ಬರುವ ಶೈಕ್ಷಣಿಕ ವರ್ಷದಿಂದ ಬೇಸಿಗೆ ಸಂಭ್ರಮ ಜಾರಿ
ಚಾಮರಾಜನಗರ

ಬರುವ ಶೈಕ್ಷಣಿಕ ವರ್ಷದಿಂದ ಬೇಸಿಗೆ ಸಂಭ್ರಮ ಜಾರಿ

January 9, 2020

ವಾರಕ್ಕೊಮ್ಮೆ ಬ್ಯಾಗ್ ರಹಿತ ದಿನ ಜಾರಿಗೆ ಚಿಂತನೆ

ಚಾಮರಾಜನಗರ, ಜ.8- ಬರಲಿರುವ ಶೈಕ್ಷಣಿಕ ವರ್ಷದಿಂದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಬೇಸಿಗೆ ಸಂಭ್ರಮ ಎಂಬ ಕಾರ್ಯ ಕ್ರಮವನ್ನು ಜಾರಿಗೊಳಿಸಲಿದ್ದು, ಇದರಿಂದ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರತರಲು ಸಾಧ್ಯವಾಗಲಿದೆ ಎಂದು ಪ್ರಾಥಮಿಕ, ಪ್ರೌಢಶಿಕ್ಷಣ, ಕಾರ್ಮಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್‍ಕುಮಾರ್ ತಿಳಿಸಿದರು.

ನಗರದ ರಾಮಸಮುದ್ರದ ಸಿ.ಆರ್. ಬಾಲರಪಟ್ಟಣ ಶಾಲಾ ಆವರಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಪ್ರತಿಭೆ ಅನಾವರಣಕ್ಕೆ ಬೇಸಿಗೆ ಸಂಭ್ರಮ ಸಹಕಾರಿ ಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಸಚಿವರು ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮವು ಸಹ ಮಕ್ಕಳಲ್ಲಿ ಅಡಗಿ ರುವ ವಿಶೇಷ ಕಲೆ, ಸಂಗೀತದಂತಹ ಪಠ್ಯೇತರ ಚಟುವಟಿಕೆ ಯನ್ನು ಬಿಂಬಿಸಲು ಸಹಾಯಕವಾಗಲಿದೆ. ನಮ್ಮ ಜಿಲ್ಲೆಯಿಂದ ಅತೀ ಹೆಚ್ಚು ಮಕ್ಕಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಲಿ ಎಂದು ಶುಭ ಹಾರೈಸಿದರು. ಮಕ್ಕಳು ಸದಾ ಚಟುವಟಿಕೆಯಿಂದ ಕೂಡಿದ್ದು, ಕೇವಲ ಓದು, ಪರೀಕ್ಷೆ ಅಂಕಗಳಿಗೆ ಸೀಮಿತವಾಗದೇ ತಮ್ಮೊಳಗಿ ರುವ ಒಬ್ಬ ಸಂಗೀತಗಾರ, ನಾಟಕಗಾರ, ಕಲೆಗಾರ ಇತ್ಯಾದಿ ಪ್ರತಿಭೆಗಳನ್ನು ಹೊರತರುವಂತಹ ವೇದಿಕೆಯಾಗಿ ರೂಪಿಸುವುದು ಪ್ರತಿಭಾ ಕಾರಂಜಿಯ ಉದ್ದೇಶವಾಗಿದೆ. ಸದಾ ಚಟುವಟಿಕೆ ಯಿಂದ ಕೂಡಿದ್ದು, ಪಠ್ಯೇತರವು ಶಿಕ್ಷಣದ ಒಂದು ಭಾಗವಾಗಿ ಮಕ್ಕಳನ್ನು ಸಮಾಜ ಗುರುತಿಸುವಂತಾಗಬೇಕು ಎಂದು ಹೇಳಿದರು.

ವಾರದಲ್ಲಿ ಒಂದು ದಿನ ಬ್ಯಾಗ್ ರಹಿತ ದಿನ ಮಾಡಿ ಆ ದಿನವನ್ನು ಪಠ್ಯೇತರ ಚಟುವಟಿಕೆಗಳ ಮೂಲಕ ಜೀವನದ ಮೌಲ್ಯ ಗಳು, ನಾಗರಿಕತೆ, ಗುರುಹಿರಿಯರನ್ನು ಗೌರವಿಸುವುದು ಹೇಗೆ ಎಂಬುವುದಕ್ಕೆ ಮಕ್ಕಳಲ್ಲಿ ಪ್ರೇರೇಪಿಸುವ ಯೋಜನೆಯಾಗಿ ರೂಪಿ ಸಲು ತೀರ್ಮಾನಿಸಲಾಗಿದೆ ಎಂದರು. ಪ್ರತಿ ದಿನ ಬೆಳಿಗ್ಗೆಯಿಂದ ಸಂಜೆಯವರೆಗೂ ಶಾಲೆಯ ಬಗ್ಗೆ ಮಕ್ಕಳ ಮನಸ್ಸಿನಲ್ಲಿ ಮೂಡಿರಬಹುದಾದ ಒತ್ತಡ ಭಾವನೆಯನ್ನು ಹೋಗಲಾಡಿಸುವ ದೃಷ್ಠಿಯಿಂದ ಲಾಸ್ಟ್‍ಬೆಲ್ ಮಕ್ಕಳಿಗೆ ಇಷ್ಟವಾಗುವ ಹಾಗೇ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಚಿಂತಿಸಲಾಗಿದೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು.

ಶಾಸಕ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಿವಮ್ಮ, ತಾಪಂ ಉಪಾಧ್ಯಕ್ಷ ಜಿ. ಬಸವಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ಆರ್. ಬಾಲರಾಜು, ಕೆರೆಹಳ್ಳಿ ನವೀನ್, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಪಂ ಸಿಇಓ ಬಿ.ಎಚ್.ನಾರಾಯಣ ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದ್ ಕುಮಾರ್, ಕೊಳ್ಳೇಗಾಲ ಉಪವಿಭಾಗಾಧಿಕಾರಿ ನಿಖಿತಾ ಚಿನ್ನಸ್ವಾಮಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಡಿ.ಎಸ್. ಕೃಷ್ಣಮೂರ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪಿ. ಮಂಜುನಾಥ್, ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ಪ್ರಾಂಶು ಪಾಲರಾದ ಭಾರತಿ ಇತರರು ಉಪಸ್ಥಿತರಿದ್ದರು.

 

 

Translate »