ರೇಸ್‍ಕೋರ್ಸ್ ವಿಚಾರದಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ
ಮೈಸೂರು

ರೇಸ್‍ಕೋರ್ಸ್ ವಿಚಾರದಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ

December 10, 2018

ಮೈಸೂರು: ಮೈಸೂರಿನ ಹೃದಯ ಭಾಗದಲ್ಲಿ ರುವ ಲೋಕೋಪಯೋಗಿ ಇಲಾಖೆಗೆ ಸೇರಿದ 139 ಎಕರೆ ಭೂಮಿಯಲ್ಲಿ ನಡೆಯುತ್ತಿರುವ ರೇಸ್‍ಕೋರ್ಸ್ ಅನ್ನು ಸ್ಥಳಾಂತರಗೊಳಿಸುವ ನನ್ನ ನಿರ್ಧಾರಕ್ಕೆ ಬದ್ದವಾಗಿದ್ದು, ಅಧಿವೇಶನದ ನಂತರ ಅಂತಿಮ ಸುತ್ತಿನ ಮಾತುಕತೆ ನಡೆಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಸಾ.ರಾ.ಮಹೇಶ್ ತಿಳಿಸಿದ್ದಾರೆ.

ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರೇಸ್‍ಕೋರ್ಸ್‍ನಲ್ಲಿ ಅಕ್ರಮವಾಗಿ 600ಕ್ಕೂ ಹೆಚ್ಚು ಶೆಡ್‍ಗಳನ್ನು ನಿರ್ಮಿಸಿ ಉತ್ತರ ಭಾರತದ ವಿವಿಧ ರಾಜ್ಯಗಳ ನೂರಾರು ಮಂದಿ ನೆಲೆಸಿದ್ದರು. ಸರ್ಕಾರ ಕುದುರೆ ಓಡಿಸುವುದಕ್ಕೆ ಮಾತ್ರ ಅನುಮತಿ ನೀಡಿತ್ತು. ಆದರೆ ಕುದುರೆ ಸಾಕುವುದಕ್ಕೆ ಅವಕಾಶ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಪರವಾನಗಿಯನ್ನು ನವೀಕರಣ ಮಾಡುವುದಕ್ಕೆ ಸರ್ಕಾರ ತಿರಸ್ಕರಿಸಿದೆ. ಈಗಾಗಲೇ 3 ತಿಂಗಳ ಕಾಲ ಗಡುವು ನೀಡಲಾಗಿತ್ತು. ಆದರೆ ಕೊಡಗಿನಲ್ಲಿ ಸಂಭವಿಸಿದ ಮಳೆ ಹಾಗೂ ಭೂ ಕುಸಿತದ ಹಾನಿಯಿಂದಾಗಿ ಸಂತ್ರಸ್ಥರಿಗೆ ಪರಿಹಾರ ಕಲ್ಪಿಸುವ ಕಾರ್ಯಕ್ರಮದಲ್ಲಿ ನಾವು ನಿರತವಾಗಿದ್ದರಿಂದ ರೇಸ್‍ಕೋರ್ಸ್ ಬಗ್ಗೆ ಗಮನ ಹರಿಸಲು ಸಾಧ್ಯವಾಗಿರ ಲಿಲ್ಲ. ಕಳೆದ ಮೂರು ದಿನದ ಹಿಂದಷ್ಟೇ ರೇಸ್‍ಕೋರ್ಸ್ ಅಧ್ಯಕ್ಷರೊಂದಿಗೆ ಮಾತನಾಡಿದ್ದೇನೆ. ಅಧಿವೇಶನದ ನಂತರ ಮತ್ತೊಮ್ಮೆ ಮಾತುಕತೆ ನಡೆಸಿ, ಕಾನೂನು ರೀತ್ಯಾ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದರು.

ಕೋಟ್ಯಾಂತರ ರೂ. ಬೆಲೆಬಾಳುವ 139 ಎಕರೆ ಭೂಮಿ ಸಾರ್ವ ಜನಿಕರ ಉಪಯೋಗಕ್ಕೆ ಬಳಕೆಯಾಗಬೇಕೆಂಬುದು ನಮ್ಮ ಉದ್ದೇಶವಾಗಿದೆ. ರೇಸ್‍ಕೋರ್ಸ್ ಸ್ಥಳಾಂತರಗೊಳಿಸಿ, ಆ ಸ್ಥಳವನ್ನು ಮೃಗಾಲಯಕ್ಕೆ ನೀಡೆದರೆ ಇನ್ನಷ್ಟು ಸೌಲಭ್ಯವನ್ನು ಪ್ರವಾಸಿಗರಿಗೆ ಕಲ್ಪಿಸಬಹುದು. ಕಳೆದ ವರ್ಷ ಹಕ್ಕಿ ಜ್ವರದಿಂದ ಒಂದು ತಿಂಗಳು ಮೃಗಾಲಯವನ್ನು ಮುಚ್ಚಲಾಗಿತ್ತು. ಈ ಹಿನ್ನೆಲೆಯಲ್ಲಿ ರೇಸ್‍ಕೋರ್ಸ್ ಇರುವ ಸ್ಥಳಕ್ಕೆ ಪಕ್ಷೆಗಳನ್ನು ಸ್ಥಳಾಂತರ ಮಾಡಿದರೆ ಇನ್ನಷ್ಟು ಪ್ರಾಣಿಗಳನ್ನು ಪಾಲನೆ ಮಾಡಬಹುದು ಎಂದು ಅವರು ಅಭಿಪ್ರಾಯಪಟ್ಟರು.

Translate »