ಮೈಸೂರು ಕಲಾಮಂದಿರ ಅಂಗಳದಲ್ಲಿ ಮಹಿಳೆಯರ ಕೌಶಲ್ಯ ಪ್ರದರ್ಶನ
ಮೈಸೂರು, ಜ.29(ಆರ್‍ಕೆಬಿ)- ಮೈಸೂರಿನ ಕಲಾ ಮಂದಿರ ಬುಧವಾರ ವಿವಿಧ ಮಹಿಳಾ ಕಲಾವಿದ ರಿಂದ ತುಂಬಿ ಹೋಗಿತ್ತು.
ಮಹಿಳಾ ಸಾಂಸ್ಕøತಿಕ ಉತ್ಸವದಲ್ಲಿ ಮಹಿಳೆಯರು ತಮ್ಮಲ್ಲಿರುವ ವಿವಿಧ ಕಲಾ ಪ್ರೌಢಿಮೆಯನ್ನು ಪ್ರದರ್ಶಿಸಿದರು.
ಡೊಳ್ಳು ಕುಣಿತ, ಪಟ ಕುಣಿತ, ಸುಗ್ಗಿ ಕುಣಿತ, ಛದ್ಮವೇಷ, ಚಿತ್ರಕಲೆ, ಕಪ್ಪೆಚಿಪ್ಪು ಕಲೆ, ಸೋರೆ ಕಾಯಿ ಕಲೆ, ಸಾಂಪ್ರದಾಯಿಕ ಕಲೆಗಳ ಪ್ರದರ್ಶನದ ಜೊತೆಗೆ ರಂಗೋಲಿ ಸ್ಪರ್ಧೆ, ಸುಗಮ ಸಂಗೀತ, ಜಾನಪದ ಗೀತಗಾಯನ, ಜಾನಪದ ನೃತ್ಯ, ನಾಟಕ, ವಿಚಾರ ಸಂಕಿರಣ, ಭಜನೆ ಇತ್ಯಾದಿ ಮನಸೂರೆಗೊಂಡವು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಯೋಜಿಸಿದ್ದ ಮಹಿಳಾ ಸಾಂಸ್ಕøತಿಕ ಉತ್ಸವಕ್ಕೆ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಚಾಲನೆ ನೀಡಿದರು. ಬಳಿಕ ಮೈಸೂರಿನ ಕುಕ್ಕರಹಳ್ಳಿಯ ಕವಿತಾ ಮತ್ತು ತಂಡ ದಿಂದ ಡೊಳ್ಳು ಕುಣಿತ, ಮೈಸೂರಿನ ಚಾಮರಾಜ ಜೋಡಿ ರಸ್ತೆಯ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿಯರಿಂದ ಪಟ ಕುಣಿತ, ಹುಣಸೂರು ತಾಲೂಕಿನ ಸಹನಾ ಮತ್ತು ತಂಡ ದಿಂದ ಸುಗ್ಗಿ ಕುಣಿತ, ಕಾತ್ಯಾಯಿನಿ ಅವರಿಂದ ಛದ್ಮ ವೇಷ ಪ್ರದರ್ಶನ ನಡೆಯಿತು.
ಮೈಸೂರಿನ ಶುಭಾ ರಾಘವೇಂದ್ರ, ರಾಜೇಶ್ವರಿ, ಸ್ನೇಹಶ್ರೀ, ಪ್ರೇಮ, ನಂಜನಗೂಡಿನ ಅಶ್ವಿನಿ, ಡಾ.ಎಂ. ಪಿ.ಪ್ರೀತಂ, ಮಂಜುಳಾ ನಾಗರತ್ನ ಸುಗಮ ಸಂಗೀತ ಹಾಡಿದರು. ಸಲ್ಮಾ ಮತ್ತು ತಂಡ ಹಾಗೂ ಕ್ರಿಯಾ ಜಾನಪದ ತಂಡದಿಂದ ಜಾನಪದ ಗೀತ ಗಾಯನ ನಡೆಯಿತು. ಮೈಸೂರಿನ ಕರಾವಳಿ ಯಕ್ಷಗಾನ ತಂಡ ದಿಂದ ಯಕ್ಷಗಾನ, ತಿ.ನರಸೀಪುರ ತಾಲೂಕಿನ ಬೀಡನ ಹಳ್ಳಿಯ ಪಲ್ಲವಿ ಮತ್ತು ತಂಡದ ಪೂಜಾ ಕುಣಿತ, ನೆರಳು ಟ್ರಸ್ಟ್‍ನ ಬಂಜಾರ ನೃತ್ಯ, ಮೈಸೂರಿನ ಅಮೃತಾ ಮತ್ತು ತಂಡದ ನಗಾರಿ, ದೇಸಿರಂಗ ಸಾಂಸ್ಕøತಿಕ ಸಂಸ್ಥೆಯ ಕಂಸಾಳೆ ಗಮನ ಸೆಳೆಯಿತು.
ಉರಿಯ ಉಯ್ಯಾಲೆ ನಾಟಕ ಪ್ರದರ್ಶನ, ಬಳಿಕ ವಿಚಾರ ಸಂಕಿರಣದಲ್ಲಿ `ಮಹಿಳೆ ಮತ್ತು ಸಮಾಜ’ ಕುರಿತು ಲೋಲಾಕ್ಷಿ, `ಮಹಿಳಾ ಮತ್ತು ಉದ್ಯಮ ಶೀಲತೆ’ ಕುರಿತು ಕೊಳ್ಳೇಗಾಲದ ಮಹಾದೇವಿ ವಿಚಾರ ಮಂಡಿಸಿದರು. ವಸುಂದರ ದೊರೆಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ವಾಗ್ದೇವಿ ಭಜನಾ ಮಂಡಳಿ, ಗಾನಸುಧಾ ಕಲಾತಂಡ, ಜ್ಞಾನೇಶ್ವರಿ ಕಲಾತಂಡ, ಕದಳಿ ಮಹಿಳಾ ವೇದಿಕೆಯಿಂದ ಭಜನೆ ಕಾರ್ಯಕ್ರಮ ನೆರವೇರಿತು. ಭಾರತೀಯ ನೃತ್ಯ ಕಲಾ ಪರಿಷತ್, ತಿ.ನರಸೀಪುರದ ನಯನ ಭರತನಾಟ್ಯ, ಯರಗನಹಳ್ಳಿಯ ನಿತ್ಯ ನಿರಂತರ ಟ್ರಸ್ಟ್ ನಿಂದ ನೃತ್ಯ ರೂಪಕ ನಡೆಯಿತು. ಬನ್ನೂರು ಕೆಂಪಮ್ಮ, ಸಣ್ಣಮ್ಮ, ರಾಜಮ್ಮ, ಮಂಗಳಮ್ಮ, ನೀಲಮ್ಮ ಅವರು ಸೋಬಾನೆ ಪದಗಳನ್ನು ಹಾಡಿ ರಂಜಿಸಿದರು. ಮೈಸೂರು ಜಿಲ್ಲಾ ಕನ್ನಡ ವೃತ್ತಿ ರಂಗಭೂಮಿ ಕಲಾವಿದೆಯರ ಸಂಘದ ಕಲಾವಿದರು ನಾಟಕ ಪ್ರದರ್ಶಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕøತ ಸೋಬಾನೆ ಹಿರಿಯ ಕಲಾವಿದೆ ಬನ್ನೂರು ಕೆಂಪಮ್ಮ ಅವರನ್ನು ಸನ್ಮಾನಿಸಲಾಯಿತು.
ಸೋರೆಕಾಯಿಯಲ್ಲಿ ಅರಳಿದ ವಿವಿಧ ವಸ್ತುಗಳು: ಸುಚಿತ್ರಾ ಆರ್ಟ್ ಗ್ಯಾಲರಿಯಲ್ಲಿ ಸೋರೆಕಾಯಿಯನ್ನು ಬಳಸಿ ತಯಾರಿಸಲಾದ ವಿವಿಧ ವಸ್ತುಗಳು ಗಮನ ಸೆಳೆಯಿತು. ಮನೆ ಬಳಕೆಗೆ ಅಗತ್ಯವಾದ ಹೂದಾನಿ, ಡೈನಿಂಗ್ ಟೇಬಲ್ ಮೇಲೆ ಅಲಂಕರಿಸುವ ಸೆಟ್, ಮಕ್ಕಳಿಗೆ ಕೊಡುಗೆ ನೀಡಬಹುದಾದ ವಿವಿಧ ಬಗೆಯ ಅಟಿಕೆಗಳು ಸೇರಿದಂತೆ ಸೋರೆಕಾಯಿಯಿಂದ ಮಾಡಿದ ವಸ್ತುಗಳನ್ನು ಮೈಸೂರಿನ ವಾಜಮಂಗಲದ ಕೃಷಿ ಕಲಾ ಸಂಸ್ಥೆಯ ಸೀಮಾ ಕೃಷ್ಣಪ್ರಸಾದ್ ಪ್ರದರ್ಶನಕ್ಕಿಟ್ಟಿದ್ದರು.
ಮೈಸೂರಿನ ಸಾಂಪ್ರದಾಯಿಕ ಕಲೆಗೆ ಹೆಸರಾದ ಆಶಾ ಪ್ರಸಾದ್ ಅವರು ಇಂಗಲಿಕ್ ಬಣ್ಣದ ಪೌಡರ್, ಚಾಕ್ ಪೌಡರ್, ಮೈಸೂರ್ ಗೋಲ್ಡ್ ಲೀಫ್, ತ್ಯಾಂಜೋ ಗೋಲ್ಡ್ ಲೀಫ್‍ಗಳನ್ನು ಬಳಸಿ ರಚಿಸಿದ ಮೈಸೂರು, ಕೇರಳ, ರಾಜಾಸ್ತಾನ ಸೇರಿದಂತೆ ವಿವಿಧ ಸಾಂಪ್ರ ದಾಯಿಕ ಕಲಾ ಚಿತ್ರಗಳು ಇಲ್ಲಿ ಆಕರ್ಷಕವಾಗಿದ್ದವು. ಅಲ್ಲದೆ ಮೈಸೂರಿನ ರವಿವರ್ಮ ಆರ್ಟ್ ಸ್ಕೂಲ್‍ನ ವಿದ್ಯಾರ್ಥಿನಿಯರಾದ ಸಿರಿ ಮತ್ತು ಚಂದನ ರಚಿಸಿದ ವರ್ಲಿ ಕಲೆ ಚಿತ್ರಗಳು ನೋಡುಗರನ್ನು ಸೆಳೆದವು.
ಮೈಸೂರಿನ ಶಂಖು ಮತ್ತು ಕಪ್ಪೆಚಿಪ್ಪಿನ ಕಲಾಕೃತಿ ಗಳ ಮ್ಯೂಸಿಯಂನ ರಾಧಾ ಮಲ್ಲಪ್ಪ ಅವರು ನೂರಾರು ರೀತಿಯ ಶಂಖ ಮತ್ತು ಕಪ್ಪೆಚಿಪ್ಪಿನಿಂದ ತಯಾರಿಸಿದ ಕೀಚೈನ್, ಹೇರ್‍ಪಿನ್, ಬೊಂಬೆಗಳು, ಬ್ರೇಸ್‍ಲೇಟ್ ಸೇರಿದಂತೆ ನಾನಾ ವಸ್ತುಗಳ ಪ್ರದರ್ಶನ ಮತ್ತು ಮಾರಾಟವೂ ಇತ್ತು.
ಮಹಿಳೆಯರ ಕೊಡುಗೆ: ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಚಾಮರಾಜ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ, ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರು ತಮ್ಮದೇ ಆದಂತಹ ಕೊಡುಗೆ ನೀಡಿದ್ದಾರೆ. ವಿಶ್ವದ ಇತರೆ ರಾಷ್ಟ್ರಗಳಿಗಿಂತ ಭಾರತದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನವಿದೆ. ಮಹಿಳೆಯರು ಸರ್ಕಾರ ದಿಂದ ಇರುವ ಹತ್ತಾರು ಯೋಜನೆಗಳನ್ನು ಪಡೆದು ಕೊಳ್ಳಬೇಕು ಎಂದು ಸಲಹೆ ನೀಡಿದರು.
ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಮಾತನಾಡಿ, ಪ್ರತಿಯೊಬ್ಬ ಪುರುಷ ಕಲಾವಿದರ ರಂಗ ಚಟುವಟಿಕೆ ಹಿಂದೆ ಪತ್ನಿಯರು ಇದ್ದಾರೆ. ಜನಪದದ ಮೂಲ ಬೇರು ಅಜ್ಜಿಯಂದಿರಲ್ಲಿದೆ. ಅವರಿಂದಾಗಿ ಜನ ಪದ ಮತ್ತು ರಂಗಭೂಮಿ ಉಳಿದಿದೆ. ಮಹಿಳೆಯರು ಧಾರಾವಾಹಿ ಮತ್ತು ಮೊಬೈಲ್‍ಗಳಿಂದ ದೂರ ಇರ ಬೇಕು. ಕಲೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯ ಬೇಕು ಎಂದರು.
ಜಿಪಂ ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಜಿಪಂ ಸದಸ್ಯೆ ಮಂಗಳಾ ಸೋಮಶೇಖರ್, ರಂಗಾಯಣ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಅಭ್ಯುದಯ ಸಂಘದ ಅಧ್ಯಕ್ಷೆ ಸುಶೀಲಮ್ಮ, ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷೆ ವಸಂತ, ಹಿರಿಯ ಕಲಾವಿದೆ ಶಾಂತಾದೇವಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚನ್ನಪ್ಪ ಇನ್ನಿತರರು ಉಪಸ್ಥಿತರಿದ್ದರು.
ಆಹ್ವಾನ ಪತ್ರಿಕೆಯಲ್ಲಿ ಶಿಷ್ಟಾಚಾರದ ಪ್ರಕಾರ ಮೈಸೂರು ಜಿಲ್ಲೆಯ ಶಾಸಕರು, ಅಧಿಕಾರಿಗಳೆಲ್ಲರನ್ನೂ ಹಾಕಲಾಗಿದೆ. ಆದರೆ ಅವರುಗಳ್ಯಾರು ಬರದಿದ್ದರೆ ಕಾರ್ಯಕ್ರಮ ಕಾಟಾಚಾರಕ್ಕೆ ಎಂಬಂತಾಗುತ್ತದೆ. ಈ ವ್ಯವಸ್ಥೆ ಬದಲಾಗಬೇಕು. ಈ ಬಗ್ಗೆ ನಾನು ಜಿಲ್ಲಾಧಿಕಾರಿ ಗಳಿಗೆ ಪತ್ರ ಬರೆದು ತಿಳಿಸಲಿದ್ದೇನೆ. – ಎಲ್.ನಾಗೇಂದ್ರ, ಶಾಸಕ