ಕಾಡಾನೆ ದಾಳಿ: ಆಟೋ ಸಂಪೂರ್ಣ ಜಖಂ
ಕೊಡಗು

ಕಾಡಾನೆ ದಾಳಿ: ಆಟೋ ಸಂಪೂರ್ಣ ಜಖಂ

July 29, 2018

ಸಿದ್ದಾಪುರ:  ಪ್ರಯಾಣಿಕರನ್ನು ಸಾಗಿಸುತ್ತಿದ್ದ ಆಟೋ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ ಆಟೋ ಸಂಪೂರ್ಣ ಜಖಂಗೊಂಡು ಚಾಲಕ ಸೇರಿದಂತೆ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಸಿದ್ದಾಪುರ ಸಮೀಪದ ಬಜಗೊಲ್ಲಿಯಲ್ಲಿ ನಡೆದಿದೆ.

ಬಜಗೊಲ್ಲಿಯಿಂದ ಮುಹಮ್ಮದ್ ಎಂಬವರು ತಮ್ಮ ಆಟೋದಲ್ಲಿ ಇಬ್ಬರು ಪ್ರಯಾಣಿಕರೊಂದಿಗೆ ಸಿದ್ದಾಪುರ ಪಟ್ಟಣಕ್ಕೆ ತೆರಳುತ್ತಿದ್ದ ಸಂದರ್ಭ ಆಲತೋಪು ಎಂಬಲ್ಲಿ ಕಾಡಾನೆ ದಿಢೀರ್ ಪ್ರತ್ಯಕ್ಷಗೊಂಡಿದೆ. ಕಾಡಾನೆಯ ಹಿಂಡನ್ನು ಕಂಡು ಗಾಬರಿಗೊಂಡ ಚಾಲಕ ಹಾಗೂ ಪ್ರಯಾಣಿಕರು ಆಟೋವನ್ನು ರಸ್ತೆಯಲ್ಲೇ ಬಿಟ್ಟು ಜೀವಭಯದಿಂದ ಓಡಿದ್ದಾರೆ. ರೋಷಗೊಂಡ ಕಾಡಾನೆಯ ಹಿಂಡು ಆಟೋ ಮೇಲೆ ದಾಳಿ ಮಾಡಿ ಸೊಂಡಲಿನಿಂದ ಸಮೀಪದ ತೋಟಕ್ಕೆ ಬಿಸಾಡಿದೆ. ದಾಳಿಗೆ ಆಟೋ ಸಂಪೂರ್ಣ ಜಖಂಗೊಂಡಿದ್ದು, ಚಾಲಕ ಬಜಗೊಲ್ಲಿಯ ಮುಹಮ್ಮದ್ ಹಾಗೂ ಪ್ರಯಾಣಿಕರಾದ ಬಾಲಕೃಷ್ಣ ಮತ್ತು ಸೇದುರಾಮ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಅರಣ್ಯಾಧಿಕಾರಿ ದೇವಯ್ಯ, ಸಿದ್ದಾಪುರ ಪೊಲೀಸ್ ಠಾಣೆಯ ಎಎಸೈ ಹೆಚ್.ಎಸ್. ಬೋಜಪ್ಪ, ತಾಪಂ ಮಾಜಿ ಸದಸ್ಯ ಪಿ.ವಿ.ಜಾನ್ಸನ್, ಸಿದ್ದಾಪುರ ಗ್ರಾಪಂ ಸದಸ್ಯ ಎ.ಎಸ್.ಹುಸೈನ್ ಸೇರಿದಂತೆ ಮತ್ತಿತರರು ಭೇಟಿ ನೀಡಿದರು.

ಕಾಡಾನೆ ದಾಳಿಗೆ ಆಟೋ ಸಂಪೂರ್ಣ ಜಖಂಗೊಂಡಿದ್ದು, ಅರಣ್ಯ ಇಲಾಖೆ ಪರಿಹಾರ ನೀಡಬೇಕೆಂದು ಆಟೋ ಚಾಲಕರ ಸಂಘದ ಅಧ್ಯಕ್ಷ ಎಂ.ಆರ್.ಸಲೀಂ ಒತ್ತಾಯಿಸಿದ್ದಾರೆ. ಶಾಶ್ವತವಾಗಿ ಕಾಡಾನೆ ಹಾವಳಿಯನ್ನು ತಡೆಗಟ್ಟದಿದ್ದಲ್ಲಿ ಸಂಘದ ಮೂಲಕ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.

Translate »