ವಿಶ್ವ ತಂಬಾಕುರಹಿತ ದಿನಾಚರಣೆ ಪ್ರಯುಕ್ತ ಅರಿವು ಜಾಥಾ
ಮೈಸೂರು

ವಿಶ್ವ ತಂಬಾಕುರಹಿತ ದಿನಾಚರಣೆ ಪ್ರಯುಕ್ತ ಅರಿವು ಜಾಥಾ

June 1, 2018

ಮೈಸೂರು: ತಂಬಾಕು ಸೇವನೆ ಮೃತ್ಯುವಿಗೆ ಆಹ್ವಾನ, ರೈತ ಬಾಂಧವರೇ.. ತಂಬಾಕು ನಿಲ್ಲಿಸಿ, ಸಿರಿಧಾನ್ಯ ಬೆಳೆಯಿರಿ.
ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಂಟಿ ಆಶ್ರಯದಲ್ಲಿ ಗುರುವಾರ ಮೈಸೂರಿನ ಪ್ರಮುಖ ಬೀದಿಗಳಲ್ಲಿ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಅರಿವು ಜಾಥಾ ಸಂದರ್ಭದಲ್ಲಿ ಈ ಘೋಷಣೆಗಳುಳ್ಳ ಫಲಕಗಳನ್ನು ಪ್ರದರ್ಶಿಸಿ, ಜನಜಾಗೃತಿ ಉಂಟು ಮಾಡಲಾಯಿತು.

ಮೈಸೂರಿನ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್ ಜಾಥಾಗೆ ಚಾಲನೆ ನೀಡಿದರು. ಅಲ್ಲಿಂದ ಆರಂಭವಾದ ಅರಿವು ಜಾಥಾ, ಗಾಂಧಿ ವೃತ್ತ, ಮಹಾರಾಣ ಕಾಲೇಜು ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆಯಿತು.

ಅಲ್ಲಿ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಜೆಎಸ್‍ಎಸ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ಕಿರು ನಾಟಕ ಪ್ರದರ್ಶಿಸಿದರು. ಸರ್ಕಾರಿ ಶುಶ್ರೂóಷಕ ಶಾಲೆ, ಕೆ.ಆರ್.ಆಸ್ಪತ್ರೆ ಮೈಸೂರು ವೈದ್ಯಕೀಯ ಕಾಲೇಜು, ಜೆಎಸ್‍ಎಸ್ ಸ್ಕೂಲ್ ಆಫ್ ನರ್ಸಿಂಗ್ ಮತ್ತು ಕಾಲೇಜು, ಶಾಂತವೇರಿ ಸ್ಮಾರಕ ಸ್ಕೂಲ್ ಆಫ್ ನರ್ಸಿಂಗ್ ಮತ್ತು ಕಾಲೇಜು, ಪ್ಯಾರಾ ಮೆಡಿಕಲ್ ಎಜುಕೇಷನ್ ಸಂಸ್ಥೆಗಳು ಸೇರಿದಂತೆ ವಿವಿಧ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.
ಪ್ರಭಾರ ಡಿಹೆಚ್‍ಓ ಡಾ.ಎಂ.ಪಶುಪತಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸುಮಾ, ತಂಬಾಕು ನಿಯಂತ್ರಣ ಕೋಶದ ಮುದಸ್ಸೀರ್ ಅಜೀಜ್ ಇನ್ನಿತರರು ಭಾಗವಹಿಸಿದ್ದರು.

ತಂಬಾಕು ಬಳಕೆ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಉಂಟು ಮಾಡುತ್ತದೆ. ಜನರು ಇಂತಹ ವಸ್ತುಗಳ ಸೇವನೆಯಿಂದ ಯುವಜನತೆ ಜೀವನ ಮತ್ತು ಜೀವ ಕಳೆದುಕೊಳ್ಳಬೇಡಿ.
– ಟಿ.ಯೋಗೇಶ್, ಅಪರ ಜಿಲ್ಲಾಧಿಕಾರಿ.

ತಂಬಾಕು, ಸಿಗರೇಟ್, ಗುಟ್ಕಾ, ಹನ್ಸ್ ಇತ್ಯಾದಿ ಚಟಕ್ಕೆ ದಾಸರಾಗಿರುವವರು ಆ ಚಟದಿಂದ ಹೊರ ಬರಲು ಆಸಕ್ತಿ ಇರುವವರು ಕೆ.ಆರ್.ಆಸ್ಪತ್ರೆಯಲ್ಲಿರುವ ತಂಬಾಕು ವರ್ಜನ ಕೇಂದ್ರದಲ್ಲಿ ಹೆಸರು ನೋಂದಾಯಿಸಿಕೊಂಡರೆ ಅಂಥವರಿಗೆ ಈ ಕುರಿತು ಉಚಿತ ಸಲಹೆ ಮತ್ತು ಚಿಕಿತ್ಸೆ ನೀಡಲಾಗುವುದು. – ಡಾ.ಸುಮಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ.

Translate »