ವ್ಯರ್ಥವಾದ ಸಭೆ ಸಮಯ: ಅಧ್ಯಕ್ಷರ ಕಚೇರಿ, ಲಿಫ್ಟ್ ಅಳವಡಿಕೆಯದ್ದೇ ಚರ್ಚೆ
ಹಾಸನ

ವ್ಯರ್ಥವಾದ ಸಭೆ ಸಮಯ: ಅಧ್ಯಕ್ಷರ ಕಚೇರಿ, ಲಿಫ್ಟ್ ಅಳವಡಿಕೆಯದ್ದೇ ಚರ್ಚೆ

July 26, 2018

ಹಾಸನ:  ಜಿಪಂ ಹೊಯ್ಸಳ ಸಭಾಂಗಣದಲ್ಲಿಂದು ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರ ಕೊಠಡಿ ನಿರ್ಮಾಣ, ಹೊಸ ಲಿಫ್ಟ್ ಅಳವಡಿಕೆ ವಿಚಾರ ಚರ್ಚೆಗೆ ಗ್ರಾಸವಾಗಿ ಅಭಿವೃದ್ಧಿ ಬಗ್ಗೆ ಚರ್ಚೆಯಾಗದೇ ಹೆಚ್ಚಿನ ಸಮಯ ವ್ಯರ್ಥವಾಯಿತು.

ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ಯಲ್ಲಿ ಮೊದಲು ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜು ಅವರ ಕಚೇರಿ ನಿರ್ಮಾಣಕ್ಕೆ 10 ಲಕ್ಷ ರೂ.ಗಳನ್ನು ಸಭೆಯಲ್ಲಿ ಯಾವ ಸದಸ್ಯರ ಅನುಮೋದನೆ ಪಡೆಯದೇ ನಿರ್ವಹಿಸಿರುವುದರ ಬಗ್ಗೆ ಆಕ್ಷೇಪ ವ್ಯಕ್ತವಾಯಿತು. ಈ ಬಗ್ಗೆ ಹಲವು ಸದಸ್ಯರೊಂದಿಗೆ ಧ್ವನಿಗೂಡಿಸಿದ ಮಾಜಿ ಉಪಾಧ್ಯಕ್ಷ ಶ್ರೀನಿವಾಸ್ ಮತ್ತು ಲೋಕೇಶ್ ಅವರು, ಜಿಲ್ಲಾ ಪಂಚಾಯಿತಿಯಲ್ಲಿ ಮಹಡಿಗಳಿಗೆ ತೆರಳಲು ಲಿಫ್ಟ್ ಇದ್ದರೂ ಕೂಡ ಮತ್ತೊಂದು ಲಿಫ್ಟ್ ಅನ್ನು ನೂತನವಾಗಿ ಅಳವಡಿಸಲು 21 ಲಕ್ಷ ರೂ. ವೆಚ್ಚ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದರಿಂದ ಕೆಲ ಸಮಯ ಸಭೆಗದ್ದಲದ ಗೂಡಾಯಿತು.

ಹಣಕಾಸು ಸ್ಥಾಯಿ ಸಮಿತಿಯಲ್ಲಿ ವಿಷಯ ಅಂತಿಮಗೊಳಿಸಿ ಲಿಫ್ಟ್‍ಗೆ 21 ಲಕ್ಷ ರೂ. ಪಾವತಿಸಿರುವುದು ತಪ್ಪು. ಸ್ಥಾಯಿ ಸಮಿತಿಯ ನಿರ್ಣಯಗಳೇ ಅಂತಿಮವಾದರೆ ಸಾಮಾನ್ಯ ಸಭೆಯ ಅಗತ್ಯವೇನು? ಎಂದು ಭವಾನಿ ರೇವಣ್ಣ ಪ್ರಶ್ನಿಸಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರೂ ಸಹ ಧ್ವನಿಗೂಡಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಕಾಮ ಗಾರಿಗಳನ್ನು ನಿರ್ಮಿತಿ ಕೇಂದ್ರ ಮತ್ತು ಭೂ ಸೇನಾ ನಿಗಮಕ್ಕೆ ವಹಿಸಬಾರದೆಂಬ ನಿರ್ಣಯ ಅಂಗೀಕರಿಸಿದ್ದರೂ ಸಹ ಅಧಿಕಾರಿ ಗಳು ಹಣದ ಆಸೆಗೆ ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ ವಹಿಸಿದ್ದಾರೆಂದು ಭವಾನಿ ರೇವಣ್ಣ ಇದೇ ವೇಳೆ ತರಾಟೆ ತೆಗೆದುಕೊಂಡರು. ಇದಕ್ಕೆ ದನಿಗೂಡಿಸಿದ ಪಟೇಲ್ ಶಿವಣ್ಣ, ಶ್ರೀನಿವಾಸ್ ಮತ್ತು ರೇವಣ್ಣ ಅಕ್ರಮಕ್ಕೆಲ್ಲಾ ನೀವೇ ಹೊಣೆ ಎಂದು ದೂರಿದರು.

ಸದಸ್ಯರ ಆರೋಪಗಳಿಗೆ ಸ್ಪಷ್ಟನೆ ನೀಡಿದ ಅಧಿಕಾರಿ ನಾಗಾರಾಜ್, 5 ವರ್ಷಗಳ ಹಿಂದೆ ನಮೂದಿಸಿದ ಬೆಲೆಯಲ್ಲಿ 17 ಲಕ್ಷ ರೂ. ಲಿಫ್ಟ್‍ಗೆ ಮತ್ತು ಇದಕ್ಕೆ ಸಂಬಂಧಪಟ್ಟಂತೆ ಜಿಎಸ್‍ಟಿ ಪಾವತಿಸಲು 4 ಲಕ್ಷ ರೂ. ಸೇರಿಸಿ ಒಟ್ಟು 21 ಲಕ್ಷ ರೂ.ಗಳಾಗಿದೆ ಎಂದು ಸಮಾಜಾಯಿಷಿ ನೀಡಿದರು. ಚರ್ಚೆ ಹಾದಿ ತಪ್ಪುತ್ತಿದ್ದನ್ನು ಕಂಡು ಮಧ್ಯ ಪ್ರವೇಶಿಸಿದ ಭವಾನಿ ರೇವಣ್ಣರವರು, ಲಿಫ್ಟ್ ಮತ್ತು ಅಧ್ಯಕ್ಷರ ಕೊಠಡಿ ನವೀಕರಣಕ್ಕೆ 21 ಲಕ್ಷ ರೂ. ವೆಚ್ಚ ಮಾಡಿರುವುದನ್ನು ಸದಸ್ಯರ ಗಮನಕ್ಕೆ ತರಬೇಕಿತ್ತು. ಅಧಿಕಾರಿಗಳು ಮಾಡುವ ನಿರ್ಲಕ್ಷ್ಯಕ್ಕೆ ಈ ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಇನ್ನು ಮುಂದೆ ಹೀಗಾಗದಂತೆ ಎಚ್ಚರವಹಿಸಿ ಎಂದು ಚರ್ಚೆಗೆ ನಾಂದಿ ಹಾಡಿದರು.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಗುತ್ತಿಗೆ ನೌಕರರಿಗೆ ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ವೇತನ ನೀಡಬೇಕೆಂಬ ಸದಸ್ಯ ಸ್ವಾಮಿಗೌಡರ ಆಗ್ರಹಕ್ಕೆ ಧ್ವನಿಗೂಡಿಸಿದ ಭವಾನಿ ರೇವಣ್ಣ, ಗುತ್ತಿಗೆ ಪಡೆದ ಖಾಸಗಿ ಏಜೆಂಟ್‍ಗಳನ್ನು ಹದ್ದು ಬಸ್ತಿನಲ್ಲಿಡಬೇಕು. ಗುತ್ತಿಗೆನೌಕರರನ್ನು ನೇಮಕ ಮಾಡಿಕೊಳ್ಳುವಾಗ ಜಿಪಂ ಸದಸ್ಯರು ಶಿಫಾರಸ್ಸು ಮಾಡಿದವರಿಗೆ ಆದ್ಯತೆ ನೀಡ ಬೇಕು ಎಂದು ಸೂಚಿಸಿದರು. ಅನೇಕ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲದೆ ರೋಗಿಗಳು ಪರದಾಡುವಂತಾಗಿದ್ದು, ಖಾಸಗಿ ಆಸ್ಪತ್ರೆಗೆ ಬರೆದುಕೊಡಲಾಗುತ್ತಿದೆ. ಕೆಲವೆಡೆ ತುರ್ತು ವಾಹನವೇ ಇಲ್ಲ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಜಗದೀಶ್ ಮತ್ತು ಉಪಾಧ್ಯಕ್ಷ ಸುಪ್ರದೀಪ್ ಯಜಮಾನ್ ಇತರರಿದ್ದರು.

Translate »