`ಹೇಮಾವತಿ’ಯಿಂದ ಕೆರೆಗಳಿಗೆ ನೀರು
ಹಾಸನ

`ಹೇಮಾವತಿ’ಯಿಂದ ಕೆರೆಗಳಿಗೆ ನೀರು

June 23, 2018

ಹಾಸನ: ಪ್ರಸ್ತುತ ಸನ್ನಿವೇಶದಲ್ಲಿ ನೀರು ಬಂಗಾರಕ್ಕೆ ಸಮ ನಾಗಿದ್ದು, ನಾಲೆಯಲ್ಲಿ ಹರಿಸುತ್ತಿರುವ ಪ್ರತಿ ಹನಿಯನ್ನು ಸದ್ಬಳಕೆ ಮಾಡಿ ಕೊಳ್ಳಬೇಕು ಎಂದು ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿ ನುಡಿದರು.

ಅರಕಲಗೂಡು ಸಮೀಪದ ಹೇಮಾವತಿ ಜಲಾಶಯದ ಹೇಮಾವತಿ ಬಲ ಮೇಲ್ದಂಡೆ ಆರಂಭದ ಗೇಟ್ ಬಳಿ ಬೋರಣ್ಣ ಗೌಡ ನಾಲೆಗೆ ನೀರು ಹರಿಸಿ ಪೂಜೆ ಸಲ್ಲಿಸಿದ ರಲ್ಲದೆ, ಬಾಗಿನ ಅರ್ಪಿಸಿ ಮಾತನಾಡಿದರು.

ಸುಮಾರು 10 ವರ್ಷಗಳ ಕಾಲ ಬರ ಆವರಿಸಿತ್ತು. ಜಲಾಶಯದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಬೋರಣ್ಣಗೌಡ ನಾಲೆಗೆ ಜೂನ್ ತಿಂಗಳಲ್ಲೇ ಹೇಮಾವತಿ ಜಲಾಶಯದಿಂದ ನೀರು ಬಿಡಲಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಹೇಮಾವತಿ ಬಲ ಮೇಲ್ದಂಡೆ ನಾಲೆ ಎತ್ತರ ಲ್ಲಿದ್ದು, ಜಲಾಶಯ ತುಂಬಿದಾಗ ಮಾತ್ರ ನೀರು ಬಿಡಲು ಸಾಧ್ಯವಾಗುತ್ತಿತ್ತು. ನದಿ ಹಾಗೂ ಇತರೆ ನಾಲೆಗಳಿಗೆ ನೀರು ಬಿಟ್ಟರೆ ಈ ನಾಲೆಗೆ ನೀರು ಹರಿಸಲು ಸಾಧ್ಯವಾಗು ತ್ತಿರಲಿಲ್ಲ. ಹಾಗಾಗಿ ಇತರ ನಾಲೆಗಳಿಂತ ಮುಂ ಚಿತವಾಗಿ ಈ ನಾಲೆಗೆ ನೀರು ಬಿಡಲಾಗಿದೆ. ಈ ಭಾಗದ ಜನರಿಗೆ ಕುಡಿಯುವ ನೀರಿಗೆ ಹಾಗೂ ಬತ್ತಿಹೋಗಿರುವ ಕೆರೆಕಟ್ಟೆಗಳಲ್ಲಿ ಅಂತರ್ಜಲ ವೃದ್ಧಿಯಾಗಲಿ ಎಂಬ ಆಶಯ ದಿಂದ ನೀರು ಹರಿಸಲಾಗುತ್ತಿದೆ. ರೈತರು ಮತ್ತು ಜನರು ಇದನ್ನು ಅರಿತು ಹನಿ ನೀರನ್ನೂ ವ್ಯರ್ಥವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಕೋರಿದರು.

ಕಳೆದ ಸಾಲಿನಲ್ಲಿ ಕುಡಿಯುವ ನೀರಿ ಗಾಗಿಯೇ ಹೋರಾಟ ನಡೆಸಲಾಗಿತ್ತು. ಆಗ ಜಲಾಶಯದಲ್ಲಿ ಕೇವಲ 3.5 ಟಿಎಂಸಿ ಮಾತ್ರ ನೀರಿತ್ತು ಎಂದು ಸ್ಮರಿಸಿದ ಅವರು, ಎಲ್ಲರ ಅದೃಷ್ಟದಿಂದ ಈ ಬಾರಿ ಮುಂಗಾರು ಉತ್ತಮವಾಗಿದೆ. ಜಲಾಶಯದಲ್ಲಿ 20.56 ಟಿಎಂಸಿ ನೀರು ಸಂಗ್ರಹವಾಗಿದೆ. ಸರ್ಕಾರಕ್ಕೆ ಇಲ್ಲಿನ ಜನ-ಜಾನುವಾರು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಮೂಲಕ ವರದಿ ಸಲ್ಲಿಸಿದ್ದು, ಪರಿಸ್ಥಿತಿ ತೀವ್ರತೆ ಮತ್ತು ಅನಿವಾರ್ಯತೆ ಅರಿತು ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಲೋಕೋಪಯೋಗಿ ಸಚಿವ ರೇವಣ್ಣ, ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಸಕಾರಾತ್ಮಕವಾಗಿ ಸ್ಪಂದಿಸಿ ನಾಲೆಗೆ ನೀರು ಹರಿಸಲು ಆದೇಶಿದ್ದಾರೆ. ಅವರ ನಿರ್ದೇಶನದಂತೆ ಇಂದು ನಾಲೆಗೆ ನೀರು ಬಿಡಲಾಗಿದೆ. ಬೋರಣ್ಣಗೌಡ ನಾಲೆ ವ್ಯಾಪ್ತಿಯಲ್ಲಿ 205 ಕೆರೆಗಳಿದ್ದು, ಈಗ ಹರಿಯುತ್ತಿರುವ ನೀರಿನಿಂದ ಅವುಗಳಲ್ಲಿ ಅಂತರ್ಜಲ ಮಟ್ಟ ಸುಧಾರಿಸಲಿದೆ. ಈ ಮಾನವೀಯ ಸಹಕಾರಕ್ಕಾಗಿ ನಾನು ಅವರಿಗೆಲ್ಲಾ ಧನ್ಯವಾದ ಸಲ್ಲಿಸುತ್ತೇನೆ ಎಂದರು. ಇದೇ ವೇಳೆ ಹೇಮಾವತಿ ಜಲಾಶಯ ಯೋಜನೆ ಸಿಇ ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.

Translate »