ಎಂಸಿಡಿಸಿಸಿ ಬ್ಯಾಂಕ್ ಚುನಾವಣೆ: ಲಾಟರಿ ಮೂಲಕ ಒಲಿದ ಅದೃಷ್ಟ!
ಚಾಮರಾಜನಗರ

ಎಂಸಿಡಿಸಿಸಿ ಬ್ಯಾಂಕ್ ಚುನಾವಣೆ: ಲಾಟರಿ ಮೂಲಕ ಒಲಿದ ಅದೃಷ್ಟ!

November 13, 2018

ಬಿಜೆಪಿ ಬೆಂಬಲಿತ ಅಭ್ಯರ್ಥಿ ಬಿ.ಜಿ. ನಾಗೇಂದ್ರಕುಮಾರ್‍ಗೆ ಜಯ
ಚಾಮರಾಜನಗರ: ಮೈಸೂರು-ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ (ಎಂಸಿಡಿಸಿಸಿ) ಬ್ಯಾಂಕ್‍ಗೆ ನ. 12 ರಂದು ನಡೆದ ಚುನಾವಣೆಯಲ್ಲಿ ಚಾ.ನಗರ ತಾಲೂಕು ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಬಾಣಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಬಿ.ಜಿ. ನಾಗೇಂದ್ರ ಕುಮಾರ್ ಲಾಟರಿ ಮೂಲಕ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಜಿಲ್ಲೆಯ ನಾಲ್ಕು ತಾಲೂಕು ಕ್ಷೇತ್ರಗಳಿಗೆ ನಡೆದ ಚುನಾವಣೆ ಯಲ್ಲಿ ಗುಂಡ್ಲುಪೇಟೆ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂ.ಪಿ. ಸುನೀಲ್ 19 ಮತಗಳನ್ನು ಪಡೆದು ಪುನರಾಯ್ಕೆ ಯಾಗಿದ್ದಾರೆ. ಕೊಳ್ಳೇಗಾಲ ಕ್ಷೇತ್ರದಿಂದ ಶಾಸಕ ಆರ್.ನರೇಂದ್ರ, ಯಳಂದೂರು ಕ್ಷೇತ್ರದಿಂದ ವೈ.ಎಂ. ಜಯರಾಮ್ ಅವಿ ರೋಧವಾಗಿ ಆಯ್ಕೆಯಾಗಿದ್ದರು.
ಮೈಸೂರಿನ ನಂಜರಾಜ ಬಹುದ್ದೂರ್ ಛತ್ರದಲ್ಲಿ ಇಂದು ನಡೆದ ಚುನಾವಣೆ ಹಾಗೂ ಮತ ಎಣಿಕೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ.ಎಂ. ಶಿವಶಂಕರ್ ಹಾಗೂ ಬಿ.ಜಿ. ನಾಗೇಂದ್ರ ಕುಮಾರ್ ತಲಾ 10 ಮತಗಳನ್ನು ಪಡೆದು ಸಮಬಲ ಹೋರಾಟ ನೀಡಿದ್ದರು. ನಂತರ ಚುನಾವಣಾಧಿಕಾರಿ ಲಾಟರಿ ಎತ್ತುವ ಮೂಲಕ ನಾಗೇಂದ್ರ ಕುಮಾರ್ ನಿರ್ದೇಶಕರಾಗಿ ಆಯ್ಕೆಯಾಗಿ ದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದರು.

ಬಳಿಕ ಮಾತನಾಡಿದ ನೂತನ ನಿರ್ದೇಶಕ ಬಿ.ಜಿ. ನಾಗೇಂದ್ರ ಕುಮಾರ್, ತಾಲೂಕಿನ ಎಲ್ಲಾ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ನಿರ್ದೇಶಕರಿಗೆ ಆಭಾರಿಯಾಗಿದ್ದಾನೆ. ಪ್ರಥಮ ಬಾರಿ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ನನ್ನನ್ನು ಗುರುತಿಸಿ ಮತ ಹಾಕಿದ ಎಲ್ಲಾ ಸಹಕಾರಿ ಬಂಧುಗಳಿಗೆ ಅಭಿನಂದನೆಗಳು. ನನಗೆ ಅವಕಾಶ ಮಾಡಿಕೊಟ್ಟ ಬಿಜೆಪಿ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನಪ್ಪ ಅವರಿಗೆ, ಗೆಲುವಿಗೆ ಸಹಕಾರ ನೀಡಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡರು, ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಸಿ. ಬಸವೇಗೌಡರು, ಯುವ ನಾಯಕ ಜಿ.ಡಿ.ಹರೀಶ್ ಗೌಡ ಹಾಗು ಜಿಲ್ಲೆಯ ಎಲ್ಲಾ ಬಿಜೆಪಿ ಪದಾಧಿಕಾರಿಗಳು ಹಾಗೂ ಮುಖಂಡರಿಗೆ ತುಂಬ ಹೃದಯ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಬ್ಯಾಂಕ್‍ನ ನಿರ್ದೇಶಕನಾಗಿ ತಾಲೂಕಿನ ಎಲ್ಲಾ ಸಹಕಾರ ಸಂಘಗಳಿಗೆ ಭೇಟಿ ನೀಡಿ, ಕುಂದುಕೊರತೆಗಳನ್ನು ಆಲಿಸುವ ಜೊತೆಗೆ ಎಲ್ಲಾ ರೈತರಿಗೆ ಸಾಲ ಸೌಲಭ್ಯವನ್ನು ಕಲ್ಪಿಸುವ ಬದ್ಧನಾಗಿದ್ದೇನೆ. ಎಲ್ಲಾ ಸಹಕಾರಿ ಧುರೀಣರ ಸಹಕಾರ ಪಡೆದುಕೊಂಡು ಹೆಚ್ಚಿನ ಸೌಲಭ್ಯವನ್ನು ಕಲ್ಪಿಸುವ ಗುರಿ ನನ್ನದಾಗಿದೆ ಎಂದರು.

ಸಂತೇಮಹರಳ್ಳಿ ಸಹಕಾರ ಸಂಘದ ಅಧ್ಯಕ್ಷ ಎಂ.ಪಿ. ತಮ್ಮಣ್ಣ ಮಾತನಾಡಿ, ನಾಗೇಂದ್ರ ಗೆಲುವು ಬಿಜೆಪಿಗೆ ಸಂತ ಜಯವಾಗಿದೆ. ನಾನು ಸೇರಿದಂತೆ ಉಮ್ಮತ್ತೂರು ನಾಗೇಶ್ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಅಭ್ಯರ್ಥಿಯ ನಿರ್ಲಕ್ಷ್ಯವನ್ನು ಖಂಡಿಸಿ ಬಿಜೆಪಿಗೆ ಸೇರ್ಪಡೆಯಾಗಿದ್ದು, ಅಭ್ಯರ್ಥಿಯ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ ಫಲವಾಗಿ ಅದೃಷ್ಟ ಲಕ್ಷ್ಮಿ ಒಲಿದಿದ್ದಾಳೆ ಎಂದು ತಿಳಿಸಿದರು. ತಾಪಂ ಮಾಜಿ ಸದಸ್ಯ ಉಮ್ಮತ್ತೂರು ನಾಗೇಶ್ ಮಾತನಾಡಿ, ಬಡ ಕುಟುಂಬದಿಂದ ಬಂದ ನಾಗೇಂದ್ರ ಕುಮಾರ್ ಗೆಲುವು ಸಹಕಾರಿ ಕ್ಷೇತ್ರಕ್ಕೆ ಸಂದ ಜಯವಾಗಿದೆ ಎಂದÀು ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷರಾದ ಬಾಗಳಿ ಮಲ್ಲೇಶ್, ಸುಂದ್ರಪ್ಪ, ತಾ.ಪಂ ಸದಸ್ಯ ರವೀಶ್, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಎನ್‍ರಿಚ್ ಮಹದೇವಸ್ವಾಮಿ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ತಮ್ಮಹಳ್ಳೀ ಶಿವಕುಮಾರ್, ಗ್ರಾಪಂ ಸದಸ್ಯ ಉಮ್ಮತ್ತೂರು ಶ್ರೀಕಂಠಸ್ವಾಮಿ, ಆಲೂರು ಸಹಕಾರ ಸಂಘದ ಅಧ್ಯಕ್ಷ ಮಹದೇವಸ್ವಾಮಿ (ಬೆಂಕಿ), ಹಳ್ಳಿಕೆರೆಹುಂಡಿ ರಾಚಪ್ಪ, ಬಿ.ಎಂ. ರವಿ, ದೇಶವಳ್ಳಿ ರಾಜು, ಟಗರಪುರ ಉಮೇಶ್, ರವಿ, ಬಾಣ ಹಳ್ಳಿ ಸಂತೋಷ, ಕಮರವಾಡಿ ಮಹಿ ಮೊದಲಾದವರು ಇದ್ದರು.

Translate »