ಹನೂರು ಬಳಿ ಗಾಂಜಾ ವಶ: ಪತ್ನಿ ಬಂಧನ, ಪತಿ ಪರಾರಿ
ಚಾಮರಾಜನಗರ

ಹನೂರು ಬಳಿ ಗಾಂಜಾ ವಶ: ಪತ್ನಿ ಬಂಧನ, ಪತಿ ಪರಾರಿ

January 9, 2020

ಹನೂರು, ಜ.8- ಬದನೆ ಬೆಳೆ ನಡುವೆ ದಂಪತಿ ಗಾಂಜಾ ಬೆಳೆದಿದ್ದು, ಪೊಲೀಸರು ಗಾಂಜಾವನ್ನು ವಶಪಡಿಸಿಕೊಂಡ ಘಟನೆ ಹನೂರು ತಾಲೂಕಿನ ದೊಮ್ಮನಗದ್ದೆಯಲ್ಲಿ  ನಡೆದಿದ್ದು, ಓರ್ವ ಮಹಿಳೆಯನ್ನು ಬಂಧಿಸಿದ್ದಾರೆ.

ಹನೂರು ತಾಲೂಕಿನ ಸಮೀಪದ ದೊಮ್ಮನಗದ್ದೆ ಗ್ರಾಮದ ರಂಗುನಾಯ್ಕ ಹಾಗೂ ಸರಸಿಬಾಯಿ ದಂಪತಿಯು  ಜಮೀನಿನ ಬದನೆ ಬೆಳೆಯೊಂದಿಗೆ ಮಿಶ್ರಬೆಳೆಯಂತೆ  ಗಾಂಜಾ ಬೆಳೆದಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ರಾಮಾಪುರ ಪಿಐ ಮನೋಜ್ ಕುಮಾರ್ ಸಿಬ್ಬಂದಿಗಳ ಜೊತೆ ದಾಳಿ ನಡೆಸಿ 89 ಕೆಜಿ ಹಸಿ ಗಾಂಜಾ, 12 ಕೆಜಿ ಮಾರಾಟಕ್ಕೆ ಸಿದ್ದಪಡಿಸಿದ್ದ ಒಣ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಚಿಕ್ಕಲ್ಲೂರು ಜಾತ್ರೆ ಜನವರಿ 10 ರಿಂದ  ಆರಂಭವಾಗಲಿದ್ದು ಭಂಗಿ ಸೇವೆಯಲ್ಲಿ ಮಾಂಸಕ್ಕೆ ಗಾಂಜಾ ಸೊಪ್ಪನ್ನು ಕೆಲವರು ಬೆರೆಸುವ ರೂಢಿ ಇರುವುದರಿಂದ ಇಷ್ಟೊಂದು ಗಾಂಜಾವನ್ನು ಸೇರಿಸಿಟ್ಟಿದ್ದರು ಎಂದು ತಿಳಿದುಬಂದಿದೆ. ಸದ್ಯ, ಸರಸಿಬಾಯಿಯನ್ನು ಬಂಧಿಸಲಾಗಿದ್ದು ಪತಿ ರಂಗುನಾಯಕ್ ಪರಾರಿಯಾಗಿದ್ದಾನೆ.

ಡಿವೈಎಸ್‍ಪಿ ಭೇಟಿ: ಸುದ್ದಿ ತಿಳಿದ ತಕ್ಷಣ ಕೊಳ್ಳೇಗಾಲ ಉಪವಿಭಾಗದ ಡಿವೈಎಸ್‍ಪಿ ನವೀನ್‍ಕುಮಾರ್ ದೊಮ್ಮನಗದ್ದೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಜೊತೆಗೆ ಚಿಕ್ಕಲ್ಲೂರು ಜಾತ್ರೆ ಹಿನ್ನಲೆಯಲ್ಲಿ ಪತ್ತೆಯಾಗಿರುವ ಈ ಗಾಂಜಾ ಪ್ರಕರಣವನ್ನು ರಾಮಾಪುರ ಪೊಲೀಸರು ಪತ್ತೆ ಹಚ್ಚಿರುವುದು ಶ್ಲಾಘನೀಯ ವಿಚಾರವಾಗಿದೆ ಎಂದರು.

ಕಾರ್ಯಾಚರಣೆಯಲ್ಲಿ ಎಎಸ್‍ಐ ರಾಮು, ಮುಖ್ಯಪೇದೆಗಳಾದ ನಂಜುಂಡ, ಲಿಂಗರಾಜು, ಶಿವರಾಜು, ನಾಗೇಂದ್ರ, ಮಾದೇಶ್, ಮಲ್ಲಿಕಾರ್ಜುನ, ಗೋವಿಂದರಾಜು, ತಕೀವುಲ್ಲಾ,  ಪೇದೆಗಳಾದ  ಅಣ್ಣಾದೂರೈ,  ರಘು, ರವಿಪ್ರಸಾದ್, ಬೊಮ್ಮೇಗೌಡ, ಮಂಜು, ಮನೋಹರ್, ಹೇಮಾವತಿ, ರೇಣುಕ, ಚಾಲಕರಾದ ನಾಗರಾಜು, ಶ್ರೀನಿವಾಸ್,ಆರ್ ಐ ಮಾದೇಶ್, ಗ್ರಾಮ ಲೆಕ್ಕಿಗ ಹೊಂಬೇಗೌಡ ಇನ್ನಿತರರು ಭಾಗವಹಿಸಿದ್ದರು.

Translate »