ವನ್ಯಜೀವಿಗಳು-ಮನುಷ್ಯರ ನಡುವೆ ಸಂಘರ್ಷ: ನಾಗರಹೊಳೆ ಉದ್ಯಾನ ವ್ಯಾಪ್ತಿ ಕಾಡಂಚಲ್ಲಿ ಜಾಗೃತಿ ಜಾಥಾ
ಮೈಸೂರು

ವನ್ಯಜೀವಿಗಳು-ಮನುಷ್ಯರ ನಡುವೆ ಸಂಘರ್ಷ: ನಾಗರಹೊಳೆ ಉದ್ಯಾನ ವ್ಯಾಪ್ತಿ ಕಾಡಂಚಲ್ಲಿ ಜಾಗೃತಿ ಜಾಥಾ

October 9, 2018

ಹೆಚ್.ಡಿ.ಕೋಟೆ:  ಕಾಡು ಪ್ರಾಣಿ ಗಳು ಮತ್ತು ಮನುಷ್ಯನ ನಡುವಿನ ಸಂಘರ್ಷ ವನ್ನು ತಪ್ಪಿಸುವ ನಿಟ್ಟನಲ್ಲಿ ಇಂಡಿಯನ್ ವೈಲ್ಡ್‍ಲೈಫ್ ಎಕ್ಸಪ್ಲೋರರ್ಸ್ ಸೇವಾ ಸಂಸ್ಥೆ ವತಿಯಿಂದ ತಾಲೂಕಿನ ನಾಗರಹೊಳೆ ಉದ್ಯಾನವನ ವ್ಯಾಪ್ತಿಯ ಕಾಡಂಚಿನ ಗ್ರಾಮ ಗಳಲ್ಲಿ ನಡಿಗೆ ಜಾಗೃತಿ ಜಾಥಾ ನಡೆಸಿ ಗ್ರಾಮ ಗಳ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ಅಂತರಸಂತೆ ವನ್ಯಜೀವಿ ವಲಯದ ಆರ್.ಎಫ್.ಓ ವಿನಯ್ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು, ಕಳೆದ ಮಾ.3ರಂದು ಕಾಡಿಗೆ ಬೆಂಕಿ ಬಿದ್ದಿದ್ದ ಸ್ಥಳ ಪರಿಶೀಲನೆಗೆ ತೆರಳಿದ್ದ ವೇಳೆ ಕಾಡಾನೆ ದಾಳಿಗೆ ತುತ್ತಾದ ಸಿ.ಎಫ್.ಓ ದಿ.ಮಣಿ ಕಂದನ್, ಕಾಡು ಮತ್ತು ಕಾಡು ಪ್ರಾಣಿಗಳ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು ಎಂದು ಹೇಳಿದರು. ಯಾವಾಗಲೂ ಅರಣ್ಯ ಮತ್ತು ವನ್ಯಜೀವಿಗಳ ಬಗ್ಗೆ ಯೋಚಿಸುತ್ತಿದ್ದ ಅವರು ಸಿಬ್ಬಂದಿ ಬಗ್ಗೆಯೂ ಬಹಳ ಕಾಳಜಿ ವಹಿಸುತ್ತಿದ್ದರು, ಅಲ್ಲದೆ ಸಿಬ್ಬಂದಿ ಮತ್ತು ಅವರ ಕುಟುಂಬದ ಕಷ್ಟ ನಿವಾರಣೆಗೆ ಸದಾ ಸ್ಪಂದಿಸುತ್ತಿದ್ದ ಅವರು ಎಲ್ಲರ ನೆಚ್ಚಿನ ಅಧಿ ಕಾರಿಯಾಗಿದ್ದರು. ಅವರ ಸಾವು ಇಲಾಖೆಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದರು.

ಅರಣ್ಯ ರಕ್ಷಕ ವಿಕ್ರಂಗೆ ಸನ್ಮಾನ: ವೀರನ ಹೊಸಹಳ್ಳಿ ವನ್ಯಜೀವಿ ವಲಯದಲ್ಲಿ ಅರಣ್ಯ ರಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ಸಿ.ವಿಕ್ರಂ ಕಳೆದ ಏಪ್ರಿಲ್-ಮೇ ತಿಂಗಳಲ್ಲಿ ಸಿ.ಎಫ್.ಓ ದಿ.ಮಣಿಕಂದನ್ ಅವರ ಸಹಕಾರ ದಿಂದಾಗಿ ದೇಶದ ಅತ್ಯಂತ ಅತಿ ಎತ್ತರದ ಗೌರಿ ಶಂಕರ ಶಿಖರವನ್ನು ಯಶಸ್ವಿಯಾಗಿ ಏರಿ, ಅರಣ್ಯ ಇಲಾಖೆಗೆ ಕೀರ್ತಿ ತಂದ ಹಿನ್ನೆಲೆ ಯಲ್ಲಿ ಇಂಡಿಯನ್ ವೈಲ್ಡ್‍ಲೈಫ್ ಎಕ್ಸಪ್ಲೋರರ್ಸ್ ಸೇವಾ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭ ಇಂಡಿಯನ್ ವೈಲ್ಡ್‍ಲೈಫ್ ಎಕ್ಸ್‍ಪ್ಲೋರರ್ಸ್ ಸೇವಾ ಸಂಸ್ಥೆಯ ಭಾಗ್ಯ ಲಕ್ಷ್ಮಿ, ಎಚ್.ಡಿ.ಕೋಟೆ ಸಾಮಾಜಿಕ ಅರಣ್ಯ ವಲಯದ ಆರ್‍ಎಫ್‍ಓ ಮಧು, ವಿಶೇಷ ಹುಲಿ ಸಂರಕ್ಷಣಾ ದಳದ ಆರ್‍ಎಫ್‍ಓ ಸತೀಶ್ ಸೇರಿದಂತೆ ಸಂಸ್ಥೆಯ ಸ್ವಯಂ-ಸೇವಕ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.

Translate »