ವೈಭವದಿಂದ ಜರುಗಿದ ಕಸ್ತೂರು ಶ್ರೀ ದೊಡ್ಡಮ್ಮತಾಯಿ ಚಿಕ್ಕಜಾತ್ರೆ
ಮೈಸೂರು

ವೈಭವದಿಂದ ಜರುಗಿದ ಕಸ್ತೂರು ಶ್ರೀ ದೊಡ್ಡಮ್ಮತಾಯಿ ಚಿಕ್ಕಜಾತ್ರೆ

January 13, 2020

ಚಾಮರಾಜನಗರ, ಜ.12(ಎಸ್‍ಎಸ್)- ತಾಲೂಕಿನ ಕಸ್ತೂರು ಶ್ರೀ ದೊಡ್ಡಮ್ಮ ತಾಯಿ ಚಿಕ್ಕಜಾತ್ರೆಯು ಭಾನುವಾರ ವೈಭವದಿಂದ ನಡೆಯಿತು.

ಕಳೆದ ಭಾನುವಾರ (ಜ.5) ದೊಡ್ಡಜಾತ್ರೆ ನಡೆದಿತ್ತು. ಈ ಭಾನುವಾರ ಚಿಕ್ಕಜಾತ್ರೆ ಇತ್ತು. ಹೀಗಾಗಿ ಅಸಖ್ಯಾಂತ ಭಕ್ತರು ಶ್ರೀ ದೊಡ್ಡಮ್ಮ ತಾಯಿ ದೇವಸ್ಥಾನಕ್ಕೆ ಆಗಮಿಸಿ ಭಕ್ತಿ ಸಮ ರ್ಪಿಸಿದರು. ಬಿಸಿಲೆನ್ನದೇ ಸರತಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು. ಹರಕೆ ಹೊತ್ತ ಭಕ್ತರು ಪಂಜಿನ ಸೇವೆಗೈದರು. ಜಾತ್ರೆ ಮೈದಾನ ತುಂಬಾ ಜನವೋ ಜನ ಕಂಡು ಬಂದರು.

ಈ ಭಾಗದಲ್ಲಿ ಕಸ್ತೂರು ಶ್ರೀ ದೊಡ್ಡಮ್ಮ ತಾಯಿ ಬಂಡಿಜಾತ್ರೆ ಅತಿ ದೊಡ್ಡ ಜಾತ್ರೆ ಎಂದೇ ಹೆಸರುವಾಸಿ. ಸುಮಾರು 23 ಗ್ರಾಮಗಳಲ್ಲಿ ಈ ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸ ಲಾಗುತ್ತದೆ. ದೊಡ್ಡಜಾತ್ರೆ ಆದ ಮುಂದಿನ ಭಾನುವಾರ ಚಿಕ್ಕಜಾತ್ರೆ ನಡೆಯುತ್ತದೆ. ಈ ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಳ್ಳುವುದು ವಾಡಿಕೆ. ದೊಡ್ಡ ಜಾತ್ರೆ ದಿನ ಮನೆಗೆ ಆಗಮಿಸುವ ಅತಿಥಿಗಳನ್ನು ಸತ್ಕರಿಸುವಲ್ಲಿ ಕುಟುಂಬದ ಸದಸ್ಯರು ನಿರತರಾಗಿರುತ್ತಾರೆ. ಅದಕ್ಕಾಗಿ ಚಿಕ್ಕಜಾತ್ರೆಯ ದಿನ ಕುಟುಂಬದ ಸದಸ್ಯರು ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಹೀಗಾಗಿ ಚಿಕ್ಕಜಾತ್ರೆಯಲ್ಲಿ ಭಾರೀ ಜನಸ್ತೋಮ ಕಂಡುಬಂತು.