ಕಳವು ಆರೋಪದಡಿ ಬಂಧಿಸಲ್ಪಟ್ಟ ಕಾರ್ಮಿಕನ ಆತ್ಮಹತ್ಯೆ ಪ್ರಕರಣ
ಹಾಸನ

ಕಳವು ಆರೋಪದಡಿ ಬಂಧಿಸಲ್ಪಟ್ಟ ಕಾರ್ಮಿಕನ ಆತ್ಮಹತ್ಯೆ ಪ್ರಕರಣ

December 28, 2018

ಬಿಯರ್ ಕಂಪನಿ ಮುಂದೆ ಶವವಿಟ್ಟು ಪ್ರತಿಭಟನೆ
* ಮೃತನ ಕುಟುಂಬಕ್ಕೆ ಕಂಪನಿಯಿಂದ 8 ಲಕ್ಷ ಪರಿಹಾರ
* ಕಂಪನಿ ಮ್ಯಾನೇಜರ್ ಕೆಲಸದಿಂದ ವಜಾ ಭರವಸೆ
* ಮೃತನ ಸಹೋದರನಿಗೆ ಉದ್ಯೋಗ

ಹಾಸನ: ಬಿಯರ್ ಕಂಪನಿ ಯಲ್ಲಿ ಕಳವು ಮಾಡಿದ ಆರೋಪದಡಿ ಬಂಧಿಸಲ್ಪಟ್ಟು, ಮನನೊಂದ ಕಾರ್ಮಿಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಕಾರ್ಮಿಕನ ಕುಟುಂಬಕ್ಕೆ ಕಂಪನಿ 8 ಲಕ್ಷ ರೂ ಪರಿಹಾರ, ಆತನ ಸಹೋದರನಿಗೆ ಉದ್ಯೋಗ ಹಾಗೂ ಪೊಲೀಸರಿಗೆ ದೂರು ಸಲ್ಲಿಸಿದ ಮ್ಯಾನೇಜರ್ ವಜಾ ಮಾಡುವ ಭರವಸೆ ನೀಡಲಾಗಿದೆ.

ಹಾಸನದ ವುಡ್ ಪೀಕರ್ಸ್ ಬಿಯರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಸುನೀಲ್ ಸೇರಿದಂತೆ ಮೂವರ ವಿರುದ್ಧ 11 ಬಿಯರ್ ಬಾಟಲಿಗಳನ್ನು ಕಳವು ಮಾಡ ಲಾಗಿದೆ ಎಂದು ಕಂಪನಿ ಮ್ಯಾನೇಜರ್ ರೇಷ್ಮಾ ಅವರು ನೀಡಿದ ದೂರಿನ ಮೇರೆಗೆ ಡಿ.21ರಂದು ಮೂವರನ್ನು ಪೊಲೀಸರು ಬಂಧಿಸಿದ್ದರು. ಜಾಮೀನಿನ ಮೇಲೆ ಬಿಡು ಗಡೆಯಾಗಿ ಬಂದ ನಂತರ ಡಿ.22ರಂದು ಮನನೊಂದು ಸುನೀಲ್ ವಿಷ ಸೇವಿಸಿದ್ದ. ಆತ ಚಿಕಿತ್ಸೆ ಫಲಕಾರಿಯಾಗದೆ ಬುಧ ವಾರ ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ.

ಈ ಹಿನ್ನೆಲೆಯಲ್ಲಿ ಆತನ ಸಂಬಂಧಿಕರು ಹಾಗೂ ಜೆಡಿಎಸ್ ಕಾರ್ಯಕರ್ತರು ಬುಧವಾರ ಕಂಪನಿ ಮುಂದೆ ಮೃತ ಸುನೀಲ್‍ನ ಶವವನ್ನಿಟ್ಟು ಪ್ರತಿಭಟನೆ ಆರಂಭಿಸಿದ್ದರು. ಕಂಪನಿಯ ಮ್ಯಾನೇಜ್‍ಮೆಂಟ್ ಕಿರುಕುಳ ದಿಂದ ಆತ ಸಾವನ್ನಪ್ಪಿದ್ದು, ಕುಟುಂಬಕ್ಕೆ ಪರಿಹಾರ ನೀಡಬೇಕು ಹಾಗೂ ಕಾರ್ಮಿಕ ನಿಗೆ ಕಿರುಕುಳ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು.

ಪ್ರತಿಭಟನೆ ಇಂದು ಕೂಡ ಮುಂದುವರೆ ದಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಗೌಡ, ಜೆಡಿಎಸ್ ಯುವ ಮುಖಂಡ ಪ್ರಜ್ವಲ್ ರೇವಣ್ಣ ಸೇರಿದಂತೆ ಕೆಲವು ಮುಖಂಡರು ಕಂಪನಿಯ ಕಾನೂನು ಸಲಹೆಗಾರ ಜಗದೀಶ್ ರಾವ್ ಮತ್ತಿತರರ ಜೊತೆ ಮಾತುಕತೆ ನಡೆಸಿದ್ದರು. ಮಧ್ಯಾ ಹ್ನದ ವೇಳೆಗೆ ಮುಖಂಡರ ಮಾತುಕತೆ ಯಶಸ್ವಿಯಾಗಿದ್ದು, ಮೃತನ ಕುಟುಂಬಕ್ಕೆ ಕಂಪನಿಯಿಂದ 8 ಲಕ್ಷ ರೂ ಪರಿಹಾರ ನೀಡುವುದು, ಆತನ ಸಹೋದರ ಮನೋಜ್‍ಗೆ ಕಂಪನಿಯಲ್ಲಿ ಉದ್ಯೋಗ ನೀಡುವುದು ಹಾಗೂ ಮೃತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದ ಮ್ಯಾನೇಜರ್ ರೇಷ್ಮಾ ಅವ ರನ್ನು ಕೆಲಸದಿಂದ ವಜಾಗೊಳಿಸುವುದು ಅಲ್ಲದೆ, ಪೊಲೀಸರಿಗೆ ನೀಡಿರುವ ದೂರನ್ನು ಹಿಂಪಡೆಯಲಾಗುವುದು ಎಂದು ಕಂಪನಿ ವತಿಯಿಂದ ಭರವಸೆ ದೊರೆತ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಈ ವೇಳೆ ಮೃತ ಸುನೀಲ್ ಆಸ್ಪತ್ರೆಯಲ್ಲಿ ದ್ದಾಗಿನ ಚಿಕಿತ್ಸಾ ವೆಚ್ಚದ ಬಗ್ಗೆ ಆತನ ಸಂಬಂಧಿಕರು ಪ್ರಶ್ನಿಸಿದಾಗ ಮಧ್ಯ ಪ್ರವೇ ಶಿಸಿದ ಪ್ರಜ್ವಲ್ ರೇವಣ್ಣ, ಚಿಕಿತ್ಸಾ ವೆಚ್ಚ ವನ್ನು ತಾನೇ ನೀಡುವುದಾಗಿ ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದರು.

ಈ ವೇಳೆ ಎಎಸ್‍ಪಿ ನಂದಿನಿಗೌಡ, ಹಾಸನ ಗ್ರಾಮಾಂತರ ಠಾಣೆ ಸಬ್ ಇನ್‍ಸ್ಪೆಕ್ಟರ್ ರೇಖಾಬಾಯಿ ಮುಂತಾದವರಿದ್ದರು. ಪ್ರತಿ ಭಟನೆಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಪಟೇಲ್ ಶಿವರಾಂ, ಜಿಪಂ ಸದಸ್ಯ ಸ್ವರೂಪ್, ಉಪಾಧ್ಯಕ್ಷ ಸುಪ್ರದೀಪ್ ಯಜಮಾನ್, ಜೆಡಿಎಸ್ ಮುಖಂಡ ಕೆ.ಎಂ.ರಾಜೇಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ದ್ಯಾವೇಗೌಡ, ತಾಪಂ ಅಧ್ಯಕ್ಷ ಬಿ.ಟಿ.ಸತೀಶ್, ಕರವೇ ಜಿಲ್ಲಾಧ್ಯಕ್ಷ ಸತೀಶ್ ಪಟೇಲ್ ಮುಂತಾದವರಿದ್ದರು.

Translate »