ಪೊಲೀಸರೇ ನಿಯಮ ಉಲ್ಲಂಘಿಸಿದಾಗ…! ಸಾಮಾಜಿಕ ಜಾಲತಾಣದಲ್ಲಿ ಯುವಕ ತರಾಟೆ
ಮೈಸೂರು

ಪೊಲೀಸರೇ ನಿಯಮ ಉಲ್ಲಂಘಿಸಿದಾಗ…! ಸಾಮಾಜಿಕ ಜಾಲತಾಣದಲ್ಲಿ ಯುವಕ ತರಾಟೆ

December 10, 2018

ಮೈಸೂರು: ಸಂಚಾರ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುವ ಪೊಲೀಸರೇ ಸಂಚಾರ ನಿಯಮ ಉಲ್ಲಂಘಿಸಿರುವ ಬಗ್ಗೆ ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ತರಾಟೆ ತೆಗೆದುಕೊಂಡಿದ್ದಾನೆ.

ಮೈಸೂರಿನ ದೇವರಾಜ ಸಂಚಾರ ಠಾಣೆಯ ಮುಂಭಾಗ ನೋ ಪಾರ್ಕಿಂಗ್ ಫಲಕ ಅಳವಡಿಸಿರುವ ಸ್ಥಳದಲ್ಲೇ ಟೋಯಿಂಗ್ ವಾಹನ(ಟೈಗರ್)ವನ್ನು ಪಾರ್ಕಿಂಗ್ ಮಾಡಿರುವುದನ್ನು ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿ ರುವ ಯುವಕ, `ಸಾರ್ವಜನಿಕರಿಗೊಂದು ನ್ಯಾಯ, ಪೊಲೀಸ ರಿಗೆ ಮತ್ತೊಂದು ನ್ಯಾಯವೇ?’ ಎಂದು ಪ್ರಶ್ನಿಸಿದ್ದಾನೆ.

ಸ್ನೇಹಿತನೊಂದಿಗೆ ಡಿ.8ರ ಸಂಜೆ 4.15ರ ವೇಳೆಯಲ್ಲಿ ದೇವರಾಜ ಸಂಚಾರ ಪೊಲೀಸ್ ಠಾಣೆ ಬಳಿ ಹೋಗುತ್ತಿದ್ದಾಗ `ನೋ ಪಾರ್ಕಿಂಗ್’ ಫಲಕವಿರುವ ಸ್ಥಳದಲ್ಲೇ ಫುಟ್‍ಪಾತ್ ಮೇಲೆ ಹತ್ತಿಸಿ ನಿಲ್ಲಿಸಲಾಗಿದ್ದ ಟೋಯಿಂಗ್ ವಾಹನ ಯುವಕನ ಮೊಬೈಲ್‍ಗೆ ಸೆರೆಸಿಕ್ಕಿದೆ. ಇದನ್ನು ಜಾಲತಾಣದಲ್ಲಿ ಹರಿಬಿಟ್ಟಿ ರುವ ಯುವಕ, ಪೊಲೀಸರು ತಿಳಿದು ಮಾಡಿದ್ದಾರೋ? ತಿಳಿಯದೆ ಮಾಡಿದ್ದಾರೋ? ಗೊತ್ತಿಲ್ಲ. ಆದರೆ ಮೈಸೂರು ಸಿಟಿ ಟ್ರಾಫಿಕ್ ಪೊಲೀಸರು ಈ ಬಗ್ಗೆ ಯಾವ ರೀತಿಯ ಕ್ರಮ ಜರುಗಿಸುತ್ತಾರೆ?, ಎಷ್ಟು ದಂಡ ವಿಧಿಸುತ್ತಾರೋ? ನೋಡೋಣ ಎಂದು ಬರೆದಿದ್ದಾರೆ.

ಯುವಕ ಮಾಡಿರುವ ಪೋಸ್ಟ್ ವೈರಲ್ ಆಗಿದ್ದು, `ಕಾಡಿನಲ್ಲಿ ರುವ ಹುಲಿಗಿಂತ ಮೈಸೂರಿನಲ್ಲಿರುವ `ಟೈಗರ್’(ಟೋಯಿಂಗ್ ವಾಹನ) ಕಂಡರೇ ಹೆಚ್ಚು ಭಯವಾಗುತ್ತದೆ. ಬೈಕ್ ನಿಲ್ಲಿಸಿ ಅತ್ತಿತ್ತ ನೋಡುವಷ್ಟರಲ್ಲಿ ಟೋಯಿಂಗ್ ವಾಹನದ ಮೇಲಿರುತ್ತದೆ. ಅನೌನ್ಸ್ ಮಾಡದೆ ಏಕಾಏಕಿ ದ್ವಿಚಕ್ರ ವಾಹನಗಳನ್ನು ಟೋಯಿಂಗ್ ಮಾಡುತ್ತಾರೆ. ನೋ ಪಾರ್ಕಿಂಗ್‍ನಲ್ಲಿ ನಿಲ್ಲಿಸಿದ್ದಕ್ಕೆ 300ರೂ. ದಂಡ ಕಟ್ಟಿಸಿಕೊಳ್ಳುತ್ತಾರೆ. ಸಂಚಾರ ನಿಯಮಗಳ ಬಗ್ಗೆ ಪಾಠ ಹೇಳುವ ಪೊಲೀಸರೇ ಹೀಗೆ ನಿಯಮ ಉಲ್ಲಂಘಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ, ದಂಡ ವಸೂಲಿ ಮಾಡಲೇಬೇಕು. ಇಲ್ಲವಾದಲ್ಲಿ ಸಾರ್ವಜನಿಕರನ್ನು ಪ್ರಶ್ನಿಸುವ ನೈತಿಕತೆಯನ್ನು ಕಳೆದುಕೊಂಡಂತಾಗುತ್ತದೆ’ ಎಂಬ ಹಲವಾರು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

Translate »