ಮೊಣ್ಣಂಗೇರಿಯಲ್ಲಿ ಬಿರುಕು ಬಿಟ್ಟ ಭೂಮಿಯಿಂದ ಉಕ್ಕಿ ಹರಿಯುತ್ತಿದೆ ನೀರು
ಕೊಡಗು

ಮೊಣ್ಣಂಗೇರಿಯಲ್ಲಿ ಬಿರುಕು ಬಿಟ್ಟ ಭೂಮಿಯಿಂದ ಉಕ್ಕಿ ಹರಿಯುತ್ತಿದೆ ನೀರು

July 29, 2018

ಮಡಿಕೇರಿ: ಗಾಳಿಬೀಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ 2ನೇ ಮೊಣ್ಣಂಗೇರಿಯಲ್ಲಿ ಭೂಮಿ ಬಿರುಕು ಬಿಟ್ಟಿದ್ದು, ಬಿರುಕಿನಿಂದ ಅಂತರ್ಜಲ ಕೋಡಿಯಾಗಿ ಹರಿಯುತ್ತಿದೆ. ಕಳೆದ 10 ದಿನಗಳ ಹಿಂದೆ ಅಂದಾಜು 1 ಕಿ.ಮೀ. ವ್ಯಾಪ್ತಿಯುದ್ದಕ್ಕೂ ಭೂಮಿಯಲ್ಲಿ 2 ಇಂಚು ಅಗಲದ ಬಿರುಕು ಮೂಡಿತ್ತು. ದಿನದಿಂದ ದಿನಕ್ಕೆ ಬಿರುಕು ಹೆಚ್ಚುತ್ತಾ ಹೋಗಿದ್ದು, ಇದೀಗ ಬಿರುಕಿನಿಂದ ಕೆಂಪು ಬಣ್ಣದ ನೀರು ಉಕ್ಕಿ ಹರಿಯುತ್ತಿದ್ದು, ಗ್ರಾಮಸ್ಥರು ಭೀತಿಗೆ ಒಳಗಾಗಿದ್ದಾರೆ.

ಭೂಮಿ ಬಿರುಕು ಬಿಟ್ಟಿರುವ ಮಾಹಿತಿ ಪಡೆದು ಈ ಹಿಂದೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು 2ನೇ ಮೊಣ್ಣಂಗೇರಿಗೆ ತೆರಳಿ ಪರಿಶೀಲನೆ ನಡೆಸಿದ್ದರು. ಭೂಮಿ ಬಿರುಕಿಗೆ ಅಂತರ್ಜಲ ಕಾರಣವೆಂದು ತಿಳಿಸಿ ಇದೊಂದು ಸಹಜ ಪ್ರಕ್ರಿಯೆ ಎಂದು ಗ್ರಾಮಸ್ಥರಿಗೆ ಮನವರಿಕೆ ಮಾಡಿದ್ದರು.

ಆದರೆ ಇದೀಗ ಬಿರುಕು ಬಿಟ್ಟಿರುವ ಪ್ರದೇಶದ ಬೆಟ್ಟ ತಪ್ಪಲಿನ ಕಲ್ಲು ಬಂಡೆಯ ಕೆಳಗಿನಿಂದ ಭಾರಿ ಪ್ರಮಾಣದ ಅಂತರ್ಜಲ ಉಕ್ಕಿ ಹರಿಯುತ್ತಿದೆ. 50 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ಬಿರುಕು ಆವರಿಸಿದ್ದು, ಕಾಫಿ ತೋಟಗಳ ಒಳಗೆ ಮತ್ತು ಮೊಣ್ಣಂಗೇರಿಯಲ್ಲಿರುವ ಕಾಂಕ್ರೀಟ್ ರಸ್ತೆಯನ್ನು ಕೂಡ ಬಿರುಕು ಆಪೋಷನ ಪಡೆದಿದೆ. ಈ ವ್ಯಾಪ್ತಿಯಲ್ಲಿ 3 ಕುಟುಂಬಗಳು ವಾಸಿಸುತ್ತಿದ್ದು, ಭೂಮಿಯೇ ಕುಸಿಯುವ ಆತಂಕ ವ್ಯಕ್ತಪಡಿಸಿದ್ದಾರೆ.

ಭೂಮಿ ಬಿರುಕಿನಿಂದ ಅಂತರ್ಜಲ ಹರಿಯುತ್ತಿರುವ ಪ್ರದೇಶಕ್ಕೆ ಶಾಸಕ ಕೆ.ಜಿ.ಬೋಪಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭಾರಿ ಮಳೆಯಿಂದ ಅಂತರ್ಜಲ ಉಕ್ಕಿ ಹರಿಯುತ್ತಿ ರುವ ಸಾಧ್ಯತೆ ಇದೆ ಎಂದು ಕೆ.ಜಿ. ಬೋಪಯ್ಯ ಅಭಿಪ್ರಾಯಪಟ್ಟಿದ್ದು, ಹಿರಿಯ ಭೂ ವಿಜ್ಞಾನಿಗಳು, ಸ್ಥಳ ಪರಿ ಶೀಲನೆ ನಡೆಸಿ ಮಾಹಿತಿ ಸಂಗ್ರಹಿಸ ಬೇಕೆಂದು ಅವರು ಆಗ್ರಹಿಸಿದ್ದಾರೆ.

Translate »