ಮೈಸೂರು: ಹೆರಿಗೆ ಸಂದರ್ಭದಲ್ಲಿ ನರ್ಸ್‍ವೊಬ್ಬರ ನಿರ್ಲಕ್ಷ್ಯತೆಯಿಂದ ತನ್ನ ಗರ್ಭಿಣಿ ಪತ್ನಿ ಸಾವನ್ನಪ್ಪಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಂತಿನಗರದ ನಿವಾಸಿ ಇಮ್ರಾನ್ ಅಹಮದ್, ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ (ಡಿಹೆಚ್‍ಓ) ಮನವಿ ಸಲ್ಲಿಸಿದ್ದಾರೆ. ಮೈಸೂರಿನ ನಜರ್‍ಬಾದಿನಲ್ಲಿರುವ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಕುಟುಂಬ ಸದಸ್ಯರೊಂದಿಗೆ ಇಮ್ರಾನ್ ಅಹಮದ್, ಪತ್ನಿ ಯಾಸ್ಮೀನ್ ತಾಜ್ (30) ಸಾವಿಗೆ ನರ್ಸ್‍ವೊಬ್ಬರ ಬೇಜವಾಬ್ದಾರಿತನವೇ ಕಾರಣ. ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜ.12ರಂದು ಬೆಳಿಗ್ಗೆ ಮೈಸೂರಿನ ಕ್ಯಾತ ಮಾರನಹಳ್ಳಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಅಲ್ಲಿನ ನರ್ಸ್ ನಿರ್ಲಕ್ಷ್ಯ ವಹಿಸಿದ್ದರ ಪರಿಣಾಮ ಹೆಚ್ಚು ರಕ್ತಸ್ರಾವ ಉಂಟಾ ಯಿತು. ಕೊನೆಗೆ ಅದೇ ನರ್ಸ್ ಗಾಬರಿಯಿಂದ ಚೆಲುವಾಂಬ ಆಸ್ಪತ್ರೆಗೆ ಕರೆದು ಕೊಂಡು ಹೋಗಲು ಆಂಬುಲೆನ್ಸ್ ಕರೆಸಿದರು. ಆದರೆ ಆಂಬುಲೆನ್ಸ್‍ನಲ್ಲಿ ಅಳವಡಿಸುವ ಗ್ಲೂಕೋಸ್ ಬಾಟಲಿಯ ಹಣವಾಗಿ 350 ರೂ. ಕೊಡುವವರೆಗೂ ಆಂಬು ಲೆನ್ಸ್ ತೆರಳಲು ಬಿಡಲಿಲ್ಲ. ಇವರು ಬಡ ಗರ್ಭಿಣಿಯರಿಂದ ಇದೇ ರೀತಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಇಮ್ರಾನ್ ಅಹಮದ್ ಆರೋಪಿಸಿದ್ದಾರೆ.
ಚೆಲುವಾಂಬ ಆಸ್ಪತ್ರೆಗೆ ದಾಖಲಿಸಿದರೂ ಪತ್ನಿ ಉಳಿಯಲಿಲ್ಲ. ಸದರಿ ನರ್ಸ್ ಅವರಿಗೆ ಒಂದು ಕೈಗೆ ಗಾಯವಾಗಿದೆ. ಹೀಗಿದ್ದರೂ ಅವರು ಕರ್ತವ್ಯ ನಿರ್ವ ಹಿಸುತ್ತಿದ್ದಾರೆ. 8 ವರ್ಷದ ಗಂಡು ಮಗ, 3 ವರ್ಷದ ಹೆಣ್ಣು ಮಗಳೊಂದಿಗೆ 16 ದಿನಗಳ ಗಂಡು ಮಗುವಿಗೆ ಈಗ ತಾಯಿ ಇಲ್ಲದಂತೆ ಆಗಿದೆ. ನನ್ನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವ ಜೊತೆಗೆ ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ನಿಗಾ ವಹಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಸವರಾಜು, ಹೆರಿಗೆ ನಂತರ ಪರಿಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಚೆಲುವಾಂಬಕ್ಕೆ ಕಳುಹಿಸಿದ್ದಾರೆ. ಅದಾಗ್ಯೂ ವಿಚಾರಣೆ ನಡೆಸಿ ವರದಿ ನೀಡಲು ಕ್ರಮ ಕೈಗೊಂಡಿದ್ದು, ಬಳಿಕ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.