ಇದು ಯಡಿಯೂರಪ್ಪ-ಸಿದ್ದರಾಮಯ್ಯ ನಡುವಿನ ಚುನಾವಣೆ ಪತ್ರಿಕಾ ಸಂವಾದದಲ್ಲಿ ಸಿಎಂ ಸಿದ್ದರಾಮಯ್ಯ ಅಭಿಮತ
ಮೈಸೂರು

ಇದು ಯಡಿಯೂರಪ್ಪ-ಸಿದ್ದರಾಮಯ್ಯ ನಡುವಿನ ಚುನಾವಣೆ ಪತ್ರಿಕಾ ಸಂವಾದದಲ್ಲಿ ಸಿಎಂ ಸಿದ್ದರಾಮಯ್ಯ ಅಭಿಮತ

May 7, 2018

ಬೆಂಗಳೂರು: ಇದು ಮೋದಿ- ಸಿದ್ದರಾಮಯ್ಯ ನಡುವಿನ ಚುನಾವಣೆ ಅಲ್ಲ. ಯಡಿಯೂರಪ್ಪ-ಸಿದ್ದರಾಮಯ್ಯ ನಡುವಿನ ಚುನಾವಣೆ. ಮೋದಿ ಮ್ಯಾಜಿಕ್ ಇಲ್ಲಿ ನಡೆಯಲ್ಲ. ರಾಜ್ಯ ವಿಧಾನಸಭೆ ಚುನಾವಣೆ 2019ರ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು ಪ್ರೆಸ್‍ಕ್ಲಬ್ ಹಾಗೂ ವರದಿಗಾರರ ಕೂಟ ಜಂಟಿಯಾಗಿ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಮೇಲ್ನೋಟಕ್ಕೆ ಮೂರು ಪಕ್ಷಗಳ ನಡುವೆ ಸ್ಪರ್ಧೆ ಕಂಡರೂ ವಾಸ್ತವವಾಗಿ ಎಲ್ಲಾ ಮೂರು ಕಡೆ ಇಲ್ಲ, ಕೆಲವೆಡೆ ಕಾಂಗ್ರೆಸ್, ಬಿಜೆಪಿ ಇನ್ನು ಕೆಲವೆಡೆ ಕಾಂಗ್ರೆಸ್, ಜೆಡಿಎಸ್ ಸ್ಪರ್ಧೆ ಇದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಬಿಜೆಪಿ, ಜೆಡಿಎಸ್ ಅಧಿಕಾರಕ್ಕೆ ಬಂದೇ ಬಿಟ್ಟೆವು ಎಂದು ಮಾತನಾಡುತ್ತಿದ್ದಾರೆ. ಯಡಿಯೂರಪ್ಪ ಸಿಎಂ ಅಂದರೆ ಕುಮಾರಸ್ವಾಮಿ ಕಿಂಗ್ ಮೇಕರ್ ಅಲ್ಲ ಕಿಂಗ್ ಎನ್ನುತ್ತಿದ್ದಾರೆ. ಏಳು ಜಿಲ್ಲೆಗಳಾದ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಕಳೆದ ಬಾರಿ ಬಿಜೆಪಿ ಶೂನ್ಯ. ಈಗ ದೊಡ್ಡ ಬದಲಾವಣೆ ಆಗಿದೆ ಎನಿಸುತ್ತಿಲ್ಲ. ಜೆಡಿಎಸ್ ಇಡೀ ಉತ್ತರ ಕರ್ನಾಟಕದಲ್ಲಿ ನಾಲ್ಕು ಸ್ಥಾನ ಮಾತ್ರ ಗೆದ್ದಿತ್ತು. ಆದ್ರೆ ಕೊಡಗು ಹೊರತು ಎಲ್ಲಾ ಕಡೆ ಕಾಂಗ್ರೆಸ್ ಗೆದ್ದಿದೆ. ಕರಾವಳಿ ಬಿಜೆಪಿಯ ಕೋಮುವಾದದ ಪ್ರಯೋಗಾಲಯ. ಕರಾವಳಿ, ಉತ್ತರ ಕನ್ನಡ ಭಾಗದಲ್ಲಿ ಕಳೆದ ಬಾರಿ ಬಿಜೆಪಿಗೆ ನಾಲ್ಕು ಸ್ಥಾನ ಸಿಕ್ಕಿತ್ತು. ಈಗ ಹೇಗೆ 19 ಬರುತ್ತೆ ಎಂದು ಪ್ರಶ್ನಿಸಿದರು.

ಮೋದಿ ಅವಲಂಬಿತ: ಬಿಜೆಪಿ ಬಹುವಾಗಿ ನರೇಂದ್ರ ಮೋದಿ ಮೇಲೆ ಅವಲಂಬಿತವಾಗಿದೆ. ಯಡಿಯೂರಪ್ಪ, ಅನಂತ್ ಕುಮಾರ್, ಅನಂತ್ ಕುಮಾರ್ ಹೆಗಡೆ, ಜಗದೀಶ್ ಶೆಟ್ಟರ್, ಈಶ್ವರಪ್ಪಗೆ ಫೇಸ್ ವ್ಯಾಲ್ಯು ಇಲ್ಲ. ಜನರ ಮೇಲೆ ಪ್ರಭಾವ ಬೀರುವ ಶಕ್ತಿ ಇವರಿಗಿಲ್ಲ. ಮೋದಿ ಈವರೆಗೆ ಏಳೆಂಟು ಬಾರಿ ಬಂದಿದ್ದಾರೆ. ಆರು ತಿಂಗಳಲ್ಲಿ, ಮೋದಿ ದೇಶದ ಪಿಎಂ ರೀತಿ ಮಾತನಾಡುತ್ತಾರೆ ಎಂದು ಕೊಂಡಿದ್ದೆವು. ಅವರ ಸಾಧನೆ, ನಮ್ಮ ವೈಫಲ್ಯದ ಬಗ್ಗೆ ಮಾತನಾಡುತ್ತಾರೆ ಅಂದುಕೊಂಡಿ ದ್ದೆವು. ಆದರೆ ಮೋದಿಯಾದಿಯಾಗಿ ಬಿಜೆಪಿಯ ಎಲ್ಲರೂ ಕೀಳುಭಾಷೆ ಬಳಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಟೀಕಿಸಲ್ಲ: ವೈಯಕ್ತಿಕವಾಗಿ ನಾನೇ ಯಾರನ್ನೂ ಟೀಕಿಸಿಲ್ಲ. ಅಸಂಸದೀಯ ಪದ ಬಳಸಿಲ್ಲ. ನನ್ನ ಮೇಲೆ ಬಳಸಿದಾಗ ಕಟುವಾದ ಪದಗಳಲ್ಲಿ ಪ್ರತಿಕ್ರಿಯೆ ನೀಡಿದ್ದೇನೆ. ಸಿಎಂ 2+1 ಎನ್ನುತ್ತಾರೆ, ಬಿಜೆಪಿಯವರೇ ಎರಡು ಕಡೆ ನಿಂತಿಲ್ಲವೇ ಅವರು ನಿಂತರೆ ಸ್ಟ್ರ್ಯಾಟಜಿ ನಾನು ನಿಂತರೆ ವಂಶ ಪಾರಂಪರ್ಯವಂತೆ. ಬಿಜೆಪಿಯಲ್ಲಿ ಅಪ್ಪ ಮಕ್ಕಳು ನಿಂತಿಲ್ಲವೇ? ಎಂದರು.

ರಾಜ್ಯದಲ್ಲಿ ಕಾಂಗ್ರೆಸ್: ಜೆಡಿಎಸ್ ಆರು ಏಳು ಜಿಲ್ಲೆಗಳಲ್ಲಿ ಫೈಟ್ ಮಾಡುತ್ತದೆ. ಹಾಗಾಗಿ ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಬರಲಿದೆ. ನಾವು ಕೊಟ್ಟ ಎಲ್ಲಾ ವಚನ ಈಡೇರಿಸಿದ್ದೇವೆ. ಅತ್ಯಂತ ಆತ್ಮವಿಶ್ವಾಸದಿಂದ ಅಧಿಕಾರಕ್ಕೆ ಬರುವುದಾಗಿ ಹೇಳುತ್ತಿದ್ದೇವೆ. ಕಳೆದ ಸಾರಿ ಬಿಜೆಪಿ, ಜೆಡಿಎಸ್ ತೋರಿಸಿದ ಸಾಧನೆ ಗಮನಿಸಿದರೆ ನಮ್ಮ ಗೆಲುವು ಖಚಿತ ಎಂದರು.

ಐಟಿ ದಾಳಿ ಬಗ್ಗೆ ಭಯವಿಲ್ಲ: ನನ್ನ ಬಳಿ ಏನೂ ಇಲ್ಲ, ದಾಳಿ ಮಾಡಲಿ ನನಗೇನು ಚಿಂತೆ ಇಲ್ಲ. ಐಟಿ ದಾಳಿ ವಿರೋಧಿಯಲ್ಲ. ದಾಳಿ ಮಾಡಲಿ ಅದಕ್ಕೆ ಆಕ್ಷೇಪಣೆ ಇಲ್ಲ, ಆ ಇಲಾಖೆ ಇರುವುದೇ ಅದಕ್ಕೆ, ಆದರೆ ಚುನಾವಣಾ ವೇಳೆ ದಾಳಿ ಮಾಡಿ ಹೆದರಿಸುತ್ತಿ ದ್ದಾರೆ, ಇದರ ಹಿಂದೆ ಮೋದಿ, ಶಾ ಇದ್ದಾರೆ ಎಂದು ದೂರಿದರು.

ನನಗೆ ಎರಡು ಕಡೆ ಸ್ಪರ್ಧೆ ಇಚ್ಛೆ ಇರಲಿಲ್ಲ, ನನಗೆ ಇದು 10ನೇ ಚುನಾವಣೆ. ಉತ್ತರ ಕರ್ನಾಟಕದ ಮುಖಂಡರು ಒತ್ತಾಯ ಮಾಡಿದರು. ಮನೆಗೆ ಬಂದು ಕುಳಿತರು. ಹೈಕಮಾಂಡ್ ಮೇಲೂ ಒತ್ತಡ ತಂದರು. ಹಾಗಾಗಿ ಎರಡು ಕಡೆ ಸ್ಪರ್ಧೆ. ಐದು ಬಾರಿ ಚಾಮುಂಡೇಶ್ವರಿಯಲ್ಲಿ ಗೆದ್ದಿದ್ದೇನೆ, ಆಗಲೂ ಅವರೇ ಪ್ರತಿಸ್ಪರ್ಧಿ ಇದ್ದರು. ಈಗಲೂ ಇದ್ದಾರೆ. ಅಗತ್ಯ ಅಂತರದಲ್ಲಿ ನಾನು ಗೆಲ್ಲುತ್ತೇನೆ ಎಂದು ವಿಶ್ವಾಸದಿಂದ ನುಡಿದರು.

Translate »