಂಡು ಬರುತ್ತದೆ. ಆದರೆ ಸ್ವಾತಂತ್ರ್ಯ ಬಂದು ಏಳು ದಶಕದ ನಂತರವೂ ಇದೇ ಆಶಯ ಮುಂದುವರೆಯ ಬೇಕೇ? ಎಂದು ಕೇಳುವವರೂ ಸಾಕಷ್ಟು ಜನರಿದ್ದಾರೆ.

ಈ ಬಗ್ಗೆ ಪರಿಶೀಲನೆ ಆಗಬೇಕು. ಈ ಹಿಂದೆ ವಿದ್ಯಾಭ್ಯಾಸ ಬಹಳ ಕಷ್ಟದ ಕೆಲಸವಾಗಿತ್ತು. ಶಾಲೆಗಳು ಈಗಿನಂತೆ ಎಲ್ಲೆಂದರಲ್ಲಿ ಇರಲಿಲ್ಲ. ಹತ್ತಾರು ಮೈಲಿ ನಡೆಯಬೇಕು. ಇಡೀ ದಿನ ಇದರಲ್ಲೇ ಕಳೆದು ಹೋಗುತ್ತಿತ್ತು. ಅಲ್ಲದೇ ಆಗಿನ ಬಹುಮುಖ್ಯ ಕಸುಬು ವ್ಯವಸಾಯವೇ ಆಗಿದ್ದು ದರಿಂದ ಹಾಗೂ ಅದರಿಂದಲೇ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗುತ್ತಿದ್ದುದ್ದರಿಂದ ವಿದ್ಯಾಭ್ಯಾಸಕ್ಕೆ ಜನ ಹೆಚ್ಚು ಗಮನ ಹರಿಸುತ್ತಿರಲಿಲ್ಲ. ಆದರೆ ಇಂದು ಪರಿಸ್ಥಿತಿ ಹಾಗಿಲ್ಲ. ಹೆಚ್ಚೂ ಕಡಿಮೆ ಪ್ರತಿ ಊರಿನಲ್ಲೂ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳಿವೆ. ಐದು ಹತ್ತು ನಿಮಿಷದ ನಡಿಗೆಯಲ್ಲಿ ಶಾಲೆ ಸೇರಬಹುದು. ಸ್ವಲ್ಪ ದೊಡ್ಡ ಊರುಗಳಲ್ಲಿ ಪ್ರೌಢ ಶಾಲೆಗಳಿವೆ. ಹೋಬಳಿ ಕೇಂದ್ರಗಳಲ್ಲಿ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳಿವೆ. ಎಲ್ಲೆಡೆಯೂ ಆಂಗ್ಲ ಮಾಧ್ಯಮದ ಶಾಲೆಗಳು ತಲೆ ಎತ್ತಿವೆ. ಎಲ್ಲಕ್ಕಿಂತ ಇಂದು ಸಾರಿಗೆ ವ್ಯವಸ್ಥೆ ಸಾಕಷ್ಟು ಸುಧಾರಿಸಿದೆ. ಇಂದಿನ ಪೀಳಿಗೆಗೆ ವ್ಯವಸಾಯ ಒಂದು ಆಕರ್ಷಕ ವೃತ್ತಿಯಾಗಿಯೂ ಉಳಿದಿಲ್ಲ. ಅವರೂ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸ ಬೇಕು ಎಂಬ ಮನೋಭಾವ ಬಂದಿದೆ. ಸಾಕಷ್ಟು ಸಮಯದಿಂದ ವಯಸ್ಕರ ಶಿಕ್ಷಣವೂ ನಮ್ಮಲ್ಲಿ ನಡೆದು ಕೊಂಡು ಬಂದಿದೆ. ಹೀಗಿರುವಾಗ ಜನಪ್ರತಿನಿಧಿಗಳಿಗೆ ಕನಿಷ್ಠ ಶಿಕ್ಷಣ ನಿಗಧಿ ಪಡಿಸುವುದು ಸಂವಿಧಾನದ ಆಶಯಕ್ಕೆ ವಿರೋಧವೇನೂ ಆಗುವುದಿಲ್ಲ.

ಅದಿರಲಿ. ನಮ್ಮ ಪ್ರಜಾಪ್ರತಿನಿಧಿ ಕಾಯಿದೆಯು ತಿಳಿಸಿರುವ ರೀತಿಯಲ್ಲಿ ಚುನಾವಣೆಗಳು ನಡೆಯು ತ್ತಿವೆಯೇ? ಏಕೆಂದರೆ ಚುನಾವಣಾ ನಿಯಮಗಳು ನಮ್ಮ ಸಂವಿಧಾನದ ಆಶಯ. ಅದು ಉಲ್ಲಂಘನೆ ಯಾದರೆ ಸಂವಿಧಾನದ ಉಲ್ಲಂಘನೆಯಾದಂತೆ. ಸಂವಿಧಾನದ ಉಲ್ಲಂಘನೆ ಎಂದರೆ ಅದು ಅಪರಾಧ. ಅಪರಾಧ ಎಂದ ಮೇಲೆ ಶಿಕ್ಷೆಯಾಗಲೇಬೇಕು.

ನಮ್ಮ ಚುನಾವಣಾ ನಿಯಮಗಳ ಆಶಯ ಒಬ್ಬ ಜನಾನುರಾಗಿ ಸಾಮಾನ್ಯ ಮನುಷ್ಯ ಶಾಸನಸಭೆಗೆ ಆರಿಸಿ ಬರಬೇಕೆಂಬುದೇ ಆಗಿದೆ. ಏಕೆಂದರೆ ಜನರು ತಮಗೆ ಬೇಕಾದವರನ್ನು ತಮ್ಮ ಪ್ರತಿನಿಧಿಯಾಗಿ ಆರಿಸಿ ಕಳುಹಿಸಬಹುದು. ಚುನಾವಣೆಯಲ್ಲಿ ಜಾತಿ, ಧರ್ಮ, ಹಣ, ಭಾಷೆ ಇವುಗಳು ಪ್ರಭಾವ ಬೀರ ಬಾರದು. ದೇಶದಿಂದ ಜಾತಿ ವ್ಯವಸ್ಥೆ ತೊಲಗಬೇಕೆಂಬುದೇ ಸಂವಿಧಾನದ ಆಶಯ. ಹಾಗಾಗಿ ಸರ್ಕಾರಗಳು ಯಾವ ಜಾತಿಯ ಜನರು ಎಷ್ಟಿದ್ದಾರೆ ಎಂದು ಸಾಮಾನ್ಯ ವಾಗಿ ದಾಖಲಿಸುವುದಿಲ್ಲ. (ಆದರೆ ಪರಿಶಿಷ್ಠ ಜಾತಿ/ಪಂಗಡಗಳ ಬಗ್ಗೆ ಮಾತ್ರ, ಅದೂ ಅವರನ್ನು ಮುಖ್ಯ ವಾಹಿನಿಗೆ ತರಬೇಕೆಂಬ ಉದ್ದೇಶದಿಂದ, ಅವರ ಜನಸಂಖ್ಯೆ ದಾಖಲಿಸಿ, ಕೆಲವು ಕ್ಷೇತ್ರಗಳನ್ನು ಮೀಸಲಿ ಡುತ್ತದೆ.) ಇದು ಜಾತ್ಯಾತೀತ ವ್ಯವಸ್ಥೆಯ ಬಹು ಮುಖ್ಯ ಅಂಶ. (ಪರಿಶಿಷ್ಠ ಜಾತಿ/ಪಂಗಡದ ಮೀಸಲು ಸ್ಥಾನಗಳನ್ನೂ ಆಗಾಗ್ಗೆ ಕ್ಷೇತ್ರಗಳ ಪುನರ್ ವಿಂಗಡಣೆಯ ಸಮಯದಲ್ಲಿ ಬದಲಾವಣೆ ಮಾಡಲಾಗುತ್ತದೆ.)

ಆದರೆ ಇತ್ತಿಚೆಗೆ ಈಗ ನಡೆದ, ಚುನಾವಣೆಯಲ್ಲಿ ಜಾತಿಯ ಅಂಶವೇ ಎಷ್ಟು ಪ್ರಾಧಾನ್ಯತೆ ಪಡೆದಿತ್ತು ಎಂಬುದನ್ನು ನಾವು ಕಂಡಿದ್ದೇವೆ. ಯಾವ ಕ್ಷೇತ್ರದಲ್ಲಿ ಯಾವ ಜಾತಿಯವರು ಜಾಸ್ತಿ ಇದ್ದಾರೆ? ಅಲ್ಲಿ ಅದೇ ಜಾತಿಯವರನ್ನು ಅಭ್ಯರ್ಥಿಯಾಗಿ ನಿಲ್ಲಿಸಿದರೆ, ಆ ಜಾತಿಯ ಎಲ್ಲರೂ ಆ ಅಭ್ಯರ್ಥಿಗೇ ಮತ ಹಾಕಿ ಗೆಲ್ಲಿಸಿಬಿಡುತ್ತಾರೆ ಎಂಬ ನಂಬಿಕೆಯಿಂದ ಅಂತಹ ಅಭ್ಯರ್ಥಿಗಳನ್ನೇ ಸ್ಪರ್ಧೆಗೆ ಇಳಿಸುತ್ತಾರೆ. ಇದು ಪ್ರಜಾಪ್ರಭುತ್ವದ ಆಶಯಕ್ಕೆ ವಿರೋಧಾ ಭಾಸದಂತೆ ಕಂಡುಬರುತ್ತದೆ. ಆದರೆ ಇದೇ ತಂತ್ರವನ್ನು ಎಲ್ಲ ಪಕ್ಷಗಳು ಅನುಸರಿಸುತ್ತವೆ. ಎಲ್ಲ ಪಕ್ಷಗಳೂ ಅದೇ ಜಾತಿಯ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದರೆ, ಆ ಜಾತಿಯ ಜನ ಏನು ಮಾಡ ಬೇಕು? ಹಾಗೂ ಉಳಿದ ಜಾತಿಯವರು ಏನು ಮಾಡಬೇಕು?. ಉತ್ತರವಿಲ್ಲ. ಇದೇ ನೀತಿ ಮುಂದು ವರೆದರೆ ಆ ಕ್ಷೇತ್ರಕ್ಕೆ ಚುನಾವಣಾ ಆಯೋಗ ಮೀಸಲಾತಿ ನಿರ್ಧರಿಸದಿದ್ದರೂ ಮೀಸಲಾತಿ ಅಳವಡಿಸಿಕೊಂಡಂತೆ ಆಗುತ್ತಿಲ್ಲವೇ. ಅದೇ ಕ್ಷೇತ್ರಕ್ಕೆ ಸೇರಿದ ಇತರೆ ಜಾತಿಯ ಒಬ್ಬ ಆ ಕ್ಷೇತ್ರದಿಂದ ಗೆಲ್ಲಲು ಸಾಧ್ಯವೇ ಇಲ್ಲ. ಇದನ್ನು ಹೇಗೆ ಪ್ರಜಾ ತಂತ್ರ ಎನ್ನುವುದು? ಇದು ಭವಿಷ್ಯದ ಭಾರತದ ಹಿತದೃಷ್ಟಿಯಿಂದ ಬದಲಾಗಬೇಕು ಎನಿಸುವುದಿಲ್ಲವೇ?

ಇನ್ನು ಚುನಾವಣೆಗಳಲ್ಲಿ ಹಣ, ಅಧಿಕಾರಗಳು ಕೆಲಸ ಮಾಡಬಾರದು. ಆದರೆ ಈಗ ನಡೆಯುತ್ತಿರು ವುದೇನು? ಹಣವಿಲ್ಲದವರು ಚುನಾವಣೆ ಎದುರಿಸಿ ಗೆದ್ದು ಬರಲು ಸಾಧ್ಯವಿದೆಯೇ? (ಕೊನೆಗೆ ಚುನಾ ವಣಾ ಆಯೋಗವೇ ಅಭ್ಯರ್ಥಿಗಳು ಇಂತಹ ಚುನಾವಣೆಗೆ ಇಷ್ಟು ಖರ್ಚು ಮಾಡಬಹುದು ಎಂದು ತಿಳಿಸುವಷ್ಟರ ಮಟ್ಟಿಗೆ ಹಣ ಚುನಾವಣೆಯಲ್ಲಿ ಕೆಲಸ ಮಾಡುತ್ತದೆ. ಮೊದಲು ಚುನಾವಣೆಯ ವೆಚ್ಚದ ಬಗ್ಗೆ ನೀತಿ ನಿಯಮಗಳಿರಲಿಲ್ಲ. ಆದರೆ ಇತ್ತೀಚೆಗೆ ಹಣವೇ ಚುನಾವಣಾ ವ್ಯವಸ್ಥೆಯನ್ನು ನುಂಗುವಂತೆ ಮಾಡುತ್ತಿರುವುದರಿಂದ ಚುನಾವಣಾ ಆಯೋಗ ಗರಿಷ್ಠ ಮಿತಿ ಹೇರಿ ಸಮಾಧಾನ ಪಟ್ಟುಕೊಂಡಂತಿದೆ.) ಇದಕ್ಕೆ ಕಡಿವಾಣ ಹಾಕಲೇಬೇಕು. ಇಲ್ಲದಿದ್ದರೆ ಒಬ್ಬ ಪ್ರಾಮಾಣಿಕ ವ್ಯಕ್ತಿ ಚುನಾಯಿತ ನಾಗಲು ಸಾಧ್ಯವೇ ಆಗುವುದಿಲ್ಲ.

ಇದೆಲ್ಲ ಒಂದು ಭಾಗವಾದರೆ ನಮ್ಮ ಮತ ದಾರರು ಮತದಾನ ಮಾಡಲು ಆಸಕ್ತಿ ತೋರದಿರು ವುದೂ ಆತಂಕದ ವಿಷಯವೇ. ನಿಜ. ಅನೇಕ ಸಲ ಸುಶಿಕ್ಷಿತ ಮತದಾರರು, ನಿಂತಿರುವ ಎಲ್ಲ ಅಭ್ಯರ್ಥಿಗಳೂ ಅಯೋಗ್ಯರೇ ಎಂದು ತಾವೇ ತೀರ್ಮಾನಿಸಿ ಮತಗಟ್ಟೆಗೆ ಹೋಗುವುದಿಲ್ಲ. ಇದನ್ನು ಗಮನಿಸಿದ ಚುನಾವಣಾ ಆಯೋಗ ‘ನೋಟ’ (none of the above) ಎಂಬುದನ್ನು ಜಾರಿಗೆ ತಂದಿದ್ದು, ಹೀಗಾದರೂ ಸುಶಿಕ್ಷಿತರು ಮತಗಟ್ಟೆಗೆ ಬಂದು ತಮ್ಮ ಅಭಿಪ್ರಾಯ ತಿಳಿಸಲಿ ಎಂದು ತನ್ನತನದಿಂದ ತುಸು ಬಾಗಿದ್ದರೂ ನಗರ ಪ್ರದೇಶದ ಸುಶಿಕ್ಷಿತ (?) ಮತದಾರರು ಮತಗಟ್ಟೆಗೆ ತೆರಳದೇ, ಮತದಾನದಲ್ಲಿ ಭಾಗವಹಿಸದೇ ನಂತರ ಐದು ವರ್ಷ ಸರ್ಕಾರದ ಬಗ್ಗೆ ಟೀಕೆ ಟಿಪ್ಪಣಿ ಮಾಡುತ್ತಾರೆ. ಇದು ಎಷ್ಟರಮಟ್ಟಿಗೆ ಸರಿ?

ಇದೀಗ ಕರ್ನಾಟಕದ ವಿಧಾನಸಭೆ ಚುನಾವಣೆ ಮುಗಿದಿದೆ. ಆದರೆ ಮುಂದಿನ ದಿನಗಳಲ್ಲಿ ಚುನಾ ವಣೆಗಳು ಬರಲಿವೆ. ಮುಂದಿನ ತಿಂಗಳು ವಿಧಾನ ಪರಿಷತ್ತಿನ ಕೆಲವು ಸ್ಥಾನಗಳಿಗೆ ಚುನಾವಣೆ, ಆನಂತರ ಸ್ಥಳೀಯ ಸಂಸ್ಥೆಗಳ ಚುನಾವಣೆ, ಮುಂದಿನ ವರ್ಷ ಲೋಕಸಭಾ ಚುನಾವಣೆ (ತಕ್ಷಣಕ್ಕೆ ಮತ್ತೊಮ್ಮೆ ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯದಿರಲಿ!!!) – ಹೀಗೆ ಸಾಲು ಸಾಲು ಚುನಾ ವಣೆಗಳು ಬರಲಿವೆ. ಚುನಾವಣೆಗಳು ಪ್ರಜಾಪ್ರಭುತ್ವ ತತ್ವಗಳನ್ನು ಎತ್ತಿ ಹಿಡಿಯುವಂತೆ ಆಗಬೇಕೆಂಬುದೇ ನಾಗರಿಕರ ಆಶಯವಾಗಿದೆ.

Email: [email protected]

Translate »