ಕೆಆರ್‍ಎಸ್, ಕಬಿನಿಯಿಂದ ನೀರು ಬಿಡುಗಡೆ ಪ್ರವಾಹದಿಂದ ಗ್ರಾಮ ತೊರೆಯುತ್ತಿರುವ ಜನರು
ಚಾಮರಾಜನಗರ

ಕೆಆರ್‍ಎಸ್, ಕಬಿನಿಯಿಂದ ನೀರು ಬಿಡುಗಡೆ ಪ್ರವಾಹದಿಂದ ಗ್ರಾಮ ತೊರೆಯುತ್ತಿರುವ ಜನರು

August 19, 2018

ದಾಸನಪುರ ಪ್ರವೇಶ ನಿಷೇಧ, ಗಂಜಿ ಕೇಂದ್ರಗಳಿಗೆ ಸಂತ್ರಸ್ತರ ಸ್ಥಳಾಂತರ, ಜನರ ಸಂಕಷ್ಟ ಆಲಿಸಿದ ಜನಪ್ರತಿನಿಧಿಗಳು
ಕೊಳ್ಳೇಗಾಲ:  ಎತ್ತನೋಡಿದರು ನೀರು. ಜೀವ ರಕ್ಷಣೆಗಾಗಿ ಗ್ರಾಮಗಳನ್ನು ತೊರೆದು ನೀರಿನ ನಡುವೆಯೇ ಮನೆ ಸಾಮಗ್ರಿಗಳು, ಜಾನುವಾರುಗಳನ್ನು ಸಾಗಿಸುತ್ತಿರುವ ಗ್ರಾಮಸ್ಥರು. ವಯೋವೃದ್ಧರನ್ನು ಕರೆದ್ಯೊಯುತ್ತಿರುವ ರಕ್ಷಣಾ ಸಿಬ್ಬಂದಿ….
-ಇದು ತಾಲೂಕಿನ ದಾಸನಪುರ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ಕಂಡು ಬಂದ ದೃಶ್ಯ.

ನಿರಂತರ ಮಳೆಯಿಂದ ಕೆಆರ್‍ಎಸ್, ಕಬಿನಿ ಜಲಾಶಯಗಳಿಂದ 3ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಬಿಡುಗಡೆ ಮಾಡಿದ ಹಿನ್ನಲೆಯಲ್ಲಿ ತಾಲೂಕಿನ ಹಲವು ಗ್ರಾಮಗಳು ಮುಳುಗಡೆಯಾಗಿದ್ದು, ಜೀವ ರಕ್ಷಣೆಗಾಗಿ ಜನರು ಗ್ರಾಮಗಳನ್ನು ತೊರೆಯುತ್ತಿದ್ದಾರೆ.

ತಾಲೂಕಿನ ದಾಸನಪುರ, ಹಂಪಾಪುರ, ಹಳೆ ಅಣಗಳ್ಳಿ, ಹರಳೆ ಹಾಗೂ ಎಡಕುರಿ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಗ್ರಾಮಸ್ಥರು ಜಾನುವಾರುಗಳ ಸಮೇತವಾಗಿ ಗ್ರಾಮಗಳನ್ನು ತೊರೆದು ಗಂಜಿ ಕೇಂದ್ರಗಳತ್ತ ತೆರಳುತ್ತಿದ್ದಾರೆ.
ಜಿಲ್ಲಾಡಳಿತದಿಂದ ಹೈ ಅಲರ್ಟ್: ನೆರೆ ಪೀಡಿತ ಪ್ರದೇಶಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಜಿಲ್ಲಾಡಳಿತ ತಗ್ಗು ಪ್ರದೇಶಗಳಲ್ಲಿರುವ ಜನರನ್ನು ರಕ್ಷಣೆ ಕಾರ್ಯಕ್ಕೆ ಮುಂದಾಗಿದೆ. ಪ್ರವಾಹದಿಂದ ಜಲಾವೃತವಾಗಿರುವ ಗ್ರಾಮಗಳ ಜನರನ್ನು ಗಂಜಿ ಕೇಂದ್ರಗಳಿಗೆ ಸಾಗಿಸಲಾಗುತ್ತಿದೆ.

ಕಳೆದೆರಡು ದಿನಗಳಿಂದ ಕೊಡುಗು ಹಾಗೂ ಕೇರಳದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಜಲಾಶಯಗಳಿಂದ ಭಾರೀ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ. ಇದರಿಂದ ದಾಸನಪುರ ಗ್ರಾಮ ಜಲಾವೃತಗೊಂಡಿದ್ದು, ಶುಕ್ರವಾರ ಸಂಜೆ 70ಕ್ಕೂ ಹೆಚ್ಚು ಜನರು ಗಂಜಿ ಕೇಂದ್ರಕ್ಕೆ ಧಾವಿಸಿದ್ದಾರೆ. ಶನಿವಾರ ಬೆಳಿಗ್ಗೆಯೂ ನೀರಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಉಳಿದಿದ್ದ ಜನರನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲು ಜಿಲ್ಲಾಡಳಿತದಿಂದ ಕ್ರಮ ಕೈಗೊಳ್ಳಲಾಗಿದೆ.

ರಕ್ಷಣಾ ಸಿಬ್ಬಂದಿಗಳು ವಯೋವೃದ್ಧರು, ಜಾನುವಾರು ಸೇರಿದಂತೆ ಗ್ರಾಮಸ್ಥರನ್ನು ಸುರಕ್ಷಿತವಾಗಿ ಗಂಜಿ ಕೇಂದ್ರಗಳಿಗೆ ತಲುಪಿಸಿದರು. ಗ್ರಾಮ ಬಿಟ್ಟು ಬರಲು ಒಪ್ಪದೆ ಇದ್ದವರನ್ನು ಆಶ್ರಿತರ ಕೇಂದ್ರಕ್ಕೆ ತೆರಳುವಂತೆ ಅಧಿಕಾರಿಗಳು ಮನವೊಲಿಸಿದರು. ದಾಸನಪುರ ಗ್ರಾಮವನ್ನು ಪ್ರವೇಶಿಸಿದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಸಂತ್ರಸ್ತ್ರ ಪ್ರದೇಶಗಳಿಗೆ ಜನಪ್ರತಿನಿಧಿಗಳ ಭೇಟಿ: ಕಾವೇರಿ ನದಿ ಪ್ರವಾಹದಿಂದ ಸಂತ್ರಸ್ತ್ರವಾಗಿರುವ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್, ಸಂಸದ ಆರ್.ಧ್ರುವನಾರಾಯಣ, ಶಾಸಕ ಆರ್.ನರೇಂದ್ರ ಅವರು ಶನಿವಾರ ಭೇಟಿ ನೀಡಿ ಜನರ ಸಂಕಷ್ಟ ಆಲಿಸಿದರು.

ಕೊಳ್ಳೇಗಾಲ ಪಟ್ಟಣದಲ್ಲಿ ಪ್ರವಾಹ ಸಂತ್ರಸ್ತ್ರರಿಗಾಗಿ ತೆರೆದಿರುವ ಗಂಜಿ ಕೇಂದ್ರಕ್ಕೆ ಮೊದಲು ಭೇಟಿ ನೀಡಿದ ಸಚಿವರು, ಸಂಸದರು ಅಲ್ಲಿ ಕಲ್ಪಿಸಿರುವ ವ್ಯವಸ್ಥೆಗಳನ್ನು ಪರಿಶೀಲಿಸಿದರು, ಸಂತ್ರಸ್ತ್ರ ಜನರೊಂದಿಗೆ ಮಾತನಾಡಿ ಕಲ್ಪಿಸಲಾಗಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು.

ಇದೇ ವೇಳೆ ಸಂತ್ರಸ್ತ್ರರು ತಮಗೆ ಬಟ್ಟೆ, ಹೊದಿಕೆ ಇತರೆ ಪರಿಕರಗಳನ್ನು ಒದಗಿಸುವಂತೆ ಮನವಿ ಮಾಡಿದರು. ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಕೂಡಲೇ ಅಗತ್ಯ ವಸ್ತುಗಳನ್ನು ಪೂರೈಸುವಂತೆ ಸಚಿವರು ಆದೇಶಿಸಿದರು.

ಹಲವು ಮಹಿಳೆಯರು ಮಾತನಾಡಿ, ತಾವು ಸ್ತ್ರೀಶಕ್ತಿ ಸಂಘದ ಮೂಲಕ ಸಾಲ ಪಡೆದಿದ್ದೇವೆ ಅದನ್ನು ವಾರವಾರಕ್ಕೆ ಸಂದಾಯ ಮಾಡಬೇಕಿದೆ ಇದನ್ನು ಬ್ಯಾಂಕ್‍ಗಳಿಗೆ ಪಾವತಿಸಬೇಕಾಗಿದೆ ಎಂದು ಅಳಲು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಉಸ್ತುವಾರಿ ಸಚಿವರು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚನೆ ನೀಡಿ ಹಣ ಪಾವತಿಗೆ ಅವಕಾಶ ಕೊಡಿಸುವ ಭರವಸೆ ನೀಡಿದರು.
ನದಿ ಪ್ರವಾಹ ಹೆಚ್ಚಳವಾದ ಸಂದರ್ಭದಲ್ಲಿ ತೊಂದರೆಗೆ ಒಳಗಾಗುತ್ತಲೇ ಇದ್ದೇವೆ. ನಮಗೆ ಗ್ರಾಮದ ಹೊರಭಾಗದಲ್ಲಿ ನಿವೇಶನ ನೀಡಬೇಕು. ಶಾಶ್ವತ ಪರಿಹಾರ ಕಲ್ಪಿಸಬೇಕು. ಇದರಿಂದ ನಮ್ಮ ಕಷ್ಟ ಪರಿಹಾರವಾಗಲಿದೆ ಎಂದು ಸಂತ್ರಸ್ತ್ರರು ಕೋರಿದರು.
ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಮಾತನಾಡಿ, ಪ್ರವಾಹದಿಂದ ಉಂಟಾಗಿರುವ ಬೆಳೆ, ಮನೆ ಹಾನಿಗೆ ಪರಿಹಾರ ನೀಡಲಾಗುತ್ತದೆ, ಹೊಸದಾಗಿಯು ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗುತ್ತದೆ. ನಿವೇಶನ ರಹಿತರಿಗೆ ನಿವೇಶನ ನೀಡಲು ಸಹ ಕ್ರಮ ತೆಗೆದುಕೊಳ್ಳಲಾಗುತ್ತದೆ. ಯಾವುದಕ್ಕೂ ಆತಂಕ ಪಡಬಾರದೆಂದು ಸಾಂತ್ವನ ಹೇಳಿದರು.

ಸಂಸದ ಆರ್.ಧ್ರುವನಾರಾಯಣ ಮಾತನಾಡಿ ಜಲಾಶಯಗಳಿಂದ ಹೊರ ಬಿಡಲಾಗುತ್ತಿರುವ ನೀರಿನ ಪ್ರಮಾಣ ಸ್ವಲ್ಪ ತಗ್ಗಿಸಲಾಗಿದೆ. ಹವಾಮಾನ ತಜ್ಞರು ಇನ್ನು ಎರಡು ಮೂರು ದಿನ ಮಾತ್ರ ಮಳೆ ಬರಬಹುದು ಎಂದು ಮುನ್ಸೂಚನೆಯನ್ನು ನೀಡಿದ್ದಾರೆ. ಹೀಗಾಗಿ ಜನರು ಯಾವುದೇ ಭಯ ಪಡಬೇಕಿಲ್ಲ. ಸಧ್ಯದಲ್ಲೇ ಪರಿಸ್ಥಿತಿ ತಿಳಿಯಾಗಲಿದೆ. ಬಳಿಕ ಪರಿಹಾರ ಕ್ರಮಗಳಿಗೆ ತುರ್ತಾಗಿ ಸ್ಪಂದಿಸಲಾಗುತ್ತದೆ ಎಂದು ಧೈರ್ಯ ತುಂಬಿದರು.

ಬಳಿಕ ಹರಳೆ, ಎಡಕುರಿಯ ಗ್ರಾಮಗಳಿಗೆ ಜನಪ್ರತಿನಿಧಿಗಳು ಭೇಟಿ ಕೊಟ್ಟು ಅಲ್ಲಿನ ವಾಸ್ತವ ಪರಿಸ್ಥಿತಿಯ ಬಗ್ಗೆ ಪರಿಶೀಲಿಸಿದರು. ನೀರು ಮತ್ತಷ್ಟು ಹೆಚ್ಚಾದರೆ ಯಾವ ಬಗೆಯ ಮುಂಜಾಗರೂಕತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತದನಂತರ ಭರಚುಕ್ಕಿ ರಸ್ತೆಯಲ್ಲಿ ನಿರ್ಮಾಣವಾಗಿರುವ ಸೇತುವೆ, ದುರಸ್ತಿಗೆ ಒಳಪಡಬೇಕಿರುವ ವೆಸ್ಲಿ ಸೇತುವೆ, ಭರಚುಕ್ಕಿ ಜಲಪಾತ ಪ್ರದೇಶಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.

ಈ ವೇಳೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಉಪವಿಭಾಗಾಧಿಕಾರಿ ಬಿ.ಫೌಜಿಯಾ ತರನ್ನುಂ, ತಹಶೀಲ್ದಾರ್ ಚಂದ್ರಮೌಳಿ, ಇಓ ಉಮೇಶ್ ಇತರೆ ಅಧಿಕಾರಿಗಳು ಇದ್ದರು.

Translate »