ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ: ಆರೋಗ್ಯ ಇಲಾಖೆ ವಿರುದ್ಧ ದೂರಿನ ಸುರಿಮಳೆ
ಚಾಮರಾಜನಗರ

ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ: ಆರೋಗ್ಯ ಇಲಾಖೆ ವಿರುದ್ಧ ದೂರಿನ ಸುರಿಮಳೆ

October 2, 2018
  • ಜಿಪಂನಿಂದ ಕಿರಿಯ ಮಹಿಳಾ ಆರೋಗ್ಯ ಸಹಾಯಕರ ನೇಮಕಕ್ಕೆ ಅಸ್ತು
  • ಅಂಗನವಾಡಿ ಕೇಂದ್ರಗಳಿಗೆ ಮೇಲ್ವಿಚಾರಕರ ನೇಮಿಸಲು ಕ್ರಮ: ಸಿಇಓ

ಚಾಮರಾಜನಗರ: ಉಪ ಆರೋಗ್ಯ ಕೇಂದ್ರಗಳಿಗೆ ಆರೋಗ್ಯ ಸಹಾಯಕರು ಬರುತ್ತಿಲ್ಲ… ಕೆಲವು ಉಪ ಆರೋಗ್ಯ ಕೇಂದ್ರಗಳು ಬಾಗಿಲನ್ನೇ ತೆರೆಯುವುದಿಲ್ಲ… ಜಿಲ್ಲೆಯ ಜನರಿಗೆ ಸಮರ್ಪಕವಾಗಿ ಆರೋಗ್ಯ ಸೇವೆ ದೊರೆಯುತ್ತಿಲ್ಲ…
-ಇದು ನಗರದ ಜಿಲ್ಲಾ ಪಂಚಾಯಿತಿ ಸಂಭಾಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಆರೋಗ್ಯ ಇಲಾಖೆಯ ವಿರುದ್ಧ ಜಿಪಂ ಸದಸ್ಯರು ದೂರಿನ ಸುರಿಮಳೆಗೈದರು.

ಸದಸ್ಯರಾದ ಕೆ.ಎಸ್.ಮಹೇಶ್, ಕೆರೆಹಳ್ಳಿ ನವೀನ್, ಇಶ್ರತ್‍ಬಾನು, ಚೆನ್ನಪ್ಪ ಅವರು ಮಾತನಾಡಿ, ಉಪ ಆರೋಗ್ಯ ಕೇಂದ್ರಗಳಿಗೆ ಕಿರಿಯ ಆರೋಗ್ಯ ಸಹಾಯಕರು ಬರುತ್ತಿಲ್ಲ. ಇದರಿಂದ ನಾಗರಿಕರಿಗೆ ಸಮರ್ಪಕವಾಗಿ ಆರೋಗ್ಯ ಸೇವೆ ದೊರೆಯುತ್ತಿಲ್ಲ. ಕೆಲವು ಉಪ ಆರೋಗ್ಯ ಕೇಂದ್ರಗಳು ಬಾಗಿಲು ತೆರೆದಿರುವುದನ್ನು ನಾವು ನೋಡಿಯೇ ಇಲ್ಲ. ಇದನ್ನು ಸರಿಪಡಿಸಲು ಅಗತ್ಯಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಚ್.ಪ್ರಸಾದ್ ಮಾತನಾಡಿ, ಜಿಲ್ಲೆಯಲ್ಲಿ 265 ಉಪ ಆರೋಗ್ಯ ಕೇಂದ್ರಗಳು ಇವೆ. ಅವುಗಳಲ್ಲಿ 112 ಕಿರಿಯ ಆರೋಗ್ಯ ಸಹಾಯಕರಿದ್ದಾರೆ. ಒಬ್ಬರು 3 ಉಪ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಸಮಸ್ಯೆ ಉಂಟಾಗುತ್ತಿದೆ. ಕಿರಿಯ ಆರೋಗ್ಯ ಸಹಾಯಕರನ್ನು ನೇಮಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.

ಸದಸ್ಯ ಕೆರೆಹಳ್ಳಿ ನವೀನ್ ಮಾತನಾಡಿ, ಹೊರಗುತ್ತಿಗೆ ಆಧಾರದಡಿ ಕಿರಿಯ ಮಹಿಳಾ ಆರೋಗ್ಯ ಸಹಾಯಕರನ್ನು ನೇಮಿಸಿಕೊಳ್ಳಲು ಅವಕಾಶ ಇದ್ದರೆ ನೇಮಿಸಿಕೊಳ್ಳುವಂತೆ ಸಲಹೆ ನೀಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಎಚ್‍ಒ ಪ್ರಸಾದ್ ಅವರು, ಜಿಪಂನಿಂದ ಕಿರಿಯ ಮಹಿಳಾ ಆರೋಗ್ಯ ಸಹಾಯಕರನ್ನು ನೇಮಿಸಿಕೊಳ್ಳಲು ಅವಕಾಶವಿದೆ. ಈ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಂಡರೆ ಮಾತ್ರ ಸಾಧ್ಯ ಎಂದರು. ಇದಕ್ಕೆ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು.

ಅಂಗನವಾಡಿ ಕೇಂದ್ರದಲ್ಲಿ 5ಕ್ಕಿಂತ ಕಡಿಮೆ ಮಕ್ಕಳಿದ್ದರೆ, ಆ ಅಂಗನವಾಡಿ ಕೇಂದ್ರವನ್ನು ಪಕ್ಕದ ಅಂಗನವಾಡಿ ಕೇಂದ್ರದೊಂದಿಗೆ ವಿಲೀನ ಮಾಡುವಂತೆ ಕಳೆದ ಸಭೆಯಲ್ಲಿ ನಿರ್ಣಹಿಸಲಾಗಿತ್ತು. ಈ ಬಗ್ಗೆ ತೆಗೆದುಕೊಂಡಿರುವ ಕ್ರಮಗಳೇನು? ಎಂದು ಸದಸ್ಯರು ಪ್ರಶ್ನಿಸಿದರು.

ಅಂಗನವಾಡಿ ಕಾರ್ಯಕರ್ತೆಯರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಮಕ್ಕಳನ್ನು ಕೇಂದ್ರಕ್ಕೆ ಕರೆತರುತ್ತಿಲ್ಲ. ಹೆಚ್ಚಿನ ಮಕ್ಕಳ ಹಾಜರಾತಿ ತೋರಿಸಲಾಗುತ್ತಿದೆ. ಈ ಬಗ್ಗೆ ಗಮನ ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದಕ್ಕೆ ಉತ್ತರಿಸಿದ ಸಿಇಓ ಡಾ.ಕೆ.ಹರೀಶ್‍ಕುಮಾರ್, ಬೇರೆ ಇಲಾಖೆಯ ಅಧಿಕಾರಿಗಳನ್ನು ಮೇಲ್ವಿಚಾರಕರಾಗಿ ನೇಮಿಸಲು ಕ್ರಮಕೈಗೊಳ್ಳಲಾವುದು ಎಂದು ತಿಳಿಸಿದರು.ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಜೆ.ಯೋಗೇಶ್ ಇದ್ದರು.

ಗಿರಿರಾಜಕೋಳಿ ವಿತರಣೆಯಲ್ಲಿ ಅವ್ಯವಹಾರ: ತನಿಖೆಗೆ ಒತ್ತಾಯ
ಚಾಮರಾಜನಗರ:  ಬಡವರಿಗೆ ನೀಡುವ ಗಿರಿರಾಜಕೋಳಿ ವಿತರಣೆಯಲ್ಲಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಸದಸ್ಯ ಕೆರೆಹಳ್ಳಿ ನವೀನ್ ಒತ್ತಾಯಿಸಿದರು.ಸಭೆಯಲ್ಲಿ ಮಾತನಾಡಿದ ಅವರು, ಪಶು ಸಂಗೋಪನೆ ಇಲಾಖೆಯು ಫಲಾನುಭವಿಗಳಿಗೆ ಗಿರಿರಾಜಕೋಳಿ ನೀಡುತ್ತಿದೆ. ಇದರಲ್ಲಿ ಅವ್ಯವಹಾರ ನಡೆದಿದೆ ಎಂದು ದೂರಿದರು.

ಪಶುಸಂಗೋಪನೆ ಇಲಾಖೆಯ ಉಪ ನಿರ್ದೇಶಕ ಡಾ.ಪದ್ಮನಾಭ ಮಾತನಾಡಿ, 12ಲಕ್ಷ ರೂ. ವೆಚ್ಚದಡಿ 14 ಸಾವಿರ ಗಿರಿರಾಜ ಕೋಳಿಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸದಸ್ಯ ನವೀನ್ ಅವರಿಂದ 100 ಕೋಳಿಗಳನ್ನು ವಿತರಿಸಲಾಗಿದೆ. ಇನ್ನೂ ಉಳಿದ 23 ಸದಸ್ಯರಿಂದ 2,300 ಕೋಳಿಗಳನ್ನು ವಿತರಿಸಲಾಗಿದೆ ಎಂದರು.

ಇದಕ್ಕೆ ಧ್ವನಿಗೊಡಿಸಿದ ಸದಸ್ಯರಾದ ಚೆನ್ನಪ್ಪ, ಬಾಲರಾಜು ಅವರು, ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದರು. ಸದಸ್ಯ ನವೀನ್ ಮಾತನಾಡಿ, ಮಾರುಕಟ್ಟೆಯಲ್ಲಿ ಗಿರಿರಾಜ ಕೋಳಿಯೊಂದಕ್ಕೆ 45 ರೂ. ಇದೆ. ಆದರೆ, ಇಲಾಖೆ ಅವರು 12 ಲಕ್ಷ ವೆಚ್ಚದಡಿ 14 ಸಾವಿರ ಕೋಳಿ ಖರಿದೀಸಲಾಗಿದೆ ಎಂದಿದ್ದಾರೆ. ಆ ಪ್ರಕಾರ 1 ಕೋಳಿಗೆ 85.71ರೂ ನೀಡಲಾಗಿದೆ. ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು ದರ ನೀಡಿರುವುದು ನೋಡಿದರೆ ಇಲಾಖೆಯಲ್ಲಿ ಅವ್ಯವಹಾರ ನಡೆದಿರುವುದು ತಿಳಿಯುತ್ತದೆ. ಹಾಗಾಗಿ, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಸಿಇಓ ಡಾ.ಕೆ.ಹರೀಶ್‍ಕುಮಾರ್ ಮಾತನಾಡಿ, 14 ಸಾವಿರ ಕೋಳಿಗಳನ್ನು ಯಾರ ಮೂಲಕ ಯಾವ ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂಬುದರ ಬಗ್ಗೆ ಮಾಹಿತಿ ನೀಡಬೇಕು. ಇಲ್ಲದಿದ್ದರೆ ತನಿಖೆಗೆ ಆದೇಶಿಸಲಾಗುವುದು ಎಂದು ಎಚ್ಚರಿಸಿದರು.

Translate »