ಶ್ರೀರಾಮೇಶ್ವರ ದೇವಸ್ಥಾನದಲ್ಲಿ ಆರಿದ್ರಾದೇವಿ ಪೂಜೆ
ಚಾಮರಾಜನಗರ

ಶ್ರೀರಾಮೇಶ್ವರ ದೇವಸ್ಥಾನದಲ್ಲಿ ಆರಿದ್ರಾದೇವಿ ಪೂಜೆ

January 13, 2020

ಗುಂಡ್ಲುಪೇಟೆ, ಜ.11(ಸೋಮ್.ಜಿ)- ಪಟ್ಟಣದಲ್ಲಿರುವ ಪುರಾತನ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಆರಿದ್ರಾ ದೇವಿಯ ಪೂಜೆಯನ್ನು ವಿಜೃಂಭಣೆ ಯಿಂದ ನೆರವೇರಿಸಲಾಯಿತು.

ಬನದ ಹುಣ್ಣಿಮೆಯ ದಿನದಂದು ನಡೆಯುವ ಆರಿದ್ರಾದೇವಿ ಪೂಜೆಗಾಗಿ ದೇವಾಲಯವನ್ನು ಶುದ್ಧೀಕರಿಸಿ ತಳಿರು ತೋರಣಗಳಿಂದ ಅಲಂಕಾರ ಮಾಡಲಾ ಗಿತ್ತು. ಗುರುವಾರ ರಾತ್ರಿ ಅಂಧಕಾಸುರನ ಸಂಹಾರ ಕಾರ್ಯಕ್ರಮದ ನಂತರ ಶುಕ್ರವಾರ ದಂದು ಮುಂಜಾನೆಯಿಂದಲೇ ಪ್ರಧಾನ ಅರ್ಚಕ ಶಂಕರನಾರಾಯಣ ಜೋಯಿಸ್ ಮತ್ತು ಕಣ್ಣನ್ ನೇತೃತ್ವದಲ್ಲಿ ದೇವರಿಗೆ ಅಭಿ ಷೇಕ, ಪೂಜೆ ಮತ್ತು ಪ್ರಸಾದ ವಿತರಣೆ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿತು.

ಈ ವಿಶೇಷ ಪೂಜಾ ಕಾರ್ಯಕ್ರಮದ ಅಂಗ ವಾಗಿ ದೇವಾಲಯದ ಶಿವಲಿಂಗಕ್ಕೆ ವಿಶೇಷ ಅಲಂಕಾರ ಮಾಡಿ ಆರಿದ್ರದೇವಿಯನ್ನು ಜೊತೆ ಯಲ್ಲಿರಿಸಿ ಸಿಂಗರಿಸಿ ಪೂಜಾ ಕೈಂಕರ್ಯ ಗಳನ್ನು ನೆರವೇರಿಸಲಾಯಿತು. ಪಟ್ಟಣದ ಹಾಗೂ ಸುತ್ತಮುತ್ತ ಬಡಾವಣೆಯ ಭಕ್ತರು ದೇವರ ದರ್ಶನ ಪಡೆದರು.