ಚಾಮರಾಜನಗರ: ಎಂ.ಎಸ್. ಸ್ವಾಮಿನಾಥನ್ ವರದಿ ಜಾರಿಗೆ ಒತ್ತಾಯಿಸಿ ನಗರದಲ್ಲಿ ಭಾನುವಾರ ಕಬ್ಬು ಬೆಳೆಗಾರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಅಂಚೆ ಕಚೇರಿ ಮುಂಭಾಗದ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಸಮಾವೇಶ ಗೊಂಡ ರೈತರು ಹಾಗೂ ಕಬ್ಬು ಬೆಳೆ ಗಾರರ ಸಂಘದ ಪದಾಧಿಕಾರಿಗಳು ಹೆದ್ದಾರಿ ತಡೆದು, ಕೇಂದ್ರ ಹಾಗೂ ರಾಜ್ಯ ಸರ್ಕಾ ರದ ವಿರುದ್ಧ ಘೋಷಣೆ ಕೂಗಿದರು.
ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಹಳ್ಳಿ ಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ದೇಶದಲ್ಲಿ ರೈತರು ದಿನದಿಂದ ದಿನಕ್ಕೆ ಹಲವು ಸಂಕಷ್ಟಗಳಿಗೆ ತುತ್ತಾಗುತ್ತಿದ್ದು, ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ. ರೈತರು ಬೆಳೆದ ಪದಾರ್ಥಗಳಿಗೆ ವೈಜ್ಞಾನಿಕ ಬೆಲೆ ನಿಗದಿಯಾಗಿಲ್ಲ. ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ರೈತರು ಕಂಗಲಾಗಿದ್ದಾರೆ ಎಂದರು.
ರೈತರ ಬೆಳೆದ ಆಹಾರ ಪದಾರ್ಥಗಳ ಬೆಲೆ ನಿಗದಿಗೆ ಸ್ವಾಮಿನಾಥನ್ ಅವರು ಸೂಕ್ತ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ. ಈ ವರದಿಯಲ್ಲಿ ರೈತರ ಆಹಾರ ಉತ್ಪಾದನೆ ವೆಚ್ಚ, ಬೆಳೆದ ಪದಾರ್ಥಗಳಿಗೆ ಮಾರುಕಟ್ಟೆ ದರ ಒಂದೂ ವರೆಪಟ್ಟು ಹೆಚ್ಚು ಬೆಲೆ ನಿಗದಿ ಮಾಡು ವಂತೆ ಹೇಳಿದೆ. ಆದರೆ, ಕೇಂದ್ರ ಸರ್ಕಾರ ವರದಿ ಜಾರಿಗೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‍ಗೆ ಪ್ರಮಾಣಪತ್ರ ಸಲ್ಲಿಸಿ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ದೂರಿದರು.
ಕೇಂದ್ರ ಸರ್ಕಾರ ಕೂಡಲೇ ಎಂ.ಎಸ್. ಸ್ವಾಮಿನಾಥನ್ ವರದಿ ಜಾರಿ ಮಾಡಬೇಕು. ರೈತರ ಕೃಷಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಬೇಕು. ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಿ ರೈತರ ಆತ್ಮಹತ್ಯೆ ತಡೆಯಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಗ್ರಾಮ ಬಂದ್ ಚಳವಳಿಯು ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಮಹಾ ರಾಷ್ಟ್ರ, ದೆಹಲಿ ರಾಜ್ಯಗಳಲ್ಲಿ 10 ದಿನ ದಿಂದ ನಿರಂತರವಾಗಿ ನಡೆಯುತ್ತಿದ್ದು, ರೈತರು ನಗರ ಪ್ರದೇಶಗಳಿಗೆ ಹಾಲು, ಹಣ್ಣು, ತರಕಾರಿ ಪೂರೈಕೆ ಮಾಡದೇ ಕೇಂದ್ರ, ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಿ ದ್ದಾರೆ. ಈ ಚಳವಳಿ ದೇಶಾದ್ಯಂತ ವಿಸ್ತಾರ ವಾಗುವ ಮೊದಲೇ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಮೂಕಳ್ಳಿ ಮಹದೇವಸ್ವಾಮಿ, ಮೆಲ್ಲಹಳ್ಳಿ ಚಂದ್ರಶೇಖರ್, ಗುಂಡ್ಲುಪೇಟೆ ಗಂಗಾಧರಪ್ಪ, ನಾಗರಾಜ್‍ಚೌಡಳ್ಳಿ, ಪಟೇಲ್‍ಶಿವಶಂಕರ್, ಕುಂತೂರ್ ಪ್ರಭುಸ್ವಾಮಿ, ಬಾಣಹಳ್ಳಿ ಜಯಶಂಕರ್, ಕುಮಾರ್, ಕಾವುದವಾಡಿ ಶ್ರೀಕಂಠಮೂರ್ತಿ, ಕರಿನಂಜನಪುರ ಶಿವ ಶಂಕರ್, ಬಿ.ನಾಗರಾಜ್, ಮಲ್ಲಿ ಕಾರ್ಜುನಪ್ಪ ಪಾಲ್ಗೊಂಡಿದ್ದರು.