ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ: ಮೂವರ ಬಂಧನ, ಇಬ್ಬರು ಪರಾರಿ
ಮೈಸೂರು

ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ: ಮೂವರ ಬಂಧನ, ಇಬ್ಬರು ಪರಾರಿ

June 9, 2019

ಮೈಸೂರು: ಮೈಸೂರಿನ ಆರ್ಥಿಕ ಹಾಗೂ ಮಾದಕ ದ್ರವ್ಯ ಅಪರಾಧ ವಿಭಾಗ ಹಾಗೂ ಮೇಟಗಳ್ಳಿ ಠಾಣೆ ಪೊಲೀಸರು, ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿ, ಮೂವರನ್ನು ಬಂಧಿಸಿದ್ದು, ಪ್ರಮುಖ ಆರೋಪಿಗಳಿಬ್ಬರು ಪರಾರಿಯಾಗಿದ್ದಾರೆ.

ಮೈಸೂರಿನ ಬಿ.ಎಂ.ಶ್ರೀನಗರ, 2ನೇ ಮುಖ್ಯರಸ್ತೆಯಲ್ಲಿ ಮಂಜುಳ ಹಾಗೂ ಮಂಜು ನಾಥ್ ದಂಪತಿ, ವಾಸಕ್ಕೆಂದು ಬಾಡಿಗೆಗೆ ಪಡೆದಿದ್ದ ಮನೆಯಲ್ಲೇ ವೇಶ್ಯಾವಾಟಿಕೆ ನಡೆಸುತ್ತಿ ದ್ದರು. ಈ ಬಗ್ಗೆ ಖಚಿತ ಮಾಹಿತಿ ತಿಳಿದ ಆರ್ಥಿಕ ಹಾಗೂ ಮಾದಕ ದ್ರವ್ಯ ಅಪರಾಧ ವಿಭಾಗದ ಪೊಲೀಸರು ಶುಕ್ರವಾರ ಮಧ್ಯಾಹ್ನ ಮೇಟಗಳ್ಳಿ ಪೊಲೀಸರೊಂದಿಗೆ ದಾಳಿ ನಡೆಸಿದ್ದರು. ಈ ವೇಳೆ ಮಧ್ಯವರ್ತಿ ಸುವರ್ಣ ಹಾಗೂ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಇಬ್ಬರನ್ನು ವಶಕ್ಕೆ ಪಡೆದು, ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದೆ. ಆದರೆ ಮಹಿಳೆಯರನ್ನು ಕರೆತಂದು ಮನೆಯಲ್ಲೇ ವೇಶ್ಯಾವಾಟಿಕೆ ನಡೆಸುತ್ತಿದ್ದ ದಂಪತಿ ಪರಾರಿಯಾಗಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮೇಟಗಳ್ಳಿ ಠಾಣೆ ಪೊಲೀಸರು, ಬಂಧಿತ ಮಧ್ಯವರ್ತಿ ಸುವರ್ಣಾಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹುಣಸೂರು ಮೂಲದವರೆಂದು ಹೇಳಿಕೊಂಡಿರುವ ಮಂಜುಳಾ ಹಾಗೂ ಮಂಜು ನಾಥ್ ದಂಪತಿಗೆ ವೇಶ್ಯಾವಾಟಿಕೆ ನಡೆಸುವುದೇ ವೃತ್ತಿಯಾಗಿದೆ. 6 ತಿಂಗಳಿಗೊಮ್ಮೆ ಮನೆ ಬದಲಿಸುತ್ತಾರೆ. ಈಗಾಗಲೇ ಈ ದಂಪತಿ ವಿರುದ್ಧ ಮೇಟಗಳ್ಳಿ ಠಾಣೆಯಲ್ಲೇ 2 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

Translate »