ಮೇಲುಕೋಟೆ: ಮೇಲುಕೋಟೆಯಲ್ಲಿರುವ ಐತಿಹಾಸಿಕ ಕಲ್ಯಾಣಿಗಳು ಮತ್ತು ಕೊಳಗಳನ್ನು ಸಮಗ್ರವಾಗಿ ಜೀರ್ಣೋದ್ಧಾರ ಮಾಡಲು ತಕ್ಷಣ ಮಾಸ್ಟರ್ ಪ್ಲಾನ್ ತಯಾರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಸಣ್ಣ ನೀರಾವರಿ ಇಲಾಖೆಯ ರಾಜ್ಯಮಟ್ಟದ ಅಧಿಕಾರಿಗಳೊಂದಿಗೆ ಸೋಮವಾರ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ವಿವಿಧ ಕೆರೆಗಳು, ಪಿಕಪ್ ಡ್ಯಾಂ ನಿರ್ಮಾಣದ ಸ್ಥಳಗಳನ್ನು ಪರಿಶೀಲಿಸಿದ ಸಚಿವರು, ನಂತರ ಮೇಲುಕೋಟೆ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸಿ ಸೂಚನೆ ನೀಡಿದರು.
ತಿರುಪತಿ ಮಾದರಿಯಲ್ಲಿ ಕಲ್ಯಾಣಿ ಮತ್ತು ಕೊಳಗಳಲ್ಲಿ ಸಂಗ್ರಹವಾಗುವ ನೀರನ್ನು ಶುದ್ಧೀಕರಣ ಮಾಡಲು ಪ್ಲಾನ್ ತಯಾರಿಸಿ ಮೇಲುಕೋಟೆಯ ಕೊಳಗಳನ್ನು ಉಳಿಸಿ ಸಂರಕ್ಷಿಸುವ ಕಾರ್ಯ ಶೀಘ್ರವಾಗಿ ಆರಂಭಿಸಬೇಕು ಎಂದರು.
ಇದೇ ವೇಳೆ ಮೇಲುಕೋಟೆ ಕೊಳಗಳ ಜೀಣೋದ್ಧಾರಕ್ಕೆ ತಗಲುವ ಅಂದಾಜು ವೆಚ್ಚದ ಯೋಜನೆ ನೀಡಲು ತಡವರಿಸಿದ ಪಾಂಡವಪುರ ಎಂ.ಐನ ಎಇ ಪ್ರಕಾಶ್ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ರಾಜ್ಯ ಪುರಾತತ್ವ ಇಲಾಖೆ ಅಧಿಕಾರಿಗಳ ಸಹಕಾರದಲ್ಲಿ ತಕ್ಷಣ ಯೋಜನೆಯ ನೀಲಿನಕ್ಷೆ ಮತ್ತು ಅಂದಾಜು ಪಟ್ಟಿ ಸಿದ್ಧಪಡಿಸಿ. ಈ ಕೆಲಸ ಆಗದಿದ್ದರೆ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಂತರ ಸಭೆಗೆ ಮಾಹಿತಿ ನೀಡಿದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮೇಲುಕೋಟೆಯಲ್ಲಿ 80 ಕೊಳಗಳು, ಒಕ್ಕರಣೆ ಮತ್ತು ಭಾವಿಗಳಿದ್ದು, 19 ಕೊಳಗಳು ಮತ್ತು ಪ್ರಖ್ಯಾತ ಪಂಚಕಲ್ಯಾಣಿ ಉತ್ತಮವಾಗಿದೆ. ಇನ್ನಿತರ ಕೊಳಗಳ ಜೀರ್ಣೋದ್ಧಾರಕ್ಕೆ ಅಂದಾಜು 30 ಕೋಟಿ ರೂ. ವೆಚ್ಚವಾಗಬಹುದು. ಬಳಿಘಟ್ಟ ಏತ ನೀರಾವರಿ ಯೋಜನೆಗೆ 30 ಕೋಟಿ ರೂ.ಗಳ ಪ್ರಾಥಮಿಕ ಅಂದಾಜುಪಟ್ಟಿ ಸಿದ್ಧಪಡಿಸಲಾಗಿದೆ ಎಂದರು.
ಕಣಿವೆ ಬಳಿಯ ಹೊಸಕೆರೆ ಸಂಗ್ರಹ ಸಾಮಥ್ರ್ಯ ಹೆಚ್ಚಿಸಿ ಕೆರೆಯನ್ನು ಸಣ್ಣ ಡ್ಯಾಂ ಮಾದರಿ ಬದಲಾಯಿಸಿ ಪ್ರವಾಸಿ ತಾಣವನ್ನಾಗಿಯೂ ಅಭಿವೃದ್ಧಿ ಪಡಿಸಲಾಗುತ್ತಿದೆ. ಈಗಿರುವ ರಸ್ತೆ ಮಾರ್ಗವನ್ನು ಪಕ್ಕಕ್ಕೆ ಬದಲಾವಣೆ ಮಾಡಲಾಗುತ್ತದೆ ಎಂದರು.
ಅಧಿಕಾರಿಗಳಿಂದ ವಿವಿಧ ನೀರಾವರಿ ಯೋಜನೆಗಳ ಬಗ್ಗೆ ಮಾಹಿತಿ ಪಡೆದ ಸಚಿವರು, ಮೇಲುಕೋಟೆ ಕ್ಷೇತ್ರದ ವಿವಿಧ ಗ್ರಾಮಗಳ ಕೆರೆಗಳು, ಪಿಕಪ್ ಡ್ಯಾಂ ಅಭಿವೃದ್ಧಿ ಬಗ್ಗೆಯೂ ಯೋಜನೆ ತಯಾರಿಸಿ ಹಣದ ಬಗ್ಗೆ ಚಿಂತಿಸಬೇಡಿ. ಸಮಗ್ರ ಯೋಜನೆಯನ್ನು ಮುಂದಿನ ಸಚಿವ ಸಂಪುಟದಲ್ಲಿ ಮಂಡಿಸಿ ಅನುಮೋದನೆ ಪಡೆದು ಕೆಲಸ ಮಾಡೋಣ ವೇಗವಾಗಿ ರೈತರ ಪರ ಕೆಲಸಮಾಡಿ ಎಂದರು.
ಸಭೆಗೂ ಮುನ್ನ ಶಾದನಹಳ್ಳಿ ಏತ ನೀರಾವರಿ ಯೋಜನೆ, ಕೆರೆತೊಣ್ಣೂರು ಕೆಳಭಾಗದ ಪಿಕಪ್ ಡ್ಯಾಂ, ದೊಡ್ಡಭೋಗನಹಳ್ಳಿ, ಸಣಬ, ಮಾರ್ಮಳ್ಳಿ, ಸಂಗಾಪುರ ಕೆರೆಗಳನ್ನು ಅಭಿವೃದ್ಧಿ ಮಾಡುವ ಸಂಬಂಧ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿದರು.
ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಮೃತ್ಯುಂಜಯಸ್ವಾಮಿ, ದಕ್ಷಿಣ ವಿಭಾಗದ ಮುಖ್ಯ ಇಂಜಿನಿಯರ್ ರವೀಂದ್ರ, ಅಧೀಕ್ಷಕ ಶಶಿಧರ್ ಸೇರಿದಂತೆ ಸಣ್ಣ ನೀರಾವರಿ ಇಲಾಖೆಯ ಹಲವು ಅಧಿಕಾರಿಗಳು ಭಾಗವಹಿಸಿದ್ದರು.
ದೇವಾಲಯಕ್ಕೆ ಭೇಟಿ: ಇದೇ ವೇಳೆ ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ಆಗಮಿಸಿದ ಸಚಿವ ಸಿ.ಎಸ್.ಪುಟ್ಟರಾಜು ದೇವರ ದರ್ಶನ ಪಡೆದರು. ವಿದ್ವಾನ್ ಬಿ.ವಿ. ಆನಂದಾಳ್ವಾರ್, ವಾದ್ಯಾರ್ ತಿರುಮಲೈ, ಗ್ರಾಪಂ ಸದಸ್ಯ ಅವ್ವಗಂಗಾಧರ್, ಕಾಡೇನಹಳ್ಳಿ ರಾಮಚಂದ್ರು, ಬಾಲಕೃಷ್ಣ ಇತರ ಮುಖಂಡರು ಹಾಜರಿದ್ದು ಸಚಿವರನ್ನು ಬರಮಾಡಿಕೊಂಡರು.