ಕೊಳ್ಳೇಗಾಲ: ತಾಲೂಕಿನ ಶಿವನ ಸಮುದ್ರಕ್ಕೆ ಸಂಪರ್ಕ ಕಲ್ಪಿಸಲು 200 ವರ್ಷಗಳ ಹಿಂದೆ ಬ್ರಿಟೀಷರ ಕಾಲದಲ್ಲಿ ನಿರ್ಮಿಸಲಾಗಿದ್ದ ವೆಸ್ಲಿ ಸೇತುವೆ ಸೋಮವಾರ ನದಿ ನೀರಿನ ಪ್ರವಾಹಕ್ಕೆ ಕೊಚ್ಚಿ ಹೋಗಿದೆ.
ಮುಂಗಾರು ಹಂಗಾಮಿನಡಿ ರಾಜ್ಯ ದಲ್ಲಿ ಉತ್ತಮ ಮಳೆಯಾಗುತ್ತಿದ್ದು, ರಾಜ್ಯದ ಬಹುತೇಕ ಎಲ್ಲಾ ಜಲಾಶಯಗಳು ಭರ್ತಿ ಯಾಗುತ್ತಿದೆ. ಜೊತೆಗೆ, ನದಿಗಳು ಮೈದುಂಬಿ ಹರಿಯುತ್ತಿದೆ. ಕೆಆರ್‌ಎಸ್ ಜಲಾಶಯ ಈಗಾಗಲೇ ಗರಿಷ್ಠ ಮಟ್ಟ ತಲುಪಿದ್ದು, ಜಲಾ ಶಯದಿಂದ ನೀರು ಬಿಡುಗಡೆ ಮಾಡಲಾಗಿದೆ.
ಸೋಮವಾರ ಕೆಆರ್‌ಎಸ್ ಜಲಾಶಯ ದಿಂದ ಕಾವೇರಿ ನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಿರುವ ಕಾರಣ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನಲ್ಲಿ ವೆಸ್ಲಿ ಸೇತುವೆ ಕೊಚ್ಚಿ ಹೋಗಿದ್ದು, ಪುರಾತನ ಕಾಲದ ಸೇತುವೆ ಕಣ್ಮರೆಯಾಗಿದೆ.
ಹಳೆಯ ಕಾಲದ ಕಲ್ಲಿನ ವೆಸ್ಲಿ ಸೇತುವೆ ಇತ್ತೀಚೆಗೆ ಶಿಥಿಲಾವಸ್ಥೆಗೆ ತಲುಪಿತ್ತು. ಹಾಗಾಗಿ, ವೆಸ್ಲಿ ಸೇತುವೆ ಪಕ್ಕದಲ್ಲಿಯೇ ಇನ್ನೊಂದು ಹಳೆಯ ಸೇತುವೆ ಮತ್ತು ಹೊಸ ಸೇತುವೆ ಇರುವುದರಿಂದ ಸಂಚಾರಕ್ಕೆ ಯಾವುದೇ ಅಡ್ಡಿಯುಂಟಾಗಿಲ್ಲ.
ಪರ್ಯಾಯವಾಗಿ ಸೇತುವೆ ಇದ್ದರೂ ಪುರಾತನ ಸೇತುವೆ ಎಂಬ ಕಾರಣಕ್ಕೆ ಹಲವು ಪ್ರವಾಸಿಗರು ಭರಚುಕ್ಕಿಗೆ ಈ ಸೇತುವೆಯ ಮೂಲಕವೇ ತೆರಳುತ್ತಿದ್ದರು. ಸೇತುವೆ ಮೇಲೆ ನಿಂತು ಕಾವೇರಿ ನದಿಯ ವಿಹಂಗಮ ದೃಶ್ಯ ಸವಿಯುತ್ತಿದ್ದರು. ಸಂಪೂರ್ಣವಾಗಿ ಸುಣ್ಣದ ಗಾರೆ ಹಾಗೂ ಕಲ್ಲಿನಿಂದಲೇ ಈ ಸೇತುವೆಯನ್ನು ನಿರ್ಮಿಸಲಾಗಿತ್ತು.
ಸೇತುವೆ ಬಳಿ ನೀರಿನ ಸೆಳೆತ ಹೆಚ್ಚಾಗಿದ್ದರಿಂದ ಕಳೆದ ಮೂರು ದಿನದ ಹಿಂದೆಯಷ್ಟೆ ಪ್ರವಾಸಿಗರಿಗೆ ಸೇತವೆ ಬಳಿ ತೆರಳದಂತೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ನಿರ್ಬಂಧಿಸಿತ್ತು. ಒಂದು ವೇಳೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕೈಗೊಳ್ಳದಿದ್ದರೆ ಭಾರೀ ಅನಾ ಹುತವೇ ಸಂಭವಿಸುತ್ತಿತ್ತು ಎನ್ನಲಾಗುತ್ತಿದೆ.
ವೆಸ್ಲಿ ಸೇತುವೆಯನ್ನು ಸಂರಕ್ಷಿಸುವ ಕುರಿತು ಹಾಗೂ ಸಮೀಪದಲ್ಲೆ ಪಕ್ಷಿಧಾಮ ಸ್ಥಾಪಿಸುವ ಬಗ್ಗೆ ಹಿಂದಿನ ಸರ್ಕಾರಗಳು ನಿರ್ಣಯಿಸಿತ್ತು. ಈ ಸಂಬಂಧ ಸರ್ಕಾರ ನೇಮಿಸಿದ್ದ ತಜ್ಞರ ಸಮಿತಿ ಭರಚುಕ್ಕಿ ವೀಕ್ಷಿಸಿ ಹಲವು ಸಭೆಗಳನ್ನು ಸಹಾ ನಡೆಸಿತ್ತು. ಆದರೆ, ಈ ಯೋಜನೆ ಕಾರ್ಯಗತಕ್ಕೆ ಬಾರದೆ ಕೇವಲ ಕಡತಕ್ಕೆ ಸೀಮಿತವಾಗಿದೆ. ಸೇತುವೆ ಸಂರಕ್ಷಿಸುವ ಕುರಿತು ಜನಪ್ರತಿ ನಿಧಿಗಳು ಭಾಷಣದಲ್ಲಿ ಹೇಳುತ್ತಿದ್ದರೆ ವಿನಃ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ವಿಫಲರಾದರು. ಹಾಗಾಗಿ, ಪುರಾತನ ಕಾಲದ ಸೇತುವೆಯೊಂದು ಕೊಚ್ಚಿಹೋಗಿ ಅದರ ನೆನಪಷ್ಟೇ ಉಳಿದಿದೆ.
1818ರಲ್ಲಿ ಸೇತುವೆ ನಿರ್ಮಾಣ
ಕಾವೇರಿ ನದಿಗೆ ಅಡ್ಡಲಾಗಿ 1818 ರಲ್ಲಿ ಈ ಸೇತುವೆಯನ್ನು ಕಟ್ಟಲಾಗಿತ್ತು. ಬ್ರಿಟಿಷ್ ರಾಯಭಾರಿಯಾದ ವೆಸ್ಲಿಯ ನೆನಪಿಗಾಗಿ ಈ ಸೇತುವೆಗೆ ವೆಸ್ಲಿ ಸೇತುವೆ ಎಂದು ಟಿಪ್ಪು ಸುಲ್ತಾನ್ ಹೆಸರಿಟ್ಟಿದ್ದರು. 400ಮೀ. ಉದ್ದದ ಕಲ್ಲಿನ ಸೇತುವೆಗೆ ಟಿಪ್ಪು ಸುಲ್ತಾನ್ ಅಡಿಗಲ್ಲು ಹಾಕಿದರು ಕೂಡ ಅದನ್ನು ಮೈಸೂರು ಒಡೆಯರು 1818 ರಲ್ಲಿ ಪೂರ್ಣಗೊಳಿಸಿದರು. ಆರಂಭದಲ್ಲಿ ವೆಸ್ಲಿ ಸೇತುವೆ ಎಂದು ಕರೆಯಲಾಗುತ್ತಿತು. 1835ರಲ್ಲಿ ಲೂಸಿಂಗಟನ್ ಸೇತುವೆ ಎಂದು ಮರು ನಾಮಕರಣ ಮಾಡಲಾಯಿತು. (1835ರಲ್ಲಿ ಲೂಸಿಂಗಟನ್ ಮದ್ರಾಸ್ ಗವರ್ನರ್ ನೇಮಕವಾಗಿದ್ದರು) ಆದರೂ, ಇಂದಿಗೂ ವೆಸ್ಲಿ ಸೇತುವೆ ಎಂದೇ ಪ್ರಖ್ಯಾತಿ ಪಡೆದಿದೆ.
200 ವರ್ಷಗಳ ಹಿಂದೆ ಕಟ್ಟಿದ್ದ ಈ ಸೇತುವೆಗೆ ಪರ್ಯಾಯವಾಗಿ ಮತ್ತೊಂದು ಸೇತುವೆ ನಿರ್ಮಿಸಿದರೂ, ಈ ಸೇತುವೆ ಮೂಲಕವೇ ಅನೇಕ ಪ್ರವಾಸಿಗರು ಭರಚುಕ್ಕಿಗೆ ತೆರಳಲು ಇಚ್ಚಿಸುತ್ತಿದ್ದರು. ಅದೆಷ್ಟೋ ಸಿನಿಮಾ ಹಾಡುಗಳಿಗೆ ಈ ಸೇತುವೆಯೇ ಅತ್ಯುತ್ತಮವಾದ ಸ್ಥಳವಾಗಿತ್ತು. ಇತ್ತೀಚಿನ ದಿನಗಳಲ್ಲಂತೂ ಸೆಲ್ಫಿ ಪ್ರಿಯರ ಫೇವರಿಟ್ ಜಾಗವೂ ಇದಾಗಿತ್ತು. ಸಂಪೂರ್ಣವಾಗಿ ಕಲ್ಲಿನಿಂದಲೇ ಕಟ್ಟಿರುವ ವೆಸ್ಲಿ ಸೇತುವೆ ಬಳಿ ನೀರಿನ ಸೆಳೆತ ಹೆಚ್ಚಾಗಿದ್ದರಿಂದ ಕಳೆದ ಮೂರು ದಿನದ ಹಿಂದೆಯಷ್ಟೆ ಪ್ರವಾಸಿಗರಿಗೆ ನಿರ್ಬಂಧಿಸಲಾಗಿತ್ತು. ಇಂದು ನೋಡನೋಡು ತ್ತಿದ್ದಂತೆಯೇ ಕಲ್ಲಿನ ಕಂಬಗಳ ಸೇತುವೆ ಮಧ್ಯಭಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಐತಿಹಾಸಿಕ ಸೇತುವೆಯೊಂದು ಪ್ರಾಕೃತಿಕ ವಿಕೋಪಕ್ಕೆ ನಾಶವಾಗಿದೆ.