ಮೈಸೂರಲ್ಲಿ ಮತ್ತೆ ನಾಲ್ವರಿಗೆ ಸೋಂಕು
ಮೈಸೂರು

ಮೈಸೂರಲ್ಲಿ ಮತ್ತೆ ನಾಲ್ವರಿಗೆ ಸೋಂಕು

April 20, 2020

ಮೈಸೂರು,ಏ.19(ಎಂಟಿವೈ)-ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮೈಸೂರು, ರಾಜಧಾನಿ ಬೆಂಗಳೂರನ್ನು ಮೀರಿ ಸುವತ್ತ ದಾಪುಗಾಲಿಟ್ಟಿದ್ದು, ಸಾರ್ವಜನಿಕರ ಆತಂಕ ಹೆಚ್ಚಿಸಿದೆ.

ಮೈಸೂರು ಜಿಲ್ಲೆಯಲ್ಲಿ ನೊವೆಲ್ ಕೊರೊನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಭಾನು ವಾರವೂ ಜಿಲ್ಲೆಯ ನಾಲ್ವರಲ್ಲಿ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿನ ಸೋಂಕಿತರ ಒಟ್ಟು ಸಂಖ್ಯೆ 84ಕ್ಕೆ ಏರಿಕೆಯಾಗಿದೆ.

ನಂಜನಗೂಡಿನ ಜುಬಿಲಂಟ್ ಕಾರ್ಖಾನೆ ಹಾಗೂ ದೆಹಲಿಯ ತಬ್ಲಿಘಿ ಜಮಾತ್ ಮೂಲದಿಂದ ಮೈಸೂರಲ್ಲಿ ಕೊರೊನಾ ನಂಜು ಹರಡಿದೆ. ಭಾನುವಾರ ದೃಢಪಟ್ಟ 4 ಪ್ರಕರಣಗಳಲ್ಲಿ ಜುಬಿಲಂಟ್ ಕಾರ್ಖಾನೆ ಉದ್ಯೋಗಿ ಹಾಗೂ ಮತ್ತೊಬ್ಬ ಉದ್ಯೋಗಿಯ ಕುಟುಂಬ ಸದಸ್ಯೆಯಾಗಿ ದ್ದಾರೆ. ಉಳಿದಿಬ್ಬರು ತಬ್ಲಿಘಿ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡಿದ್ದವರು. ತಬ್ಲಿಘಿ ಮೂಲದ ಸೋಂಕಿತರಲ್ಲಿ ಓರ್ವ 20 ವರ್ಷದ ಯುವಕ. ಮತ್ತೊಬ್ಬರು 46 ವರ್ಷದ ಮಧ್ಯ ವಯಸ್ಕರಾಗಿದ್ದಾರೆ. ಜುಬಿಲಂಟ್ ನೌಕರರೊಬ್ಬರ ಕುಟಂಬದ 23 ವರ್ಷದ ಮಹಿಳೆ ಹಾಗೂ ಮತ್ತೊಬ್ಬ 40 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ. ಈ ವ್ಯಕ್ತಿಗೆ ಜುಬಿಲಂಟ್ ನೌಕರ ಪಿ-52ರ ದ್ವಿತೀಯ ಸಂಪರ್ಕದಿಂದ ಸೋಂಕು ತಗುಲಿರುವುದು ಆತಂಕ ಹೆಚ್ಚಿಸಿದೆ. ಶನಿವಾರ ದೃಢಪಟ್ಟ 9 ಪ್ರಕರಣಗಳಲ್ಲಿ 8 ಮಂದಿಗೆ ದ್ವಿತೀಯ ಸಂಪರ್ಕ ದಿಂದಲೇ ಸೋಂಕು ತಗುಲಿದ್ದನ್ನು ಇಲ್ಲಿ ಸ್ಮರಿಸಬಹುದು.

ಮೈಸೂರು ಜಿಲ್ಲೆಯ ಒಟ್ಟು 84 ಸೋಂಕಿತರಲ್ಲಿ 70 ಪ್ರಕರಣಗಳು ಜುಬಿಲಂಟ್ ಕಾರ್ಖಾನೆ, 10 ಪ್ರಕರಣಗಳು ದೆಹಲಿ ತಬ್ಲಿಘಿ ನಂಟಿನವು. ಉಳಿದ 2 ಪ್ರಕರಣ ವಿದೇಶ ಪ್ರವಾಸದಿಂದ ಬಂದವರು. ಮತ್ತೆರಡು SARI (Severe Acute Respiratory Illness) ಪ್ರಕರಣಗಳು. ಈ ಇಬ್ಬರೂ ಹೃದಯ ಸಂಬಂಧಿ ಸಮಸ್ಯೆಯುಳ್ಳವರಾಗಿದ್ದು, ಒಬ್ಬರು ಜುಬಿಲಂಟ್ ಮೂಲದವರ ಸಂಪರ್ಕ ಹೊಂದಿರ ಬಹುದು ಎಂದು ಹೇಳಲಾಗಿದೆ. ಈ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಮೈಸೂರಿನಲ್ಲಿ ಜುಬಿಲಂಟ್ ಹಾಗೂ ತಬ್ಲಿಘಿ ಮೂಲದ ಶಂಕಿತರು, ಅವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಬಗ್ಗೆ ಜಿಲ್ಲಾಡಳಿತ ನಿಗಾ ವಹಿಸಿದೆ. ಹೆಚ್ಚು ಪರೀಕ್ಷೆಯನ್ನೂ ನಡೆಸಲಾಗುತ್ತಿದೆ. ಪರಿಣಾಮ ಸೋಂಕಿತ ಪ್ರಕರಣಗಳೂ ಹೆಚ್ಚು ದಾಖಲಾಗುತ್ತಿವೆ. ಈ ಬಗ್ಗೆ ಆತಂಕಪಡುವುದಕ್ಕಿಂತ ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದೆ. ಜುಬಿಲಂಟ್ ಹಾಗೂ
ತಬ್ಲಿಘಿ ಮೂಲದಿಂದ ಮೈಸೂರು ನಗರದ ಹಲವು ಬಡಾವಣೆಗಳಲ್ಲೂ ಸೋಂಕಿತರಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು. ಅನಗತ್ಯವಾಗಿ ಓಡಾಡದೆ ಮನೆಯಲ್ಲೇ ಸುರಕ್ಷಿತವಾಗಿರಬೇಕು.

2148 ಮಂದಿ ಕ್ವಾರಂಟೇನ್: ಮೈಸೂರು ಜಿಲ್ಲೆಯಲ್ಲಿ ಈವರೆಗೂ 4501 ಮಂದಿಯನ್ನು 14 ದಿನಗಳ ಹೋಮ್ ಕ್ವಾರಂಟೈನ್‍ನಲ್ಲಿರಿಸಿದ್ದು, ಅವರಲ್ಲಿ 2293 ಮಂದಿಯ ಕ್ವಾರಂಟೈನ್ ಅವಧಿ (14 ದಿನ) ಪೂರ್ಣಗೊಂಡಿದೆ. ಪ್ರಸ್ತುತ 2148 ಮಂದಿ ಇನ್ನೂ ಕ್ವಾರಂಟೈನ್ ನಲ್ಲಿದ್ದಾರೆ. ಈವರೆಗೆ 2261 ಮಂದಿಯ ಕಫ, ಗಂಟಲಿನ ದ್ರವ ಪರೀಕ್ಷೆ ಮಾಡಲಾಗಿದೆ. ಅವರಲ್ಲಿ 2177 ಮಂದಿಯ ಸ್ಯಾಂಪಲ್ ನೆಗೆಟಿವ್ ಆಗಿದ್ದರೆ, 84 ಮಂದಿಯದು ಪಾಸಿಟಿವ್ ಆಗಿದೆ. ಭಾನುವಾರ ರಾಜ್ಯದಲ್ಲಿ ವರದಿಯಾದ 6 ಪ್ರಕರಣಗಳಲ್ಲಿ ಮೈಸೂರಿನ 4 ಹಾಗೂ ದಕ್ಷಿಣ ಕನ್ನಡದಲ್ಲಿ 2 ಪ್ರಕರಣ ದಾಖಲಾಗಿವೆ. ಉಳಿದ ಯಾವ ಜಿಲ್ಲೆಯಲ್ಲೂ ಕೊರೊನಾ ಪ್ರಕರಣ ದೃಢಪಟ್ಟಿಲ್ಲ.

ಮತ್ತೆ ಮೂರು?: ನಂಜನಗೂಡು ತಾಲೂಕಿನ ದೇವರಸನಹಳ್ಳಿ, ಕೂಗಲೂರು ಹಾಗೂ ಬೇಳಾರು ಗ್ರಾಮಗಳಲ್ಲಿ ಜುಬಿಲಂಟ್ ಮೂಲದವರಲ್ಲಿ ಸೋಂಕು ದೃಡಪಟ್ಟಿದೆ ಎನ್ನಲಾಗುತ್ತಿದೆಯಾದರೂ ಜಿಲ್ಲಾಡಳಿತ ಈವರೆಗೆ ದೃಢಪಡಿಸಿಲ್ಲ.

ಅಧಿಕಾರಿಗಳ ಬಗ್ಗೆ ಅಸಮಾಧಾನ: ಮೈಸೂರು ತಾಲೂಕಿನ ಮೊಸಂಬಾಯನಹಳ್ಳಿಯ ವ್ಯಕ್ತಿಗೆ ಕೊರೊನಾ ಸೋಂಕಿರುವುದು ಶನಿವಾರ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರ ಕುಟುಂಬದ 6 ಮಂದಿಯನ್ನು ಹೋಂ ಕ್ವಾರಂಟೈನ್‍ಗೆ ಬೇರೆಡೆಗೆ ಶಿಫ್ಟ್ ಮಾಡಲಾಗಿದೆ. ಇವರೆಲ್ಲರನ್ನೂ ಒಂದೇ ಆಂಬುಲೆನ್ಸ್‍ನಲ್ಲಿ ಕರೆತಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಒಬ್ಬರಿಗೆ ಸೋಂಕಿದ್ದರೆ ಎಲ್ಲರಿಗೂ ಹರಡುವುದಿಲ್ಲವೇ? ಎಂದು ಸಾರ್ವಕನಿಕರು, ಆರೋಗ್ಯಾಧಿಕಾರಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ 6 ಮಂದಿಗೆ ಸೋಂಕು ಮಹಾಮಾರಿಗೆ ಇಬ್ಬರು ಬಲಿ: ಸತ್ತವರ ಸಂಖ್ಯೆ 16ಕ್ಕೇರಿಕೆ
ಬೆಂಗಳೂರು, ಏ.19- ರಾಜ್ಯದಲ್ಲಿ ಇಂದು ಆರು ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 390ಕ್ಕೆ ಏರಿಕೆಯಾಗಿದೆ. ಮೈಸೂರಿನಲ್ಲಿ 4, ದಕ್ಷಿಣ ಕನ್ನಡದಲ್ಲಿ ಎರಡು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಿನ 65 ವರ್ಷದ ಮಹಿಳೆ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕಸಬಾ ಗ್ರಾಮದ 50 ವರ್ಷದ ಮಹಿಳೆ ಕೊರೊನಾಗೆ ಇಂದು ಬಲಿಯಾಗಿದ್ದು, ರಾಜ್ಯದಲ್ಲಿ ಸಾವಿನ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.

ಸೋಂಕಿತರ ವಿವರ: ರೋಗಿ-385: 46 ವರ್ಷದ ಪುರುಷ, ಮೈಸೂರು ನಿವಾಸಿ, ರೋಗಿ- 386: 20 ವರ್ಷದ ಯುವಕ, ಮೈಸೂರು ನಿವಾಸಿ. ಈ ಇಬ್ಬರೂ ದೆಹಲಿಗೆ ಪ್ರಯಾಣ ಮಾಡಿದ್ದರು. ರೋಗಿ- 387: 39 ವರ್ಷದ ಪುರುಷ, ಮೈಸೂರಿನ ನಂಜನಗೂಡು ನಿವಾಸಿ. ರೋಗಿ ನಂಬರ್ 52ರ ದ್ವಿತೀಯ ಸಂಪರ್ಕದಿಂದ ಹಾಗೂ ರೋಗಿ- 388: 23 ವರ್ಷದ ಯುವತಿ, ಮೈಸೂರಿನ ನಂಜನಗೂಡು ನಿವಾಸಿ. ರೋಗಿ ನಂಬರ್ 319ರ ಸಂಪರ್ಕದಿಂದ ಸೋಂಕು ತಗುಲಿದೆ. ರೋಗಿ- 389: 30 ವರ್ಷದ ಮಹಿಳೆ, ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ನಿವಾಸಿ. ರೋಗಿ ನಂಬರ್ 325ರ ಪತ್ನಿ. ರೋಗಿ- 390: 50 ವರ್ಷದ ಮಹಿಳೆ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ್ ಕಸಬಾ ನಿವಾಸಿ, ತೀವ್ರ ಉಸಿರಾಟದ ತೊಂದರೆ.

ರೋಗಿ ನಂಬರ್ 281 ಮಹಿಳೆ ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇನ್ನು ರೋಗಿ ನಂಬರ್ 390, 50 ವರ್ಷದ ಮಹಿಳೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ್ ನಿವಾಸಿಯಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

Translate »