ಚಾಮರಾಜನಗರ ಮೀಸಲು ಲೋಕಸಭಾ ಚುನಾವಣೆ  ಗಮನ ಸೆಳೆದ ಮತದಾನದ ಮಹತ್ವ ಜಾಗೃತಿ ವಸ್ತು ಪ್ರದರ್ಶನ
ಚಾಮರಾಜನಗರ

ಚಾಮರಾಜನಗರ ಮೀಸಲು ಲೋಕಸಭಾ ಚುನಾವಣೆ ಗಮನ ಸೆಳೆದ ಮತದಾನದ ಮಹತ್ವ ಜಾಗೃತಿ ವಸ್ತು ಪ್ರದರ್ಶನ

April 8, 2019

ಚಾಮರಾಜನಗರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಆಯೋಜಿಸಿರುವ ಮಾಹಿತಿ ವಸ್ತು ಪ್ರದರ್ಶನ ಗಮನ ಸೆಳೆಯುತ್ತಿದೆ.

ಚುನಾವಣಾ ಆಯೋಗ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿರುವ 4 ದಿನಗಳ ಜಾಗೃತಿ ವಸ್ತು ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ.ಕಾವೇರಿ ಚಾಲನೆ ನೀಡಿದರು.

ಪವಿತ್ರ ಮತದಾನದ ಹಕ್ಕು, ನೈತಿಕ ಮತದಾನ ಮಾಡುವಂತೆ ಪ್ರೇರೆಪಿಸಲು ಹಾಗೂ ಚುನಾವಣಾ ಸಂಬಂಧ ಮಾಹಿತಿ ನೀಡುವ ವಿವರಗಳನ್ನೊಳಗೊಂಡ ವಸ್ತು ಪ್ರದರ್ಶನದ ಪ್ರಯೋಜನ ಹೆಚ್ಚಿನ ನಾಗರಿಕರಿಗೆ ತಲುಪಲೆಂದು ಜಿಲ್ಲಾಧಿಕಾರಿ ಹಾರೈಸಿದರು. ವಸ್ತು ಪ್ರದರ್ಶನದಲ್ಲಿ ಮತದಾನದ ಪ್ರಾಮುಖ್ಯತೆ, ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲು ಮಾಡಲು, ಸಿ-ವಿಜಿಲ್ ಆಪ್, ಚುನಾವನಾ ಆಪ್ ಬಳಕೆ ಕುರಿತು ಸಚಿತ್ರ ಸಹಿತ ಮಾಹಿತಿ ನೀಡಲಾಗುತ್ತಿದೆ.

ಮತ ಜಾಗೃತಿ ಘೋಷ ವಾಕ್ಯಗಳು, ಅಮಿಷಕ್ಕೆ ಮರುಳಾಗದಿರಿ, ವಿವೇಚನೆಯಿಂದ ಮತ ಚಲಾಯಿಸಿ, ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು ಎಂಬಿತ್ಯಾದಿ ತಿಳಿವಳಿಕೆ ನೀಡುವ ಫಲಕಗಳು ಸಹ ಅರಿವು ಮೂಡಿಸುತ್ತಿವೆ. ವಿಶೇಷ ಚೇತನರು, ಹಿರಿಯ ನಾಗರಿಕರಿಗೆ ಮತಗಟ್ಟೆಯಲ್ಲಿ ಮೊದಲ ಆದ್ಯತೆ ನೀಡುವ ಕುರಿತು ಮಾಹಿತಿಗಳು ಸಹ ಲಭ್ಯವಾಗಲಿವೆ.

ಪ್ರತಿಯೊಬ್ಬರು ಮತದಾನ ಮಾಡಿದರೆ ಪ್ರಜಾಪ್ರಭುತ್ವ ಗೆಲ್ಲುತ್ತದೆ. ಮಾಡಿ ಮಾಡಿ ಮತದಾನ, ಇರಲಿ ದೇಶದ ಮೇಲೆ ಅಭಿಮಾನ ಎಂಬ ವಾಕ್ಯಗಳು ಸಹ ಗಮನ ಸೆಳೆಯುತ್ತಿವೆ. ಒಟ್ಟಾರೆ ಮತದಾರರ ಅರಿವಿಗಾಗಿ ಆಕರ್ಷಕವಾಗಿ ಆಯೋಜಿಸ ಲಾಗಿರುವ ವಸ್ತುಪ್ರದರ್ಶನ ಸಾಕಷ್ಟು ಮಾಹಿತಿ ಒಳಗೊಂಡಿದೆ.

ಉದ್ಘಾಟನೆ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಎ.ರಮೇಶ್, ಕೆಎಸ್‍ಆರ್‍ಟಿಸಿ ಹಿರಿಯ ಅಧಿಕಾರಿಗಳು ಹಾಜರಿದ್ದರು.

Translate »