ಮೈಸೂರು, ಆ.1(ಆರ್ಕೆಬಿ)- ಟಿಪ್ಪು ಜಯಂತಿಯನ್ನು ಸರ್ಕಾರವೇ ಆಚರಿಸ ಬೇಕಾಗಿಲ್ಲ, ನಾವೇ ಅದ್ಧೂರಿಯಾಗಿ ಮಾಡಲು ಸಮರ್ಥರಾಗಿದ್ದೇವೆ ಎಂದು ನರಸಿಂಹರಾಜ ಕ್ಷೇತ್ರ ಶಾಸಕ ತನ್ವೀರ್ಸೇಠ್ ಇಂದಿಲ್ಲಿ ತಿಳಿಸಿದರು.
ಮೈಸೂರಿನಲ್ಲಿ ಗುರುವಾರ ನಡೆದ ಟಿಪ್ಪು ಸುಲ್ತಾನ್ ಉರುಸ್ ಇ-ಷರೀಫ್ನಲ್ಲಿ ಭಾಗವಹಿಸಿದ್ದ ಅವರು, ಟಿಪ್ಪು ಜಯಂತಿ ಆಚರಣೆಯನ್ನು ರದ್ದುಗೊಳಿಸಿರುವ ರಾಜ್ಯ ಬಿಜೆಪಿ ಸರ್ಕಾರದ ಆದೇಶದ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದರು.
ನಾವು ಟಿಪ್ಪು ಜಯಂತಿ ರದ್ದಾಗಿರುವ ಬಗ್ಗೆ ಚಿಂತಿಸುತ್ತಿಲ್ಲ. ಬಿಜೆಪಿ ಸರ್ಕಾರದಿಂದ ಇಂತಹ ಕ್ರಮವನ್ನು ನಾವು ನಿರೀಕ್ಷಿಸಿದ್ದೆವು. ಆದರೆ ಟಿಪ್ಪು ಸುಲ್ತಾನ್ ಅವರನ್ನು ರಾಜಕೀಯಗೊಳಿಸುತ್ತಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.
ಟಿಪ್ಪು ಜಯಂತಿ ರದ್ದು ಮಾಡುವ ಮೂಲಕ ಇತಿಹಾಸವನ್ನು ತಿರುಚುವ ಪ್ರಯತ್ನವನ್ನು ಬಿಜೆಪಿ ಸರ್ಕಾರ ಮುಂದುವರಿಸುತ್ತಿದೆ ಎಂದು ದೂರಿದರು.
ಟಿಪ್ಪು ಜಯಂತಿ ಮಾಡಿ ಎಂದು ನಾವು ಸರ್ಕಾರವನ್ನು ಎಂದೂ ಕೇಳಿಲ್ಲ. ಅವರು ಸ್ವತಃ ಆಚರಿಸುವ ನಿರ್ಧಾರ ತೆಗೆದುಕೊಂಡರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ದ್ದಾಗ ಟಿಪ್ಪು ಜಯಂತಿ ಆಚರಣೆ ಜಾರಿಗೊಳಿಸಿದಾಗ ಸಂತಸ ಪಟ್ಟಿದ್ದೆವು. ಕಳೆದ ವರ್ಷ 144ನೇ ಸೆಕ್ಷನ್ ಜಾರಿಗೊಳಿಸಿ ನಾಲ್ಕು ಗೋಡೆ ಮಧ್ಯೆ ಟಿಪ್ಪು ಜಯಂತಿ ಆಚರಿಸುವ ಸರ್ಕಾರದ ಧೋರಣೆ ವಿರುದ್ಧ ನಾವು ಧ್ವನಿ ಎತ್ತಿದ್ದೇವೆ ಎಂದರು.
ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರ, ಅವರ ಜನ್ಮದಿನವನ್ನು ಅನೇಕ ವರ್ಷಗಳಿಂದ ಆಚರಿಸಲಾಗುತ್ತಿದೆ. ಮುಂದೆಯೂ ಇನ್ನೂ ದೊಡ್ಡ ಪ್ರಮಾಣದಲ್ಲಿ ನಾವೇ ಟಿಪ್ಪು ಜಯಂತಿ ಆಚರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.