ಗುಂಡ್ಲುಪೇಟೆಯಲ್ಲೂ ಕಾರ್ಮಿಕರ ಮುಷ್ಕರ
ಚಾಮರಾಜನಗರ

ಗುಂಡ್ಲುಪೇಟೆಯಲ್ಲೂ ಕಾರ್ಮಿಕರ ಮುಷ್ಕರ

January 9, 2020

ಗುಂಡ್ಲುಪೇಟೆ, ಜ.8(ಸೋಮ್.ಜಿ)- ಪಟ್ಟಣದಲ್ಲಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ತಾಲೂಕಿನ ಗ್ರಾಮ ಪಂಚಾಯಿತಿ ನೌಕರರು, ಅಂಗನವಾಡಿ ಕಾರ್ಯಕರ್ತೆಯರು, ಅಕ್ಷರ ದಾಸೋಹದ ಬಿಸಿಯೂಟ ನೌಕರರು ಭಾಗವಹಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಿ.ಐ.ಟಿ.ಯು. ಬಾವುಟವನ್ನು ಹಿಡಿದು ಸಾಗಿದ ಪ್ರತಿಭಟನಾಕಾರರು, ನೌಕರರಿಗೆ ಕನಿಷ್ಟ ವೇತನ ನೀಡಲು ಅನುದಾನ ಮೀಸಲು, ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಮಾಸಿಕ ಪಿಂಚಣಿ, ಡಾ.ಸ್ವಾಮಿನಾಥನ್ ವರದಿ ಜಾರಿ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ನಂತರ ತಾಲೂಕು ಕಚೇರಿ ಮುಂಭಾಗದಲ್ಲಿ ಸಮಾವೇಶಗೊಂಡು ಬೇಡಿಕೆಗಳ ಈಡೇರಿಕೆ ಆಗ್ರಹಿಸಿರುವ ಮನವಿ ಪತ್ರವನ್ನು ತಹಶೀಲ್ದಾರ್ ಎಂ.ನಂಜುಂಡಯ್ಯ ಅವರಿಗೆ ಸಲ್ಲಿಸಿದರು.

ಈ ವೇಳೆ ಗ್ರಾಪಂ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಹದೇವಸ್ವಾಮಿ, ತಾಲೂಕು ಅಧ್ಯಕ್ಷ ಮಲ್ಲು, ಕಾರ್ಯದರ್ಶಿ ಮಹೇಂದ್ರ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ವಿಮಲಾ, ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಮಹದೇವಮ್ಮ ಸೇರಿದಂತೆ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.

ಮುಷ್ಕರದ ಬಿಸಿ ಇಲ್ಲ: ಪಟ್ಟಣದಲ್ಲಿ ಮುಷ್ಕರದ ಬಿಸಿ ತಟ್ಟಲಿಲ್ಲ. ಬೆಳಗ್ಗೆಯಿಂದಲೇ ಅಂಗಡಿ ಮುಂಗಟ್ಟು, ಚಿತ್ರಮಂದಿರ, ಶಾಲಾ-ಕಾಲೇಜುಗಳು, ಪೆಟ್ರೋಲ್ ಬಂಕ್ ಸೇರಿದಂತೆ ಹಲವು ಉದ್ಯಮಗಳು ಎಂದಿನಂತೆ ಸಾಗಿದವು. ಸಾರಿಗೆ ಬಸ್ ವ್ಯವಸ್ಥೆ ಬೆಳಗ್ಗೆಯಿಂದಲೇ ಪ್ರತಿನಿತ್ಯದಂತೆ ಇದ್ದುದರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆಯುಂಟಾಗಲಿಲ್ಲ.

Translate »