ಕಾರಂಜಿಕೆರೆ, ಕುಕ್ಕರಹಳ್ಳಿ, ಲಿಂಗಾಂಬುಧಿ ಕೆರೆ ಅಭಿವೃದ್ಧಿಗೆ ಸರ್ಕಾರ ಬದ್ಧ
ಮೈಸೂರು

ಕಾರಂಜಿಕೆರೆ, ಕುಕ್ಕರಹಳ್ಳಿ, ಲಿಂಗಾಂಬುಧಿ ಕೆರೆ ಅಭಿವೃದ್ಧಿಗೆ ಸರ್ಕಾರ ಬದ್ಧ

December 10, 2018

ಮೈಸೂರು: ಮೈಸೂರು ನಗರದ ಮೂರು ಪ್ರಮುಖ ಕೆರೆಗಳಾದ ಕಾರಂಜಿಕೆರೆ, ಕುಕ್ಕರಹಳ್ಳಿ ಹಾಗೂ ಲಿಂಗಾಂಬುಧಿ ಕೆರೆಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಮುಂದಾಗಿದ್ದು, ಅಗತ್ಯ ಅನುದಾನ ಬಿಡುಗಡೆ ಮಾಡಿದೆ ಎಂದು ಪ್ರವಾಸೋಮ ಸಚಿವ ಸಾ.ರಾ.ಮಹೇಶ್ ತಿಳಿಸಿದ್ದಾರೆ.

ಕಾರಂಜಿಕೆರೆಗೆ ಭಾನುವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಮೈಸೂರಿಗೆ ಬರುವ ಪ್ರವಾಸಿಗರು ಹಾಗೂ ಮೈಸೂರಿನ ನಿವಾಸಿಗಳಿಗೆ ಈ ಮೂರು ಕೆರೆಗಳಲ್ಲಿ ಉತ್ತಮವಾದ ವಾತಾವರಣ ಸೃಷ್ಟಿಸಿ ಕೊಡುಗೆ ನೀಡುವುದರೊಂದಿಗೆ ಅಂತರ್ಜಲ ವೃದ್ಧಿಗೆ ಕ್ರಮ ಕೈಗೊಳ್ಳುವುದಕ್ಕಾಗಿ ಕೆರೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾ ಗಿದೆ. ಕುಕ್ಕರಹಳ್ಳಿ, ಕಾರಂಜಿಕರೆ ಹಾಗೂ ಲಿಂಗಾಂಬುಧಿ ಕೆರೆಗಳ ಅಭಿವೃದ್ಧಿಗೆ ಈಗಾ ಗಲೇ ತಜ್ಞರು, ಪರಿಸರವಾದಿಗಳೊಂದಿಗೆ ಚರ್ಚಿಸಿ ಸಲಹೆ ಪಡೆದು ಕ್ರಿಯಾ ಯೋಜನೆ ರೂಪಿಸಲಾಗಿದೆ. ಪರಿಸರ ಹಾಗೂ ಅಲ್ಲಿನ ಜೀವವೈವಿಧ್ಯಕ್ಕೆ ಧಕ್ಕೆಯಾಗದಂತೆ ಎಚ್ಚರ ವಹಿಸಿ ಅಭಿವೃದ್ಧಿ ಮಾಡಲಾಗುತ್ತದೆ. ಕಾರಂಜಿಕೆರೆಗೆ 2.06 ಕೋಟಿ ರೂ., ಕುಕ್ಕರಹಳ್ಳಿ ಕೆರೆಗೆ 4.20 ಕೋಟಿ ರೂ ನೀಡಲಾಗುತ್ತಿದ್ದು, ಲಿಂಗಾಂಬುಧಿ ಕೆರೆ ಪರಿಶೀಲನೆ ಮಾಡಿ ಅಗತ್ಯ ಅನುದಾನ ನೀಡುವುದಾಗಿ ಅವರು ಪ್ರಕಟಿಸಿದರು.

ಕಾರಂಜಿಕೆರೆ: ಮೈಸೂರಿಗೆ ಬರುವ ಪ್ರವಾಸಿಗರು ಕಾರಂಜಿಕೆರೆಗೆ ಭೇಟಿ ನೀಡುತ್ತಿ ದ್ದಾರೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಮೂಲ ಸೌಲಭ್ಯ ಕಲ್ಪಿಸುವ ಜವಾಬ್ದಾರಿ ನಮ್ಮದಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ 2.06 ಕೋಟಿ ರೂ. ಬಿಡುಗಡೆ ಮಾಡ ಲಾಗಿದ್ದು, ಅಗತ್ಯವಿದ್ದರೆ ಇನ್ನಷ್ಟು ಹಣ ನೀಡುವುದಾಗಿ ತಿಳಿಸಿದರು. ಕೆರೆಯನ್ನು ಸ್ವಚ್ಛಗೊಳಿಸಲು ಹಾಗೂ ಹೂಳೆತ್ತಲು 20 ಲಕ್ಷ ರೂ., ಕೆರೆಯ ಮುಂಭಾಗದ ಅಭಿ ವೃದ್ಧಿಗೆ 10 ಲಕ್ಷ, ಪ್ರವಾಸಿಗರು ಕುಳಿತು ಕೊಳ್ಳುವುದಕ್ಕಾಗಿ ಕೆರೆಯ ಆವರಣದಲ್ಲಿ ಕಲ್ಲಿನ ಬೆಂಚ್ ನಿರ್ಮಾಣಕ್ಕೆ 5 ಲಕ್ಷ, ಹೊಸ ಬೋಟ್ ಖರೀದಿಗೆ ಹಾಗೂ ಹಾಲಿ ಇರುವ ಬೋಟ್‍ಗಳ ದುರಸ್ತಿಗೆ 20 ಲಕ್ಷ, ಡಸ್ಟ್‍ಬಿನ್ ಅಳವಡಿಕೆಗೆ 1 ಲಕ್ಷ, ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ 25 ಲಕ್ಷ, ಚಿಟ್ಟೆಗಳ ಉದ್ಯಾ ನವನ ನಿರ್ಮಾಣಕ್ಕೆ, ಪಾಥ್‍ವೇ ಹಾಗೂ ಬ್ಯಾರಿಕೇಡ್ ನಿರ್ಮಾಣಕ್ಕೆ 20 ಲಕ್ಷ ರೂ., ಬ್ಯಾಟರಿ ಚಾಲಿತ ವಾಹನ ಖರೀದಿಗೆ 30 ಲಕ್ಷ ರೂ., ಚಿಟ್ಟೆಗಳ ಉದ್ಯಾನದಿಂದ ಥಂಡಿ ಸಡಕ್ ರಸ್ತೆಯವರೆಗೂ 300 ಮೀಟರ್ ಪಾಥ್‍ವೇ ವಿಸ್ತರಣೆಗೆ 20 ಲಕ್ಷ ರೂ. ನೀಡಲಾಗುತ್ತಿದೆ. ಇದರಿಂದ ಪ್ರವೇಶ ಶುಲ್ಕ ಪಾವತಿಸಿ ಕಾರಂಜಿಕೆರೆಗೆ ಬರುವ ಪ್ರವಾಸಿಗರಿಗೆ ಮೂಲ ಸೌಲಭ್ಯ ಸಿಕ್ಕರೆ ಸಂತೋಷ ಪಟ್ಟು, ಮತ್ತೊಮ್ಮೆ ಮೈಸೂರಿಗೆ ಬರಲಿದ್ದಾರೆ ಎಂದು ಹೇಳಿದರು.

ಪರಿಶೀಲನೆ ವೇಳೆ ಹಾಲಿ ಇರುವ ಪಾಥ್ ಅನ್ನು ಸಮತಟ್ಟು ಮಾಡುವಂತೆ ಹಾಗೂ ಮುಂದಿನ ದಿನಗಳಲ್ಲಿ ಕಲ್ಲಿನಿಂದ ತಯಾರಿಸಿರುವ ಬೆಂಚ್‍ಗಳನ್ನು ಅಳವಡಿಸುವಂತೆ, ಶುದ್ಧ ಕುಡಿಯುವ ನೀರು ಪೂರೈಸುವು ದಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಕುಕ್ಕರಹಳ್ಳಿ ಕೆರೆ: ಮೈಸೂರಿನ ಹೃದಯ ಭಾಗದಲ್ಲಿರುವ ಕುಕ್ಕರಹಳ್ಳಿ ಕೆರೆ ಅಭಿವೃದ್ಧಿ ಮಾಡುವುದು ಅಗತ್ಯವಾಗಿದೆ. ಕೆರೆಯ ಆವರಣದಲ್ಲಿರುವ ಜಾಗಿಂಗ್ ಟ್ರ್ಯಾಕ್ ಅಭಿವೃದ್ಧಿಗೆ 30 ಲಕ್ಷ ರೂ., ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಲು 25 ಲಕ್ಷ ರೂ., ವಾಸನೆ ಬರುತ್ತಿರುವ ಭಾಗದಲ್ಲಿ ಹೂಳೆತ್ತುವುದು ಹಾಗೂ ಕೆರೆ ಸ್ವಚ್ಛಗೊಳಿಸಲು 50 ಲಕ್ಷ ರೂ., ಬೆಂಚ್ ಅಳವಡಿಸಲು 10 ಲಕ್ಷ, ವ್ಯೂ ಪಾಯಿಂಟ್ ಮೇಲ್ದರ್ಜೆಗೇರಿ ಸಲು 10 ಲಕ್ಷ ರೂ, ಶೌಚಾಲಯ ನಿರ್ಮಾಣಕ್ಕೆ 30 ಲಕ್ಷ, ಬೋಟ್ ವ್ಯವಸ್ಥೆಗೆ 50 ಲಕ್ಷ ರೂ, ಓಪನ್ ಜಿಮ್ ವ್ಯವಸ್ಥೆಗೆ 50 ಲಕ್ಷ ರೂ, ಮಕ್ಕಳ ಆಟದ ಮೈದಾನದ ಅಭಿವೃದ್ಧಿಗೆ 20 ಲಕ್ಷ ರೂ, ಡಸ್ಟ್‍ಬಿನ್ ಅಳ ವಡಿಕೆಗೆ 80 ಸಾವಿರ ರೂ. ಸೇರಿದಂತೆ 4.20 ಲಕ್ಷ ರೂ.ಗಳನ್ನು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ವಿನಿಯೋಗಿಸಲಾಗುತ್ತದೆ. ಇದರಿಂದ ಕಳೆದ ಹಲವು ವರ್ಷದಿಂದ ಕೆರೆಯಲ್ಲಿ ಹುದುಗಿರುವ ನಿರುಪಯುಕ್ತ ವಸ್ತುಗಳನ್ನು ತೆಗೆಯುವುದರಿಂದ ಕೆರೆ ಸ್ವಚ್ಛಗೊಳ್ಳುತ್ತದೆ. ಅಲ್ಲದೆ ದುರ್ವಾಸನೆ ನಿವಾರಣೆಯಾಗಿ ಕೆರೆಯ ಪರಿಸ್ಥಿತಿ ತಿಳಿಗೊಳ್ಳುತ್ತದೆ ಎಂದರು.

ಮಾಹಿತಿಯ ಕೊರತೆ: ರಾಜ್ಯ ಪ್ರವಾಸೋ ದ್ಯಮವನ್ನು ಉತ್ತುಂಗಕ್ಕೆ ಕೊಂಡೊಯ್ಯ ಬೇಕೆಂಬ ಮಹದಾಸೆಯಿಂದ ಕೆಆರ್‍ಎಸ್ ಸೇರಿದಂತೆ ವಿವಿಧೆಡೆ ಡಿಸ್ನಿ ಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳು ಕ್ರಮ ಕೈಗೊಂಡಿದ್ದಾರೆ. ಆದರೆ ಕೆಲವರು ಮಾಹಿತಿಯ ಕೊರತೆ ಯಿಂದಾಗಿ ಕೆಆರ್‍ಎಸ್ ಅಭಿವೃದ್ಧಿಯನ್ನು ವಿರೋಧಿಸುತ್ತಿದ್ದಾರೆ. ಶನಿವಾರವಷ್ಟೇ ಕೆಆರ್ ಎಸ್‍ಗೆ ಹೋಗಿ ಪರಿಶೀಲಿಸಲಾಗಿದೆ. ಅಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸೇರಿದ 400 ಎಕರೆ ಭೂಮಿ ಇದ್ದು, ಅದರಲ್ಲಿ 76 ಎಕರೆ ವಿಸ್ತೀರ್ಣದಲ್ಲಿ ಉದ್ಯಾನವನ ನಿರ್ಮಿಸ ಲಾಗಿದೆ. ಉಳಿದ 300 ಎಕರೆ ಭೂಮಿ ಹಾಗೆಯೇ ಇದ್ದು, ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಡಿಸ್ನಿಲ್ಯಾಂಡ್ ಮಾದರಿ ಯಲ್ಲಿ ಅಭಿವೃದ್ಧಿ ಎಂದು ಹೇಳಲಾಗಿದೆ. ಇದರಿಂದ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಸಿಗಲಿದೆ. ಹೋರಾಟ ಮಾಡುತ್ತಿರುವವರು ಕೆಆರ್‍ಎಸ್ ಉದ್ಯಾನ ವನ ವೀಕ್ಷಿಸಿ ವಾಪಸ್ಸಾಗುವ ಜನರು ಏನೆಂದು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಮನಗಾಣಬೇಕು. ಪ್ರವಾಸಿ ತಾಣಗಳನ್ನು ಮೇಲ್ದರ್ಜೆಗೇರಿಸಿ, ಆದಾಯ ಹೆಚ್ಚಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಡಿಸ್ನಿಲ್ಯಾಂಡ್ ಮಾದರಿಯ ಅಭಿವೃದ್ಧಿ ಅಗತ್ಯ ಎಂದು ಪುನರುಚ್ಚರಿಸಿದರು.

ಥಂಡಿ ಸಡಕ್ ರಸ್ತೆ ಬಂದ್ ಮಾಡಿ: ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ಮೃಗಾಲಯ ಹಾಗೂ ಕಾರಂಜಿಕೆರೆ ನಡುವೆ ಇರುವ ಥಂಡಿ ಸಡಕ್ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿ ವಾಯು ವಿಹಾರಿಗಳು ಸಂಚರಿಸಲು ಅವಕಾಶ ಮಾಡಿ ಕೊಡಬೇಕು. ಅಲ್ಲದೆ ಸಿದ್ದಾರ್ಥನಗರದ ವಿವಿಧ ರಸ್ತೆಗಳಿಂದ ಮಳೆ ನೀರು ಕಾರಂಜಿ ಕೆರೆಗೆ ಬರುವ ಮಾರ್ಗದಲ್ಲಿ ಕಬ್ಬಿಣದ ಗೇಟ್ ಹಾಗೂ ಮೆಶ್ ಅಳವಡಿಸಲಾಗಿದೆ. ಇದರಿಂದ ನೀರು ಸರಾಗವಾಗಿ ಹರಿಯದೆ ರಾಜ ಕಾಲುವೆಯಲ್ಲಿ ಶೇಖರಣೆಯಾಗಿ ಮನೆಗಳಿಗೆ ನುಗ್ಗುತ್ತಿದೆ. ಇದರಿಂದ ದೊಡ್ಡ ಪೈಪ್ ಅನ್ನು ಅಳವಡಿಸುವಂತೆ ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಪಾಲಿಕೆ ಆಯುಕ್ತ ಜಿ.ಜಗದೀಶ್, ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಹೆಚ್.ಪಿ.ಜನಾರ್ಧನ್, ಡಿಸಿಪಿ ಡಾ. ವಿಕ್ರಂ ಅಮ್ಟೆ, ಆರ್‍ಎಫ್‍ಓ ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »