ಸೋಮವಾರಪೇಟೆ: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಮಲ್ಲಳ್ಳಿ ಜಲಪಾತದಲ್ಲಿ ಪ್ರವಾಸಿ ಯುವಕನೋರ್ವ ಕೊಚ್ಚಿ ಹೋಗಿರುವ ಘಟನೆ ಇಂದು ಸಂಜೆ ಸಂಭವಿಸಿದೆ.
ನೆರೆಯ ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ ಅರೆಹಳ್ಳಿ ಗ್ರಾಮ ನಿವಾಸಿ ಜಾವಿದ್ ಎಂಬಾತನೇ ಜಲ ಪಾತದಲ್ಲಿ ಕಣ್ಮರೆಯಾಗಿರುವ ಯುವಕ. ಈತನೊಂದಿಗೆ ಜಲಪಾತಕ್ಕೆ ಇಳಿದಿದ್ದ ಸ್ನೇಹಿತ ಫಾಜಿಲ್ ಕಲ್ಲುಬಂಡೆಯ ಆಶ್ರಯ ಪಡೆದು ಪ್ರಾಣ ಉಳಿಸಿಕೊಂಡಿದ್ದಾನೆ. ಜಾವಿದ್, ಫಾಜಿಲ್ ಸೇರಿದಂತೆ ಇತರ ಮೂವರು ಸ್ನೇಹಿತರು ಇಂದು ಸಂಜೆಯ ವೇಳೆಗೆ ಜಲಪಾತ ವೀಕ್ಷಣೆಗೆ ತೆರಳಿದ್ದರು. ಜಲಪಾತದಲ್ಲಿ ನೀರಿನ ಹರಿವು ಕಡಿಮೆ ಯಿದ್ದ ಹಿನ್ನೆಲೆ ಜಾವಿದ್ ಮತ್ತು ಫಾಜಿಲ್ ನೀರಿಗೆ ಇಳಿದು ಒಂದಷ್ಟು ದೂರ ತೆರಳಿದ್ದಾರೆ.
ಈ ಸಂದರ್ಭ ಜಲಪಾತದ ಮೇಲ್ಭಾಗದಲ್ಲಿರುವ ಹೈಡಲ್ ಪವರ್ ಪ್ರಾಜೆಕ್ಟ್ ನಿಂದ ನೀರು ಹರಿಯ ಬಿಡಲಾಗಿದ್ದು, ಜಲಪಾತದಲ್ಲಿ ನೀರಿನ ಮಟ್ಟ ಅಧಿಕಗೊಂಡಿದೆ. ಇದರಿಂದ ಗಾಬರಿಗೊಂಡ ಜಾವಿದ್ ವಾಪಸ್ ಬರುವ ಯತ್ನ ನಡೆಸಿದಾಗ ನೀರಿನ ರಭಸಕ್ಕೆ ಸಿಲುಕಿ ಸ್ನೇಹಿತರ ಕಣ್ಣೆದುರೇ ಕೊಚ್ಚಿಹೋಗಿದ್ದಾನೆ. ಮತ್ತೋರ್ವ ಸ್ನೇಹಿತ ಫಾಜಿಲ್ ಜಲಪಾತದ ಆಚೆ ಬದಿಯಲ್ಲಿ ಕಲ್ಲುಬಂಡೆಯ ಆಶ್ರಯ ಪಡೆದು ಜೀವ ಉಳಿಸಿಕೊಂಡಿದ್ದಾನೆ.
ರಕ್ಷಣಾ ಕಾರ್ಯಕ್ಕೆ ತೊಡಕು: ಸಂಜೆಯ ವೇಳೆಗೆ ಪ್ರಾರಂಭವಾಗಿರುವ ಮಳೆ ಹಾಗೂ ಜಲಪಾತದಲ್ಲಿ ನೀರಿನ ಹರಿವು ಅಧಿಕವಾಗಿರುವುದರಿಂದ ಫಾಜಿಲ್ ನನ್ನು ರಕ್ಷಿಸುವ ಕಾರ್ಯಕ್ಕೆ ತೊಡಕಾಗಿದೆ.
ಸಂಜೆ 7 ಗಂಟೆಗೆ ಸ್ಥಳೀಯರು ಸ್ಥಳಕ್ಕೆ ತೆರಳಿದ್ದು, ಹೈಡಲ್ ಪವರ್ ಪ್ರಾಜೆಕ್ಟ್ ನಿಂದ ನೀರು ಹರಿಸುವು ದನ್ನು ಸ್ಥಗಿತಗೊಳಿಸಿ ರಕ್ಷಣಾ ಕಾರ್ಯಕ್ಕೆ ಇಳಿದಿದ್ದಾರೆ. ಸೋಮವಾರಪೇಟೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಣ್ಮರೆಯಾಗಿರುವ ಜಾವಿದ್ನ ಪತ್ತೆಗೆ ನಾಳೆ (ಅ.10) ಕಾರ್ಯಾಚರಣೆ ನಡೆಸುವುದಾಗಿ ಪೆÇಲೀಸರು ತಿಳಿಸಿದ್ದಾರೆ. ನಯನ ಮನೋಹರ ಸೌಂದರ್ಯದೊಂದಿಗೆ ಅಪಾಯ ಕಾರಿಯೂ ಆಗಿರುವ ಮಲ್ಲಳ್ಳಿ ಜಲಪಾತದ ಬಳಿ ಇತ್ತೀಚಿನ ದಿನಗಳಲ್ಲಿ ಹಲವಷ್ಟು ಮುಂಜಾಗ್ರತಾ ಕ್ರಮ ಕೈಗೊಂಡು ಎಚ್ಚರಿಕೆಯ ಫಲಕಗಳನ್ನು ಅಳವಡಿಸಿದ್ದರೂ ಸಹ, ಇದನ್ನು ನಿರ್ಲಕ್ಷಿಸಿ ಜಲಪಾತಕ್ಕೆ ಇಳಿದು ಸಾವನ್ನಪ್ಪುತ್ತಿರುವ ಘಟನೆಗಳು ನಡೆಯುತ್ತಲೇ ಇವೆ.




