ವಿದ್ಯುತ್ ದೀಪಾಲಂಕಾರದ ಮೂಲಕ ಮತದಾನ ಜಾಗೃತಿ
ಮೈಸೂರು

ವಿದ್ಯುತ್ ದೀಪಾಲಂಕಾರದ ಮೂಲಕ ಮತದಾನ ಜಾಗೃತಿ

March 14, 2019

ಮೈಸೂರು: ಮೈಸೂರಿನ ಚಾಮುಂಡಿಬೆಟ್ಟದಲ್ಲಿ ವಿದ್ಯುತ್ ದೀಪಾ ಲಂಕಾರದ ಮೂಲಕ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಸ್ವೀಪ್ ಸಮನ್ವಯಾಧಿಕಾರಿಯಾದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಜ್ಯೋತಿ ತಿಳಿಸಿದ್ದಾರೆ.

ದಸರಾ ಮಹೋತ್ಸವ ಸಂದರ್ಭ ‘ಸುಸ್ವಾಗತ’ ಎಂದು ಪ್ರದರ್ಶಿಸುವಂತೆ ‘ನಿಮ್ಮ ಮತ-ನಿಮ್ಮ ಹಕ್ಕು’ ಫಲಕಕ್ಕೆ ವಿದ್ಯುತ್ ದೀಪಾಲಂಕಾರ ಮಾಡುವ ಮೂಲಕ ಲೋಕ ಸಭಾ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡಿ ಎಂದು ಅರಿವು ಮೂಡಿಸ ಲಾಗುವುದು ಎಂದು ಅವರು ತಿಳಿಸಿದರು.

ಸ್ವೀಪ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡುವ ಸಂಬಂಧ ಇಂದು ಜಿಲ್ಲಾ ಪಂಚಾಯ್ತಿ ಕಚೇರಿ ಕಿರು ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜ್ಯೋತಿ ಅವರು ಜಿಲ್ಲೆಯಾದ್ಯಂತ ಎಲ್ಲಾ ಸರ್ಕಲ್‍ಗಳಲ್ಲಿಯೂ ಮತ ಜಾಗೃತಿ ಫಲಕಗಳನ್ನು ಅಳವಡಿಸಬೇಕೆಂದು ಸೂಚಿಸಿದರು.

ಹೆಚ್.ಡಿ.ಕೋಟೆ, ಹುಣಸೂರು ಹಾಗೂ ಪಿರಿಯಾಪಟ್ಟಣ ತಾಲೂಕಿನ ಹಾಡಿಗಳು ಹಾಗೂ ಹೆದ್ದಾರಿಗಳಲ್ಲಿ ‘ನಿಮ್ಮ ಮತ-ನಿಮ್ಮ ಹಕ್ಕು’ ಫಲಕಗಳನ್ನು ಅಳವಡಿಸುವುದು, ಕೆಎಸ್‍ಆರ್‍ಟಿಸಿ ಬಸ್ಸುಗಳು, ನಂದಿನಿ ಹಾಲಿನ ಪ್ಯಾಕೆಟ್‍ಗಳ ಮೇಲೆ ಪ್ರಚಾರ ಮಾಡಬೇಕೆಂದು ಅವರು ತಿಳಿಸಿದರು. ಬೀದಿ ನಾಟಕಗಳು, ಜಾನಪದ ಕಲಾವೃಂದದ ವರಿಂದ ಮತದಾನದ ಬಗ್ಗೆ ಜಾಗೃತಿ ಮೂಡಿಸುವಂತೆಯೂ ಸಭೆಯಲ್ಲಿ ಸ್ವೀಪ್ ಸಮಿತಿ ಅಧಿಕಾರಿಗಳಿಗೆ ಜ್ಯೋತಿ ಅವರು ಸೂಚನೆ ನೀಡಿದರು.

Translate »