ನಮ್ಮತ್ರ ಕೆಲಸ ಕೇಳೋಕೆ ನಾಚಿಕೆಯಾಗಲ್ವಾ ನಿಮಗೆ…!
ಮೈಸೂರು

ನಮ್ಮತ್ರ ಕೆಲಸ ಕೇಳೋಕೆ ನಾಚಿಕೆಯಾಗಲ್ವಾ ನಿಮಗೆ…!

June 9, 2019

ಮಂಡ್ಯ: ಜೋಡೆತ್ತು ಬರ್ತವೇ, ಕರೆದು ಹತ್ತಿಸಿಕೊಳ್ಳಿ, ನಮ್ಮತ್ರ ಕೆಲಸ ಕೇಳೋಕೆ ನಾಚಿಕೆ ಯಾಗಲ್ವಾ ನಿಮಗೆ..! ಎಂದು ಏಕವಚನದಲ್ಲಿ ಗ್ರಾಮಸ್ಥರ ಮೇಲೆ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಹರಿಹಾಯ್ದಿದ್ದಾರೆ. ಮದ್ದೂರು ಕ್ಷೇತ್ರದಲ್ಲಿ ವಿವಿಧೆಡೆ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ವೇಳೆ ಮದ್ದೂರಮ್ಮನ ಕೆರೆಯಂಗಳದಲ್ಲಿ `ದಲಿತ ಕಾಲೋನಿಗೆ ಚರಂಡಿ ಮತ್ತು ಸಮರ್ಪಕ ರಸ್ತೆ ನಿರ್ಮಿಸುವಂತೆ ಸಮಸ್ಯೆ ಹೇಳಿಕೊಳ್ಳಲು ಬಂದ ಜನರ ಮೇಲೆ ಚುನಾವಣೆಯ ಸೋಲಿನ ಆಕ್ರೋಶ ವನ್ನು ವ್ಯಕ್ತಪಡಿಸಿದರು.

ಅಭಿವೃದ್ಧಿಗೆ ನಾವು ಬೇಕು, ವೋಟು ಹಾಕೋದಕ್ಕೆ ಅವರು ಬೇಕಾ, ಮೆಡಗಾರಿಕೆ ಮಾಡೋಕೆ ಬಂದು ಬಿಟ್ಟಿದ್ದೀರಿ…ಕೆಲಸ ಮಾಡಿಕೊಡಿ ಅಂತಾ ನಮ್ಮನ್ನು ಕೇಳೋಕೆ ನಾಚಿಕೆ ಆಗಲ್ವಾ… ಚುನಾವಣೆ ಸಂದರ್ಭದಲ್ಲಿ ಎಲ್ಲಿ ಹೋಗಿದ್ರಿ, ನಾನ್ ಮಾಡಿದ ಅಭಿವೃದ್ಧಿ ಕೆಲಸಗಳೆಲ್ಲಾ ಕಾಣಿಸ್ತಿಲ್ಲವಾ… ಈಗ ಜೊಡೆತ್ತುಗಳು ಬರ್ತಾವೆ, ಕರೆದು ಹತ್ತಿಸಿಕೊಳ್ಳಿ ಎಂದು ಕಿಡಿಕಾರಿದರು. ಸಚಿವರ ಕೋಪಟೋಪದ ಮಾತಿನಿಂದ ತಬ್ಬಿಬ್ಬಾದ ದಲಿತ ಕಾಲೋನಿಯ ಜನ ಮರುಮಾತನಾಡದೆ ಸುಮ್ಮನಾಗಿದ್ದಾರೆ. ಸಚಿವ ತಮ್ಮಣ್ಣ ಅವರು ಚುನಾವಣೆ ವೇಳೆಯಲ್ಲಿಯೂ ಎಳೆನೀರು ಮಾರುಕಟ್ಟೆಯ ಬಳಿ ಮತಯಾಚನೆ ವೇಳೆ ತಮ್ಮ ನಾಲಿಗೆ ಹರಿಬಿಟ್ಟು ಎಡವಟ್ಟು ಮಾಡಿಕೊಂಡಿದ್ದರು. ಇದೀಗ ಅಂಥದ್ದೇ ಎಡವಟ್ಟಿನ ಮಾತುಗಳನ್ನಾಡುವ ಮೂಲಕ ಜನರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲು ಸಚಿವ ಡಿ.ಸಿ.ತಮ್ಮಣ್ಣ ಈ ರೀತಿ ರೊಚ್ಚಿಗೇಳಲು ಕಾರಣವಾಗಿದೆ ಎಂಬ ಮಾತುಗಳು ಕೇಳಿಬಂದಿದೆ.

ಸುಮಲತಾ ತಿರುಗೇಟು
ಬೆಂಗಳೂರು: ಜನ ವೋಟು ಹಾಕಿ ಗೆಲ್ಲಿ ಸಿದ ಮೇಲೆ ಅವರ ಕೆಲಸ ಮಾಡದಿದ್ದರೆ ಆ ಸ್ಥಾನದಲ್ಲಿದ್ದೂ ಅರ್ಥ ಇಲ್ಲ. ಜನರಿಗೆ ಸಹಾಯ ಮಾಡಲು ಆಗುವುದಿಲ್ಲ ಎಂದರೆ ರಾಜೀನಾಮೆ ನೀಡಿ ಎಂದು ಜನ ಕೇಳುತ್ತಾರೆ ಎಂದು ಡಿ.ಸಿ. ತಮ್ಮಣ್ಣ ವಿರುದ್ಧ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಕಿಡಿ ಕಾರಿದ್ದಾರೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ನನ್ನನ್ಮು ಬೆಂಬಲಿಸಿದ ಕಾರಣಕ್ಕೆ ಕ್ಷೇತ್ರದ ಜನರ ಕೆಲಸ ಕಾರ್ಯ ಮಾಡಿಕೊಡಲ್ಲ ಎಂದು ಸಚಿವರು, ಶಾಸಕರು ಹೇಳುತ್ತಾರೆ ಎಂದರೆ ಅದು ಅವರನ್ನು ಆಯ್ಕೆ ಮಾಡಿದ ಮತದಾರರಿಗೆ ಮಾಡಿದ ದ್ರೋಹ. ಅವರನ್ನು ರಾಜೀನಾಮೆ ಕೊಟ್ಟು ಹೋಗಿ ಎಂದು ಕ್ಷೇತ್ರದ ಮತದಾರರೇ ಕೇಳುತ್ತಾರೆ. ದ್ವೇಷದ ರಾಜಕಾರಣವನ್ನು ಜನ ಎಂದಿಗೂ ಒಪ್ಪುವುದಿಲ್ಲ ಎಂದರು.

Translate »