ಪುಟ್ಟರಂಗಶೆಟ್ಟಿ, ಮಹೇಶ್ ವಾಕ್ಸಮರ
ಚಾಮರಾಜನಗರ

ಪುಟ್ಟರಂಗಶೆಟ್ಟಿ, ಮಹೇಶ್ ವಾಕ್ಸಮರ

September 26, 2018
  • ಅಪಾಯಕಾರಿ ಕಾಂಗ್ರೆಸ್ ಗಿಡ ಕಡಿಯುವ ಕೆಲಸ ಮಾಡಿದ್ದೇವೆ: ಎನ್.ಮಹೇಶ್
  • ಅವನ್ ಯಾರ್ರೀ, ಕಾಂಗ್ರೆಸ್ ಕಿತ್ತು ಹಾಕುವುದಕ್ಕೆ: ಪುಟ್ಟರಂಗಶೆಟ್ಟಿ

ಚಾಮರಾಜನಗರ:  ಜಿಲ್ಲೆಯ ಸಚಿವ ರಾದ ಸಿ.ಪುಟ್ಟರಂಗಶೆಟ್ಟಿ ಮತ್ತು ಎನ್.ಮಹೇಶ್ ಅವರ ವಾಕ್ಸಮರ ಮುಂದುವರೆದಿದೆ.
‘ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವ ಎನ್.ಮಹೇಶ್ ಅವರು ಬಹಳ ಅಪಾಯಕಾರಿಯಾದ ಕಾಂಗ್ರೆಸ್ ಗಿಡವನ್ನು ಕಡಿಯುವಂತಹ ಕೆಲಸ ಮಾಡುತ್ತಿದ್ದೇವೆ ಎಂಬ ಹೇಳಿಕೆಗೆ ಇಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟ ರಂಗಶೆಟ್ಟಿ ಅವರು ಏಕವಚನದಲ್ಲಿಯೇ ಕಿಡಿಕಾರಿದ್ದಾರೆ.

ನಡೆದಿದ್ದು ಏನು?: ಕೊಳ್ಳೇಗಾಲದಲ್ಲಿ ಇತ್ತೀಚೆಗೆ ಸುದ್ದಿಗಾರ ರೊಂದಿಗೆ ಮಾತನಾಡುವ ವೇಳೆ ಸಚಿವ ಎನ್.ಮಹೇಶ್, ಕಾಂಗ್ರೆಸ್ (ಪಾರ್ಥೇನಿಯಂ) ಗಿಡವನ್ನು ಕಡಿಯುವ ಕೆಲಸ ಮಾಡಿದ್ದೇವೆ. ಏಕೆಂದರೆ ಈ ಕಾಂಗ್ರೆಸ್ ಗಿಡ ಬಹಳ ಅಪಾಯ ಕಾರಿ. ಈ ಅಪಾಯಕಾರಿಯಾದ ಕಾಂಗ್ರೆಸ್ ಗಿಡವನ್ನು ಕಡಿಯುವಂತಹ ಕೆಲಸ ಮಾಡಿದ್ದೇವೆ ಎಂದು ಕಾಂಗ್ರೆಸ್ ವಿರುದ್ಧ ಟೀಕಿಸಿದ್ದರು.

ಏಕವಚನದಲ್ಲಿ ವಾಗ್ದಾಳಿ: ಸಚಿವ ಎನ್.ಮಹೇಶ್ ಅವರ ಈ ಹೇಳಿಕೆ ಬಗ್ಗೆ ಇಂದು ಕುದೇರುನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಉತ್ತರಿಸಿದ ಪುಟ್ಟರಂಗಶೆಟ್ಟಿ, ಅವನು ಯಾರ್ರೀ, ಕಾಂಗ್ರೆಸ್‍ನ್ನು ಕಿತ್ತು ಹಾಕುವುದಕ್ಕೆ. ಮಹೇಶ್ ಒಂದು ವೇಳೆ ಈ ರೀತಿ ಹೇಳಿಕೆ ನೀಡಿದ್ದರೆ, ಅವನೇ ಕಿತ್ತುಕೊಂಡು ಹೋಗುತ್ತಾನೆ ಎಂದು ಏಕವಚನದಲ್ಲಿಯೇ ಕಿಡಿ ಕಾರಿದರು.
ಸರ್ಕಾರದಲ್ಲಿ ಅವನು (ಎನ್.ಮಹೇಶ್) ಒಬ್ಬನೇ ಇದ್ದಾನೆ. ಆತ ಒನ್ ಮ್ಯಾನ್ ಆರ್ಮಿ, ನಾವು 80 ಜನ ಇದ್ದೇವೆ. ದಳದವರು 37 ಜನ ಇದ್ದಾರೆ. ಸರ್ಕಾರ ನಮ್ಮದು. ನಾವು ಮನಸ್ಸು ಮಾಡಿದರೆ ಎನ್.ಮಹೇಶ್ ಉಳಿಯುವುದಿಲ್ಲ. ಎಂತೆಂಥವರಿಗೋ ಕಾಂಗ್ರೆಸ್‍ಗೆ ಏನೂ ಮಾಡಲು ಆಗಿಲ್ಲ. ಇವನಿಂದ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ಆತ (ಎನ್.ಮಹೇಶ್) ಅಪ್ಪಿತಪ್ಪಿ ಚುನಾವಣೆಯಲ್ಲಿ ಗೆದ್ದಿದ್ದಾನೆ. ಅದನ್ನು ತಿಳಿದುಕೊಂಡು ರಾಜಕೀಯ ಮಾಡಲಿ. ಐದು ವರ್ಷಗಳಲ್ಲಿ ಸಾಧನೆ ಮಾಡಲಿ. ಆ ಮೇಲೆ ಮಾತಾಡೋಣ. ಅದನ್ನು ಬಿಟ್ಟು ಕಣ್ಣು ಬಿಡುತ್ತಿರುವಾಗಲೇ ಎಲ್ಲಾ ಮಾಡುತ್ತೇನೆ ಎಂಬುದೆಲ್ಲಾ ಸಾಧ್ಯವಿಲ್ಲದ ಮಾತು ಎಂದು ಪುಟ್ಟರಂಗಶೆಟ್ಟಿ ಅವರು ಮಹೇಶ್ ವಿರುದ್ಧ ವಾಗ್ದಾಳಿ ನಡೆಸಿದರು.

Translate »