ಹೂವಿನ ಹಾರ ಹಾಕುವವರು, ಕಲ್ಲು ಹೊಡೆಯುವವರು ಇರುತ್ತಾರೆ ರಾಜಕೀಯದಲ್ಲಿ ಇವೆಲ್ಲಾ ಸಹಜ: ಡಿಕೆಶಿ
News

ಹೂವಿನ ಹಾರ ಹಾಕುವವರು, ಕಲ್ಲು ಹೊಡೆಯುವವರು ಇರುತ್ತಾರೆ ರಾಜಕೀಯದಲ್ಲಿ ಇವೆಲ್ಲಾ ಸಹಜ: ಡಿಕೆಶಿ

March 29, 2021

ಬೆಳಗಾವಿ,ಮಾ.28- ರಾಜಕೀಯದಲ್ಲಿ ಇದೆಲ್ಲಾ ಸಹಜ. ನಮಗೆ ಹೂವಿನ ಹಾರ ಹಾಕುವವರೂ ಇರುತ್ತಾರೆ, ಕಲ್ಲು ಹೊಡೆಯುವವರೂ ಇರುತ್ತಾರೆ. ಅದೇಕೆ, ಹಿಂದೆ ಮೊಟ್ಟೆ ಎಸೆಯುತ್ತಿದ್ದರು. ಹಾಗೆಯೇ ಇನ್ನೂ ಕೆಲವು ಸಂದರ್ಭದಲ್ಲಿ ಹೂವು, ಸೇಬಿನ ಹಾರವನ್ನು ಹಾಕುತ್ತಾರೆ ಎಂದು ಇಂದು ಬೆಳಗಾವಿಯಲ್ಲಿ ತಮಗೆ ಸಿಕ್ಕ ಪ್ರತಿಭಟನೆ ಸ್ವಾಗತಕ್ಕೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಪ್ರತಿಭಟನೆ ಮೂಲಕ ನನಗೆ ಸ್ವಾಗತ ಮಾಡುತ್ತಿರುವುದಕ್ಕೆ ನನಗೆ ಬಹಳ ಸಂತೋಷವಾಗುತ್ತಿದೆ. ಅವರ ಸ್ವಾಗತ ಪ್ರೀತಿ ವಿಶ್ವಾಸಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಇಂತಹ ಸ್ವಾಗತವೇ ನಮಗೆ ದೊಡ್ಡ ಶಕ್ತಿಯಾಗುತ್ತದೆ. ಅವರು ಎಂತೆಂಥಾ ಘನ ಕಾರ್ಯಕ್ಕೆ ಈ ಸ್ವಾಗತ ಮಾಡುತ್ತಿದ್ದಾರೆ ಗೊತ್ತಾ? ಎಂದು ಲೇವಡಿ ಮಾಡಿದರು.

ಬೆಳಗಾವಿ ಉಪ ಚುನಾವಣೆ ಬರಬಾರದಿತ್ತು. ಆಕಸ್ಮಿಕವಾಗಿ ಸುರೇಶ್ ಅಂಗಡಿ ಅವರ ನಿಧನದಿಂದ ಅನಿವಾರ್ಯವಾಗಿದೆ. ಕಾಂಗ್ರೆಸ್ ಇಡೀ ಕ್ಷೇತ್ರದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡುತ್ತಿದ್ದು, ಶ್ರೀಮತಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ನಾಯಕರಾದ ಎಂ.ಬಿ. ಪಾಟೀಲ್, ರಾಮಲಿಂಗಾರೆಡ್ಡಿ, ದೇಶಪಾಂಡೆ, ನಾನೂ ಸೇರಿದಂತೆ ಈ ಭಾಗದ ಎಲ್ಲಾ ನಾಯಕರು ಸತೀಶ್ ಜಾರಕಿಹೊಳಿಯವರ ಹೆಸರನ್ನು ಸೂಚಿಸಿದ್ದೇವೆ. ಹಾಗಾಗಿ ಪಕ್ಷದ ಅಭ್ಯರ್ಥಿಯಾಗಿ ಅವರು, ನಾಳೆ ಬೆಳಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಸುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಾವು ಬಂದಿರುವುದಾಗಿ ತಿಳಿಸಿದರು. ಜನಸಾಮಾನ್ಯರು ಹಾಗೂ ಎಲ್ಲಾ ವರ್ಗದ ಜನರೊಂದಿಗೆ ಹೊಂದಿಕೊಂಡು ಬಾಳುವ ಸೌಜನ್ಯ ಹಾಗೂ ಸಜ್ಜನ ಸತೀಶ್ ಜಾರಕಿಹೊಳಿ ಯವರನ್ನು ಸಂಸತ್‍ಗೆ ಕಳುಹಿಸಬೇಕೆಂದು ಇಡೀ ಬೆಳಗಾವಿಯ ಜನ ಆಶೀರ್ವಾದ ಮಾಡುತ್ತಿದ್ದಾರೆ. ಕರ್ನಾಟಕದಿಂದ 25 ಮಂದಿ ಬಿಜೆಪಿಯವರು ಸಂಸತ್‍ಗೆ ಹೋಗಿದ್ದರೂ, ಒಂದು ದಿನವೂ ಅವರು ರಾಜ್ಯದ ಪರ ದನಿ ಎತ್ತಲಿಲ್ಲ.

ಇರಲಿ, ರಾಜ್ಯದಿಂದ ಕಾಂಗ್ರೆಸ್‍ನ 2ನೇ ಸಂಸದರಾಗಿ ಸತೀಶ್ ಜಾರಕಿಹೊಳಿ ಆಯ್ಕೆ ಯಾಗುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸರ್ಕಾರದ ವೈಫಲ್ಯ: ಬಿಜೆಪಿ ಸರ್ಕಾರದ ವೈಫಲ್ಯವೇ ಕಾಂಗ್ರೆಸ್ ಪಕ್ಷದ ಯಶಸ್ಸಾಗುತ್ತದೆ. ನುಡಿದಂತೆ ನಡೆಯಲು ಬಿಜೆಪಿ ಸರ್ಕಾರದಿಂದ ಸಾಧ್ಯವಾಗಲಿಲ್ಲ. ಕೊರೊನಾ ಸಂದರ್ಭ ದಲ್ಲಿ ಕೊಟ್ಟ ಮಾತಿನಂತೆ ನಡೆಯಲಿಲ್ಲ. 20 ಲಕ್ಷ ಕೊಟ್ಟಿದ್ದೇವೆ ಎಂದು ಹೇಳುತ್ತಾರೆ. ಆದರೆ, ಅದು ಒಬ್ಬರಿಗೂ ತಲುಪಲಿಲ್ಲ. ಎಲ್ಲಾ ವರ್ಗದ ಜನರಿಗೂ ಒಂದು ತಿಂಗಳು ಸಾವಿರ ಕೊಡುವುದಾಗಿ ಹೇಳಿದ್ದರು. ಅದರಂತೆ ಚಾಲಕರು, ರೈತರು, ಸವಿತಾ ಸಮಾಜದವರು, ನೇಯ್ಗೆಯವರು, ಬಟ್ಟೆ ಹೊಲಿಯುವವರು ಯಾರಿಗೂ ತಲುಪಿಲ್ಲ.

ಯುವಕರು ಉದ್ಯೋಗ ಕೇಳಿದರೆ, ಪಕೋಡಾ ಮಾರಿ ಎನ್ನುತ್ತಾರೆ. ಅಡುಗೆ ಅನಿಲದಿಂದ ಮಹಿಳೆಯರು ಸಂಕಷ್ಟಕ್ಕೀಡಾಗಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆಯಿಂದ ಜನರು ತತ್ತರಿಸಿದ್ದಾರೆ. ಕೊರೊನಾ ಭ್ರಷ್ಟಾಚಾರ ಆಡಳಿತ ವೈಫಲ್ಯದಿಂದ ಬೇಸತ್ತಿರುವ ಜನರೇ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Translate »