ಮಾದಪ್ಪನ ಬೆಟ್ಟದಲ್ಲಿ ಯುಗಾದಿ ಸಂಭ್ರಮ
ಚಾಮರಾಜನಗರ

ಮಾದಪ್ಪನ ಬೆಟ್ಟದಲ್ಲಿ ಯುಗಾದಿ ಸಂಭ್ರಮ

April 8, 2019

ಅದ್ಧೂರಿಯಾಗಿ ನಡೆದ ಮಹದೇಶ್ವರ ಸ್ವಾಮಿಯ ಮಹಾ ರಥೋತ್ಸವ, ಲಕ್ಷಾಂತರ ಭಕ್ತರು ಭಾಗಿ
ಹನೂರು: ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಹಬ್ಬದ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಮಹಾರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು.

ಶನಿವಾರ ಮುಂಜಾನೆ 4 ಗಂಟೆ ಯಿಂದಲೇ ಮಹದೇಶ್ವರ ಸ್ವಾಮಿಗೆ ಅಭಿ ಷೇಕ, ಬಿಲ್ವಾರ್ಚನೆ ನಡೆದು ವಿವಿಧ ಪುಷ್ಪ ಗಳಿಂದ ಅಲಂಕರಿಸಿ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ಬಳಿಕ ಮಹದೇಶ್ವರರ ಉತ್ಸವ ಮೂರ್ತಿಗೆ ಬೇಡಗಂಪಣ ಜನಾಂಗದ 101 ಹೆಣ್ಣು ಮಕ್ಕಳು ಕಳಸ ಹಿಡಿದು ಸ್ವಾಮಿಗೆ ಆರತಿ ಎತ್ತಿದರು. ಬಳಿಕ ತೇರಿನಲ್ಲಿ ಮಹದೇಶ್ವರ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ನಂತರ ಸಾಲೂರು ಮಠಾಧೀಶ ಗುರುಸ್ವಾಮಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ಈ ವೇಳೆ ಪ್ರಾಧಿ ಕಾರದ ಕಾರ್ಯದರ್ಶಿ ಕೆ.ಎಂ.ಗಾಯತ್ರಿ, ಉಪ ಕಾರ್ಯದರ್ಶಿ ರಾಜಶೇಖರ ಮೂರ್ತಿ ಮತ್ತು ಅಧೀಕ್ಷಕ ಬಸವರಾಜು ಹಾಗೂ ಪ್ರಾಧಿಕಾರದ ಎಲ್ಲಾ ನೌಕರ ವರ್ಗದವರು ಮತ್ತು ಅರ್ಚಕ ವೃಂದ ಉಪಸ್ಥಿತರಿದ್ದರು.

ಮಹಾ ರಥೋತ್ಸವ : ಶನಿವಾರ ಯುಗಾದಿ ಹಬ್ಬದ ಪ್ರಯುಕ್ತ ಬೆಳಿಗ್ಗೆ 7.30ಕ್ಕೆ ಆರಂಭವಾದ ಮಾದಪ್ಪನ ಮಹಾ ರಥೋ ತ್ಸವ 9 ಗಂಟೆವರೆಗೆ ದೇಗುಲದ ಸುತ್ತ 3 ಸುತ್ತು ಪ್ರದಕ್ಷಿಣಿ ಹಾಕುವ ಮೂಲಕ ವಿಜೃಂಭಣೆ ಯಿಂದ ಸಾಗಿತು. ಈ ವೇಳೆ ಹರ್ಷೋದ್ಘಾರ ಗೊಂಡ ಮಾದಪ್ಪನ ಭಕ್ತ ಸಮೂಹ ಉಘೇ ಮಾದಪ್ಪ…. ಉಘೇ ಮಾದೇಶ್ವರ…. ಉಘೇ ಎಂದು ಜೈಕಾರ ಹಾಕಿದರು. ಹರಕೆ ಹೊತ್ತ ಭಕ್ತರು ತಮ್ಮ ಜಮೀನಿನಲ್ಲಿ ಬೆಳೆದ ಧವಸ ಧಾನ್ಯಗಳಾದ ಅವರೆ, ರಾಗಿ, ಮೆಣಸು, ನವಣೆ ಸೇರಿ ದಂತೆ ಇತರೆ ಆಹಾರ ಪದಾರ್ಥ ಗಳನ್ನು ಮೀಸಲು ಮಾಡದೆ ತೆಗೆದಿಟ್ಟು ರಥೋ ತ್ಸವದ ತೇರಿಗೆ ಎಸೆದು ಹರಕೆ ಸಮ ರ್ಪಿಸಿದ್ದು ವಿಶೇಷವಾಗಿ ಕಂಡು ಬಂತು.

ಬೆಳಿಗ್ಗೆ 10ರಿಂದ ಗುರು ಬ್ರಹ್ಮೋತ್ಸವ ಸೇವೆ ನಡೆÀಯಿತು. 11 ರಿಂದ ಅನ್ನ ಬ್ರಹ್ಮೋ ತ್ಸವ ಸೇವೆ ಹಾಗೂ ರಾತ್ರಿ 7 ಗಂಟೆಗೆ ಬಂಗಾರದ ರಥೋತ್ಸವ, ಬೆಳ್ಳಿ ಕಿರಿಟ ಉತ್ಸವ ವಿಶೇಷ ಸೇವೆಗಳು, ಭಕ್ತರಿಂದ ಬಸವ ವಾಹನ, ರುದ್ರಕ್ಷಿ ಮಂಟ ಪೋತ್ಸವ, ಹುಲಿ ವಾಹನೋತ್ಸವ ವಿವಿಧ ಉತ್ಸವಗಳು ವಿಭೃಂಜಣೆಯಿಂದ ಜರುಗಿತು.

ಭಕ್ತರ ಸಮೂಹ: ಯುಗಾದಿ ಮಹಾ ರಥೋತ್ಸವದ ಹಿನ್ನೆಲೆಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಲಕ್ಷಾಂ ತರ ಭಕ್ತರು ಧೂಪ, ಸಾಂಬ್ರಾಣಿ ಹಾಕಿ, ಉರುಳು ಸೇವೆ, ಪಂಜಿನ ಸೇವೆ ಮಾಡುವ ಮೂಲಕ ಶ್ರದ್ಧಾಭಕ್ತಿಯಿಂದ ತಮ್ಮ ಹರಕೆ ಸಲ್ಲಿಸಿದರು. ಅಲ್ಲದೇ ಮಾದಪ್ಪನಿಗೆ ಉಘೇ… ಉಘೇ… ಜೈಕಾರ ಕೂಗುವ ಮೂಲಕ ತೇರಿನ ಹಗ್ಗ ಹಿಡಿದು ತೇರನ್ನು ಎಳೆದು ಭಕ್ತಿ ಪರಾಕಾಷ್ಠೆ ಮೆರೆದರು. ಈ ಬಾರಿ ರಥೋತ್ಸವದ ವೇಳೆ ಸಾಗಾರೋ ಪಾದಿಯಲ್ಲಿ ಜನ ಸಾಗರವೇ ಕಂಡು ಬಂದಿದ್ದು ವಿಶೇಷವಾಗಿತ್ತು.

ವಿದ್ಯುತ್ ದೀಪಾಲಂಕಾರ: ಯುಗಾದಿ ಹಬ್ಬದ ಪ್ರಯುಕ್ತ 4 ದಿನಗಳು ನಡೆಯುವ ಜಾತ್ರೆಗೆ ಪ್ರಾಧಿಕಾರದ ವತಿಯಿಂದ ರಾಜಗೋಪುರ, ಮುಖ್ಯದ್ವಾರ ಹಾಗೂ ವಿವಿಧ ದ್ವಾರಗಳಿಗೆ ತಳಿರು ತೋರಣ ಮತ್ತು ವಿವಿಧ ಬಗೆಯ ಹೂಗಳಿಂದ ಅಲಂಕರಿಸಿ, ದೇವಸ್ಥಾನ, ಸಾಲೂರು ಮಠಕ್ಕೆ ಹೋಗುವ ಸ್ಥಳ ಸೇರಿದಂತೆ ಮಲೆಮಹದೇಶ್ವರ ಬೆಟ್ಟದ ವಿವಿಧೆಡೆ ವಿದ್ಯುತ್ ದೀಪಾಲಂಕಾರ ಗಳಿಂದ ಸಿಂಗರಿಸಲಾಗಿತ್ತು.

ಆಲಂಬಾಡಿ ಬಸವೇಶ್ವರನಿಗೆ ಪೂಜೆ : ಲಕ್ಷಾಂತರ ಭಕ್ತರು ಸರದಿ ಸಾಲಿನಲ್ಲಿ ನಿಂತು ಆಲಂಬಾಡಿ ಬಸವೇಶ್ವರನಿಗೆ ಹಾಲು ಮತ್ತು ಎಣ್ಣೆ ಮಜ್ಜನ ಮಾಡಿ ವಿಶೇಷ ಪೂಜೆ ಸಲ್ಲಿಸಿ ಹರಕೆ ಸಲ್ಲಿಸಿದರು.

Translate »