ವಿಶ್ವ ಯೋಗ ದಿನ: ಮುನ್ನೆಚ್ಚರಿಕೆ ಕ್ರಮದ ಹಿನ್ನೆಲೆಯಲ್ಲಿ ವಾಹನಗಳ ಸುಗಮ ಸಂಚಾರ
ಮೈಸೂರು

ವಿಶ್ವ ಯೋಗ ದಿನ: ಮುನ್ನೆಚ್ಚರಿಕೆ ಕ್ರಮದ ಹಿನ್ನೆಲೆಯಲ್ಲಿ ವಾಹನಗಳ ಸುಗಮ ಸಂಚಾರ

June 22, 2018

ವಿಶ್ವ ಯೋಗ ದಿನದ ಅಂಗವಾಗಿ ರೇಸ್ ಕೋರ್ಸ್ ಮೈದಾನದಲ್ಲಿ ಗುರುವಾರ ಬೆಳಿಗ್ಗೆ ನಡೆದ ಬೃಹತ್ ಸಾಮೂಹಿಕ ಯೋಗ ಪ್ರದರ್ಶನದ ವೇಳೆ ಮೈದಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಸಾಮಾನ್ಯವಾಗಿತ್ತು.

ಮೈದಾನದ ಸುತ್ತಲಿನ ರಸ್ತೆಗಳಲ್ಲಿ ಸಾರ್ವಜನಿಕರ ವಾಹನಗಳ ಸಂಚಾರವನ್ನು ಬೆಳಿಗ್ಗೆ 5ರಿಂದ 10 ಗಂಟೆವರೆಗೂ ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು. ಇದರಿಂದ ಇಲ್ಲಿ ಯಾವುದೇ ಗೋಜು, ಗದ್ದಲ ತಲೆದೋರಲಿಲ್ಲ. ಮೈದಾನಕ್ಕೆ ಹೊಂದಿಕೊಂಡಿರುವ ಮಹಾತ್ಮ ಗಾಂಧಿ ರಸ್ತೆ, ಮಹಾರಾಣಾ ಪ್ರತಾಪ ರಸ್ತೆ, ರೇಸ್ ಕೋರ್ಸ್ ಮತ್ತು ಸಿಎಆರ್ ಮೈದಾನದ ನಡುವೆ ಹಾದು ಹೋಗಿರುವ ರಸ್ತೆಗಳಲ್ಲಿ ಸಾರ್ವಜನಿಕ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು.

ಪ್ರದರ್ಶನದ ವೇಳೆ ಈ ರಸ್ತೆಗಳಲ್ಲಿ ಪೊಲೀಸರ ವಾಹನ ಮತ್ತು ಅಗತ್ಯ ವಸ್ತುಗಳ ಸರಬರಾಜು ವಾಹನಗಳ ಹೊರತುಪಡಿಸಿ ಇನ್ಯಾವುದೇ ವಾಹನಗಳು ಸಂಚರಿಸದ ಹಿನ್ನೆಲೆಯಲ್ಲಿ ನಿರಾಳವಾದ ವಾತಾವರಣ ಇಲ್ಲಿ ಕಂಡು ಬಂದಿತು.

ಜೆಎಲ್‍ಬಿ ರಸ್ತೆ, ಲಲಿತಮಹಲ್ ರಸ್ತೆ ಸೇರಿದಂತೆ ಮತ್ತಿತರ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಯೋಗ ಪ್ರದರ್ಶನದ ಮುನ್ನ ಮತ್ತು ಬಳಿಕ ಕಂಡು ಬಂದಿತು. ಪ್ರದರ್ಶನದ ನಂತರ ಯೋಗಪಟುಗಳನ್ನು ಕರೆ ತಂದಿದ್ದ ವಾಹನಗಳು ಒಮ್ಮೆಲೆ ರಸ್ತೆಗಿಳಿದ ಹಿನ್ನೆಲೆಯಲ್ಲಿ ಜೆಎಲ್‍ಬಿ ರಸ್ತೆಯಲ್ಲಿ (ಎಲೆ ತೋಟ) ಜೆಎಸ್‍ಎಸ್ ಕಾಲೇಜಿನ ಜಂಕ್ಷನ್‍ನಿಂದ ಸೇಂಟ್ ಮೇರಿಸ್ ವೃತ್ತದವರೆಗೆ ಸಂಚಾರ ದಟ್ಟಣೆ ಉಂಟಾಗಿತ್ತು. ಪ್ರದರ್ಶನಕ್ಕೂ ಮುನ್ನ ಯೋಗ ಪಟುಗಳ ವಾಹನಗಳು ಸುಗಮವಾಗಿ ಒಂದಾದ ಮೇಲೆ ಒಂದರಂತೆ ಬರುತ್ತಿದ್ದ ಹಿನ್ನೆಲೆಯಲ್ಲಿ ಅಂತಹ ಸಂಚಾರ ಸಮಸ್ಯೆ ತಲೆದೋರಲಿಲ್ಲ.

ಬರುತ್ತಲೇ ಇದ್ದರು, ಅರ್ಧದಲೇ ಎದ್ದು ಬಂದರು: ಸುಮಾರು 7 ಗಂಟೆಗೆ ಯೋಗಾಸನ ಪ್ರದರ್ಶನ ಆರಂಭವಾಗಿತ್ತು. ಹೀಗಿದ್ದರೂ ಆಗಾಗ್ಗೆ ಯೋಗಾಸಕ್ತರು ತಡವಾಗಿ ಬರುತ್ತಲೇ ಇದ್ದರು. ಜೊತೆಗೆ ಪ್ರದರ್ಶನ ಅರ್ಧಕ್ಕೆ ಹಲವರು ಎದ್ದು ಹೊರ ನಡೆಯುತ್ತಿದ್ದರು. ಯುವಜನರು, ಮಹಿಳೆಯರು, ಪುರುಷರು ಹಾಗೂ ಮಕ್ಕಳು ಸೇರಿದಂತೆ ಹಲವು ಮಂದಿ ಅರ್ಧದಲ್ಲೇ ಪ್ರದರ್ಶನದಿಂದ ಹೊರ ಬಂದಿದ್ದರು. ಶಾಲೆಗೆ ಹೋಗಬೇಕು, ಕಚೇರಿಗೆ ತಡವಾಗುತ್ತಿದೆ ಎಂಬುದೂ ಸೇರಿದಂತೆ ಅನೇಕ ಕಾರಣಗಳು ಇವರಿಂದ ವ್ಯಕ್ತವಾಯಿತು.

ಬಿಗಿ ಭದ್ರತೆ: ಪ್ರದರ್ಶನಕ್ಕಾಗಿ ನಗರ ಪೊಲೀಸ್ ವತಿಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮೈದಾನಕ್ಕೆ ಹೊಂದಿಕೊಂಡ ರಸ್ತೆಗಳಲ್ಲಿ ಅಶ್ವದಳದ ಪೊಲೀಸರು ಗಸ್ತು ತಿರುಗುತ್ತಿದ್ದರು. ಬ್ಯಾರಿಕೇಡ್‍ಗಳ ಮೂಲಕ ವಾಹನಗಳು ನುಗ್ಗದಂತೆ ಎಚ್ಚರ ವಹಿಸಲಾಗಿತ್ತು. ಆಂಬುಲೇನ್ಸ್ ಸೇರಿದಂತೆ ಅಗತ್ಯ ಸೌಲಭ್ಯಗಳಿಗೆ ವ್ಯವಸ್ಥೆ ಮಾಡಲಾಗಿತ್ತು. ಮೈದಾನಕ್ಕೆ ಪ್ರವೇಶ ಪಡೆಯಲು ವ್ಯವಸ್ಥೆಗೊಳಿಸಲಾಗಿದ್ದ 7 ಗೇಟ್‍ಗಳ ಬಳಿಯೂ ಪೊಲೀಸರು ಹಾಗೂ ಸ್ವಯಂ ಸೇವಕರನ್ನು ನಿಯೋಜಿಸಲಾಗಿತ್ತು. ಮೈದಾನಕ್ಕೆ ತೆರಳಲು ಆಗಮಿಸಿದ ಯೋಗಪಟುಗಳಿಗೆ ಸ್ವಯಂ ಸೇವಕರು ಅಗತ್ಯ ಮಾಹಿತಿ ಒದಗಿಸಿದರು.

ಬಣಗುಡುತ್ತಿದ್ದ ವಿವಿಐಪಿ ಪಾರ್ಕಿಂಗ್: ಸಿಎಆರ್ ಮೈದಾನದ ಎದುರು ರಸ್ತೆ ಬದಿಗಳಲ್ಲಿ ವಿವಿಐಪಿ ವಾಹನಗಳ ನಿಲುಗಡೆಗೆ ಸ್ಥಳ ನಿಗದಿ ಮಾಡಲಾಗಿತ್ತು. ಆದರೆ ಇಲ್ಲಿ ಯಾವ ವಾಹನಗಳ ನಿಲುಗಡೆ ಇಲ್ಲದೆ ಭಣಗುಡುತ್ತಿದ್ದ ದೃಶ್ಯ ಕಂಡು ಬಂದಿತು. ಲಲಿತಮಹಲ್ ರಸ್ತೆಯಲ್ಲಿರುವ ಕಾರಂಜಿ ಕೆರೆ ಆವರಣ, ಎಟಿಐ ಸಂಸ್ಥೆ ಆವರಣ, ವಸ್ತು ಪ್ರದರ್ಶನ ಆವರಣ, ನಂಜನಗೂಡು ರಸ್ತೆಯ ಜೆಎಸ್‍ಎಸ್ ಕಾಲೇಜು ಆವರಣ, ಸಿಎಆರ್ ಮೈದಾನ, ಚಾಮುಂಡಿಬೆಟ್ಟದ ಪಾದ ಸ್ಥಳಗಳು ಸೇರಿದಂತೆ ಇನ್ನಿತರ ಜಾಗಗಳಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು.

Translate »