ಹೈಕಮಾಂಡ್ ಸೂಚನೆಗಾಗಿ ಕಾಯುತ್ತಿದ್ದೇನೆ: ಬಿಎಸ್‍ವೈ
ಮೈಸೂರು

ಹೈಕಮಾಂಡ್ ಸೂಚನೆಗಾಗಿ ಕಾಯುತ್ತಿದ್ದೇನೆ: ಬಿಎಸ್‍ವೈ

July 25, 2019

ಬೆಂಗಳೂರು, ಜು.24- ರಾಜ್ಯದಲ್ಲಿ 14 ತಿಂಗಳ ನಂತರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಿದ್ದು, ನೂತನ ಸರ್ಕಾರ ರಚಿಸಲು ಸಿದ್ಧರಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂ ರಪ್ಪ ಹೈಕಮಾಂಡ್ ಸೂಚನೆಗಾಗಿ ಕಾಯುತ್ತಿದ್ದಾರೆ. ರಾಜ್ಯ ದಲ್ಲಿ ಮೈತ್ರಿ ಸರ್ಕಾರ ಪತನಗೊಂಡಿದ್ದು, ಪರ್ಯಾಯ ಸರ್ಕಾರ ರಚನೆಯ ಹಕ್ಕು ಮಂಡಿಸುವ ಸಂಬಂಧ ಪಕ್ಷದ ಕೇಂದ್ರ ನಾಯಕರ ಸೂಚನೆಗಾಗಿ ಕಾಯುತ್ತಿರುವುದಾಗಿ ಯಡಿಯೂರಪ್ಪ ಅವರು ಬುಧವಾರ ತಿಳಿಸಿದ್ದಾರೆ.

ಇಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕೇಶವ ಕೃಪಾಗೆ ಭೇಟಿ ನೀಡಿ, ಆರ್ ಎಸ್‍ಎಸ್ ನಾಯಕ ರೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಯಡಿ ಯೂರಪ್ಪ, ನಾನು ಪಕ್ಷದ ವರಿಷ್ಠರ ಸೂಚನೆಗಾಗಿ ಕಾಯು ತ್ತಿದ್ದೇನೆ. ದೆಹಲಿಯಿಂದ ಸೂಚನೆ ಬಂದ ತಕ್ಷಣ ಶಾಸಕಾಂಗ ಸಭೆ ಕರೆಯುತ್ತೇನೆ. ಸಭೆಯ ನಂತರ ರಾಜಭವನಕ್ಕೆ ತೆರಳಿ ನೂತನ ಸರ್ಕಾರ ರಚಿಸುವ ಹಕ್ಕು ಮಂಡಿಸುವುದಾಗಿ ತಿಳಿಸಿದ್ದಾರೆ. ನಾನು ಆರ್‍ಎಸ್‍ಎಸ್ ಮೂಲದಿಂದ ಬಂದವನಾದ್ದರಿಂದ ಸಂಘಟನೆಯ ಸಲಹೆಗಳನ್ನು ಪಡೆದಿದ್ದಾಗಿ ಬಿಎಸ್‍ವೈ ಹೇಳಿದ್ದಾರೆ. ಮೂಲಗಳ ಪ್ರಕಾರ, ಯಡಿಯೂರಪ್ಪ ಅವರು ನಾಳೆ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚಿಸಲು ಹಕ್ಕು ಮಂಡಿಸುವ ಸಾಧ್ಯತೆ ಇದೆ. ಇದಕ್ಕೂ ಮೊದಲು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಿ ಯಡಿಯೂರಪ್ಪ ಅವರನ್ನು ಅಧಿಕೃತವಾಗಿ ಮತ್ತೊಮ್ಮೆ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡುವ ನಿರೀಕ್ಷೆ ಇದೆ. ಈ ಮಧ್ಯೆ, ನಾಲ್ಕನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿ ಯಾಗಲಿರುವ ಯಡಿಯೂರಪ್ಪ ನಿವಾಸದಲ್ಲಿ ಸಂಭ್ರಮ ಮನೆ ಮಾಡಿದ್ದು, ಇಂದು ಬೆಳಗ್ಗಿನಿಂದಲೇ ಕಾರ್ಯಕರ್ತರು, ಪಕ್ಷದ ಮುಖಂಡರು ಅವರ ನಿವಾಸಕ್ಕೆ ಆಗಮಿಸಿ ಸಹಿ ತಿಂಡಿ ವಿತರಿಸಿ ಹರ್ಷ ವ್ಯಕ್ತಪಡಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

Translate »